ವಾಮಂಜೂರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಕ್ಕೊತ್ತಾಯ ಪಾದಯಾತ್ರೆ

ಮಂಗಳೂರು: ಸರಕಾರಿ ಆಸ್ಪತ್ರೆ ಉಳಿಸಿ ಹೋರಟ ಸಮಿತಿ ವಾಮಂಜೂರು ಇದರ ನೇತೃತ್ವದಲ್ಲಿ ಆರೋಗ್ಯ ಸಂಬಂಧಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಕ್ಕೊತ್ತಾಯ ಪಾದಯಾತ್ರೆ ನಡೆಯಿತು. ತಾರಿಗುಡ್ಡೆ ಪರಿಸರದಲ್ಲಿ ಆರಂಭಗೊಂಡ ಈ ಪಾದಯಾತ್ರೆಯಲ್ಲಿ ನೂರಾರು ಮಂದಿ ವಾಮಂಜೂರು ಜಂಕ್ಷನ್ ವರೆಗೂ ನಡೆದು ಸರ್ಕಾರದ ಗಮನ ಸೆಳೆದರು.

ವಾಮಂಜೂರು ಜಂಕ್ಷನ್ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಜನರ ಆರೋಗ್ಯವನ್ನು ರಕ್ಷಿಸುವುದು ಸರಕಾರದ ಕರ್ತವ್ಯವಾಗಿದೆ. ಆರೋಗ್ಯವಂತ ಬದುಕು ಜನರ ಹಕ್ಕಾಗಿರುತ್ತದೆ. ಆದರೆ ಇಂದಿನ ಕರ್ನಾಟಕದ ಆರೋಗ್ಯ ಸ್ಥಿತಿಯು ತೀರಾ ಶೋಚನೀಯವಾಗಿದೆ ಎಂದರು.

ಬಡವ ಮಧ್ಯಮ ವರ್ಗದ ಜನರಿಗೂ ಎಟಕದಷ್ಟು ಆರೋಗ್ಯ ವ್ಯವಸ್ಥೆಯು ದುಬಾರಿಯಾಗಿರುವುದು ಇಂದಿನ ಪ್ರಮುಖ ಸಮಸ್ಯೆಯಾಗಿದೆ. ಗೌರವಯುತ ಬದುಕು ಇಂದಿನ ಸಮಾಜದಲ್ಲಿ ದುಸ್ತರ ಎಂದಾದರೆ ಗೌರವಯುತವಾದ ಸಾವನ್ನು ಕಾಣುವುದು ಇಂದಿನ ದುಬಾರಿ ಯುಗದಲ್ಲಿ ಕಷ್ಟದ ಕೆಲಸ.

ಇದನ್ನೂ ಓದಿ: ಮೆಟ್ರೋ ಪಿಂಕ್ ಲೈನ್: ಪರೀಕ್ಷೆ ಬಳಿಕ ಮೇನಲ್ಲಿ ಉದ್ಘಾಟನೆ

ಗ್ರಾಮೀಣ ಭಾಗದಲ್ಲಿ ಜನತೆಗೆ ಸಹಕಾರಿಯಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿ ಹೋಗಿವೆ. ಆದರೆ ಇಲ್ಲಿನ ಶಾಸಕರು ಸಂಸದರಾಗಲಿ ರಾಜ್ಯ ಸರ್ಕಾರವಾಗಲಿ ಜನತೆಯ ಆರೋಗ್ಯದ ಕುರಿತು ಮಾತನಾಡುತ್ತಿಲ್ಲ. ಜಿಲ್ಲೆಯ ಕಂಬಳ, ಬಂಗಾರದ ಅಂಗಡಿಗಳ ಉದ್ಘಾಟನೆಯಲ್ಲಿ ಇರುವಂತಹ ಕನಿಷ್ಠ ಆಸಕ್ತಿಯು ಜನರ ಆರೋಗ್ಯದ ಕುರಿತಾಗಿ ಇಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಸಮಾಜವಾದಿ ಎಂದುಕೊಳ್ಳುತ್ತಲೇ ಈ ರಾಜ್ಯದ ಆರೋಗ್ಯ ಕ್ಷೇತ್ರದ ಖಾಸಗಿಕರಣದ ವೇಗವನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

ಖಾಸಗಿ ಕ್ಷೇತ್ರದ ಆನಿಯಂತ್ರಿತ ದುಬಾರಿ ವೆಚ್ಚಗಳು ಒಂದೆಡೆಯಾದರೆ ಇರುವಂತಹ ಸರಕಾರಿ ಆರೋಗ್ಯ ಸಂಸ್ಥೆಗಳನ್ನು ಆಸ್ಪತ್ರೆಗಳನ್ನು ಖಾಸಗಿಯವರಿಗೆ ಒತ್ತೆ ಇಡುತ್ತಿರುವುದು ಇಂದಿನ ಸರಕಾರಗಳ ಸಾಧನೆ ಎಂದರು. ಕಾರ್ಮಿಕ ಮುಖಂಡರಾದ ಸದಾಶಿವ ದಾಸ್ ಮಾತನಾಡುತ್ತ ಕೇರಳದ ಚುನಾವಣಾ ಪ್ರಚಾರದ ವೇಳೆ ಕಾಸರಗೋಡಿನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಹುಡುಕಾಡುವ ಮಂಗಳೂರಿನ ಜನಪ್ರತಿನಿಧಿಗಳು ಮಂಗಳೂರಿನಲ್ಲಿ ಎಷ್ಟು ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಬೇಕು? ಇರುವಂತಹ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳಿಲ್ಲ ಹೋಬಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿಲ್ಲ ಇರುವಂತಹ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೂಡ ವೈದ್ಯರಿಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗಿ ಹೋಗಿವೆ ಎಂದರು.

ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು ಇದರ ಮುಖಂಡರಾದ ಮನೋಜ್ ವಾಮಂಜೂರು ಮಾತನಾಡುತ್ತಾ ನಮ್ಮ ತಕ್ಷಣದ ಬೇಡಿಕೆಯಾಗಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಬಿದ್ದಿರುವ ಎಂಟು ಹುದ್ದೆಗಳನ್ನು ಬರ್ತಿಗೊಳಿಸಬೇಕು. ಔಷಧಿಗಳ ಕೊರತೆಯನ್ನು ನೀಗಿಸಬೇಕು. ಈಗಾಗಲೇ ಪ್ರಸ್ತಾಪದಲ್ಲಿರುವ ಜಯದೇವ ಆಸ್ಪತ್ರೆಯ ಘಟಕವನ್ನು ರಚಿಸಲು ಗಮನಹರಿಸಬೇಕು. ಗುರುಪುರ ಹೋಬಳಿಗೊಂದು ಸಮುದಾಯ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಬೇಡಿಕೆ ನಮ್ಮ ಹೋರಾಟ ಸಮಿತಿಯದ್ದಾಗಿದ್ದು ಈ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದರು.

ಈ ಹಕ್ಕತ್ತಾಯ ಪಾದಯಾತ್ರೆಯ ಸಮಾರಂಭ ಸಮಾರಂಭಕ್ಕೆ ಆಗಮಿಸಿ ಕುಡುಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಚಿರಾಗ್ ರವರು ಮನವಿಯನ್ನು ಸ್ವೀಕರಿಸಿದರು. ಈ ಪ್ರತಿಭಟನ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಅಶೋಕ್ ರೈ, ಜೈ ಶಂಕರ್ ಮಿತ್ರ ಮಂಡಳಿಯ ಮುಖಂಡರಾದ ರಾಜೀವ ಸಾಲಿಯನ್, ರೈತ ಮುಖಂಡರಾದ ಬಾಬು ಸಾಲಿಯಾನ್, ಲಿಂಗಪ್ಪ ಸಾಲಿಯಾನ್, ಶೇಖರ ಗಂಪ, ಭೋಜ ದೇವಸ, ಕಾರ್ಮಿಕ ಮುಖಂಡರಾದ ಹೊನ್ನಯ ಅಂಚನ್, ಹೊನ್ನಯ ಅಮೀನ್,ಭವಾನಿ ಜಿ ಅಮೀನ್, ಭಾರತಿ ದೇವಸ, ವಸಂತಿ ಕುಪ್ಪೆಪದವು, ನೋಡಯ್ಯ ಗೌಡ, ಅಶೋಕ್ ಬಂಗೇರ, ಜಯಶೀಲ ಕರ್ಕೇರ ಸಾಮಾಜಿಕ ಹೋರಾಟಗಾರರಾದ ಸುಭಾಷ್ ಬಾಲಕಟ್ಟ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: “ಕರ್ನಾಟಕದಲ್ಲಿ SIR: ಬೂತ್ ಮಟ್ಟದ ಜಾಗೃತಿ – ವಂಚನೆ ತಡೆಯುವ ಹೊಣೆ ಯಾರದ್ದು?” Janashakthi Media

Donate Janashakthi Media

Leave a Reply

Your email address will not be published. Required fields are marked *