ಕುಷ್ಟಗಿ : ಕರ್ನಾಟಕ ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ರಾಜ್ಯ ಸರ್ಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ಜಾರಿಗೊಳಿಸುತ್ತಿರುವುದರಿಂದ ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ನಿರ್ಮಾಣವಾಗಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಬೇಕಾದ ರಾಜ್ಯ ಸರ್ಕಾರವು ಬಡ, ಮಧ್ಯಮ ವರ್ಗ, ತಳಸಮುದಾಯಗಳ ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆ ಎಟುಕದಂತೆ ಮಾಡುವುದಕ್ಕೆ ಮುಂದಾಗಿದೆ ಎಂದು ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಬೆಂಗಳೂರಲ್ಲಿ ಯುಜಿಸಿ ಅಧ್ಯಕ್ಷರು ವಿಶ್ವವಿದ್ಯಾಲಯದ ಕುಲಪತಿಗಳ ಸಭೆಯಲ್ಲಿ ಪದವಿ ವ್ಯಾಸಂಗಕ್ಕೆ ದಾಖಲಾಗುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತೆ ಪರೀಕ್ಷೆ (ಪ್ರವೇಶಾತಿ ಪರೀಕ್ಷೆ) ಮಾಡಬೇಕು, ಇದಕ್ಕೆ ರಾಜ್ಯದ ವಿಶ್ವವಿದ್ಯಾಲಯಗಳು ಸಿದ್ಧವಾಗಿ ನೊಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಪಿಯುಸಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿಗೆ ದಾಖಲಾತಿ ಪಡೆಯಲು ಅವಕಾಶ ಇದ್ದರು ಸಹ ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕೇವಲ ಶೇಕಡ 20ರಷ್ಟು ಮಾತ್ರವಿದೆ. ಇನ್ನೂ ಅರ್ಹತಾ ಪ್ರವೇಶ ಪರೀಕ್ಷೆ ಜಾರಿಯಾದರೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ತೀರಾ ಕಡಿಮೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಎ, ಬಿ.ಕಾಂ., ಬಿ.ಎಸ್.ಸಿ ಹಾಗೂ ಇತರ ಕೋರ್ಸುಗಳಿಗೆ ದಾಖಲಾತಿಯಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅರ್ಹತ ಪರೀಕ್ಷೆ ಕಡ್ಡಾಯ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಈಗ ಇರುವ ಪಿಯುಸಿ ಪರೀಕ್ಷೆಗಳು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ.
ಆದ್ದರಿಂದ ಯುಜಿಸಿ ಅಧ್ಯಕ್ಷರ ಸೂಚನ ಕೈ ಬಿಡಬೇಕು ಹಾಗೂ ಈಗಾಗಲೇ ಇರುವ ನಿಯಮಗಳನ್ನು ಮುಂದುವರಿಸಬೇಕೆಂದು ರಾಜ್ಯ ಸರ್ಕಾರ ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಉಪಕುಲಪತಿಗಳಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡುತ್ತದೆ ಎಂದು ಹೇಳಿದರು.
ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಸಂಘಟನೆಯ ಪ್ರಮುಖರಾದ ವಿರೇಶ ಹಿರೇಮಠ, ಶಿವು ಎಮ್ಮಿರ, ಪ್ರಶಾಂತ, ವೀರೇಶ ಹಿರೇಮಠ, ಚೌಡಪ್ಪ ಹುನಗುಂದ, ನಿಂಗಪ್ಪ ಗ್ರಾಮ ಪಂಚಾಯತಿ ಸದಸ್ಯ ಕೆಂಚಪ್ಪ ಸಿದ್ದಾಪುರ ಇತರರು ಇದ್ದರು.