ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮುಂದಿನ ಕೆಲವು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ, ಜೂನ್ 30ರಿಂದ ಜುಲೈ 6ರವರೆಗೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ
ಮಳೆಯೊಂದಿಗೆ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ.
ಇತ್ತೀಚಿನ ಮಳೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಹಲವೆಡೆ ವಾಹನ ಸಂಚಾರ ವ್ಯತ್ಯಯಗೊಂಡಿದ್ದು, ಜನಜೀವನಕ್ಕೂ ಅಡಚಣೆ ಉಂಟಾಗಿದೆ.
ಇದನ್ನೂ ಓದಿ: ಎಸ್ಐಆರ್: ಪಶ್ಚಿಮ ಬಂಗಾಳದ ಅನುಭವ ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆಯೇ?
ಐಎಂಡಿ ಮುನ್ಸೂಚನೆ ಹಿನ್ನೆಲೆ, ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಮಕ್ಕಳು, ಕಾರ್ಮಿಕರು ಹಾಗೂ ಹೊರಾಂಗಣ ಕೆಲಸ ಮಾಡುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ಗುಡುಗು-ಮಿಂಚಿನ ಮಳೆ ಸಂದರ್ಭಗಳಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸಲಹೆ ನೀಡಲಾಗಿದೆ. ಪ್ರವಾಸಿಗರು, ಮೀನುಗಾರರು ಮತ್ತು ಸಾರ್ವಜನಿಕರು ಸಮುದ್ರ, ನದಿಗಳು, ಕೆರೆಗಳು ಹಾಗೂ ಜಲಾಶಯಗಳಿಗೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ನಿರಂತರ ಮಳೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವುದರಿಂದ, ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.ಬಸವರಾಜ Janashakthi Media
