ಪಕ್ಷದಿಂದ ಒಪಿಎಸ್ ಉಚ್ಛಾಟನೆ: ಮಧ್ಯಪ್ರವೇಶಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಎಡಪ್ಪಾಡಿ ಕೆ ಪಳನಿ ಸ್ವಾಮಿ (ಇಪಿಎಸ್) ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಎಐಎಡಿಎಂಕೆ ನಾಯಕ ಓ ಪನ್ನೀರ ಸೆಲ್ವಂ (ಒಪಿಎಸ್) ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ. ಎಐಎಡಿಎಂಕೆ ಪಕ್ಷದ ಹಿರಿಯ ನಾಯಕರಾಗಿರುವ ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.

ಒಪಿಎಸ್ ಹಾಗೂ ಇತರ ಮೂವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ಅವರೆಲ್ಲರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿತ್ತು. ಪಕ್ಷದಿಂದ ಆದ ಅಮಾನತಿಗೆ ತಡೆ ನೀಡುವಂತೆ ಮತ್ತು ಇಪಿಎಸ್‌ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದನ್ನು ವಿರೋಧಿಸಿ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಮೇಲ್ಮನವಿ ಮಾಡಲಾಗಿತ್ತು.

ಇದನ್ನೂ ಓದಿ: ಶಾಲೆ ತುಂಬಾ ಮಕ್ಕಳು, ಆದರೆ ಶಿಕ್ಷಕರಿಲ್ಲ; ಸ್ಪೀಕರ್ ಯು.ಟಿ. ಖಾದರ್ ಊರಿನ ಸರ್ಕಾರಿ ಶಾಲೆಯ ಕತೆಯಿದು!

ಎಐಎಡಿಎಂಕೆ ಕಾರ್ಯಕರ್ತರು ಪಕ್ಷದ ಪ್ರಧಾನ ಕಚೇರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ನ್ಯಾಯಾಲಯದ ತೀರ್ಪನ್ನು ಸಂಭ್ರಮಿಸಿದರು. “ಎಐಎಡಿಎಂಕೆ ಪಕ್ಷಕ್ಕೆ ವಿರುದ್ಧವಾಗಿರುವ ಜನರನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ” ಎಂದು ತೀರ್ಪಿನ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಇಪಿಎಸ್ ಹೇಳಿದ್ದಾರೆ.

 

ಕಳೆದ ಏಪ್ರಿಲ್‌ನಲ್ಲಿ, ಭಾರತೀಯ ಚುನಾವಣಾ ಆಯೋಗವು (ಇಸಿಐ) ಇಪಿಎಸ್ ಅವರನ್ನು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿತು ಮತ್ತು ಪಕ್ಷದ ಎರಡು ಎಲೆಗಳ ಚಿಹ್ನೆಯ ಅವರ ಬಣಕ್ಕೆ ಹಂಚಿಕೆ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಪಿಎಸ್‌ಗೆ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಉಳಿಯಲು ಅವಕಾಶ ನೀಡಿದ್ದ ಹೈಕೋರ್ಟ್‌ನ ಆದೇಶವನ್ನು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ಕಳೆದ ವರ್ಷ ಜುಲೈ 11 ರಂದು, ಎಐಎಡಿಎಂಕೆಯ ಜನರಲ್ ಕೌನ್ಸಿಲ್ ಇಪಿಎಸ್ ಅವರನ್ನು ಪಕ್ಷದ ಏಕೈಕ ನಾಯಕ ಎಂದು ಹೆಸರಿಸಿತು. ಜೊತೆಗೆ ಒಪಿಎಸ್ ಅವರನ್ನು ಜಂಟಿ ಸಂಯೋಜಕ ಹುದ್ದೆಯಿಂದ ತೆಗೆದುಹಾಕಿತ್ತು. ಹೀಗಾಗಿ ಪಕ್ಷದ ಸಭೆಯನ್ನು ಸ್ಥಗಿತಗೊಳಿಸುವಂತೆ ಓಪಿಎಸ್ ಕೇಳಿಕೊಂಡಿದ್ದರು. ಆದರೆ ಅವರ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

ಎಐಎಡಿಎಂಕೆ ನಾಯಕತ್ವವನ್ನು ಗೆದ್ದ ಇಪಿಎಸ್ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಈ ಸ್ಥಾನದಲ್ಲಿ ಹಿಂದೆ ತಮಿಳುನಾಡಿನ ದಿಗ್ಗಜರಾದ ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಜೆ. ಜಯಲಲಿತಾ ಅವರು ಅಲಂಕರಿಸಿದ್ದರು.

ವಿಡಿಯೊ ನೊಡಿ: ಜಗತ್ತಿಗೆ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ್ದು ಟಿಪ್ಪು ಸುಲ್ತಾನ್

Donate Janashakthi Media

Leave a Reply

Your email address will not be published. Required fields are marked *