ನವದೆಹಲಿ: ವಿರೋಧ ಪಕ್ಷದ ನಾಯಕರು, “ವಕ್ಫ್ ಆಸ್ತಿಗಳನ್ನು ಅಥವಾ ಇಸ್ಲಾಮಿಕ್ ಕಾನೂನಿನಡಿಯಲ್ಲಿ ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಮೀಸಲಾದ ಆಸ್ತಿಗಳನ್ನು – ಪ್ರಾಮಾಣಿಕವಾಗಿ ಬಳಸಿದ್ದರೆ, ಯುವ ಮುಸ್ಲಿಮರು ಜೀವನೋಪಾಯಕ್ಕಾಗಿ ಪಂಕ್ಚರ್‌ಗಳನ್ನು ದುರಸ್ತಿ ಮಾಡುವ ಅಗತ್ಯವಿಲ್ಲ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಟೀಕಿಸಿದ್ದಾರೆ. ಮುಸ್ಲಿಂ
ಏಪ್ರಿಲ್ 14 ಸೋಮವಾರದಂದು ಹರಿಯಾಣದ ಹಿಸಾರ್‌ನಲ್ಲಿ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಲಕ್ಷಾಂತರ ಹೆಕ್ಟೇರ್ ಭೂಮಿ ವಕ್ಫ್ ಆಸ್ತಿಯಾಗಿದೆ ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.
ವಕ್ಫ್ ಆಸ್ತಿಗಳನ್ನು ಪ್ರಾಮಾಣಿಕವಾಗಿ ಬಳಸಿದ್ದರೆ, ಮುಸ್ಲಿಂ ಯುವಕರು ಸೈಕಲ್ ಪಂಕ್ಚರ್‌ಗಳನ್ನು ದುರಸ್ತಿ ಮಾಡುವ ಮೂಲಕ ಜೀವನೋಪಾಯವನ್ನು ಗಳಿಸುವ ಅಗತ್ಯವಿರಲಿಲ್ಲ. ಆದರೆ ಕೆಲವೇ ಭೂ ಮಾಫಿಯಾಗಳು ಈ ಆಸ್ತಿಗಳಿಂದ ಲಾಭ ಪಡೆದಿವೆ. ಈ ಮಾಫಿಯಾ ದಲಿತ, ಹಿಂದುಳಿದ ವರ್ಗಗಳು ಮತ್ತು ವಿಧವೆಯರಿಗೆ ಸೇರಿದ ಭೂಮಿಯನ್ನು ಲೂಟಿ ಮಾಡುತ್ತಿತ್ತು ಎಂದು ಮೋದಿ ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರು| ಸಿಇಟಿ ಪರೀಕ್ಷೆಯ ನಿಯಮ ಮತ್ತು ಡ್ರೆಸ್ ಕೋಡ್ ಬಿಡುಗಡೆ
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, RSS ಹಾಗೂ ಬಿಜೆಪಿಯು ತನ್ನ ಸಿದ್ಧಾಂತ ಮತ್ತು ಸಂಪನ್ಮೂಲಗಳನ್ನು ದೇಶದ ಹಿತಾಸಕ್ತಿಗಾಗಿ ಬಳಸಿದ್ದರೆ, ಪ್ರಧಾನಿ ತಮ್ಮ ಬಾಲ್ಯದಲ್ಲಿ “ಚಹಾ ಮಾರಾಟ ಮಾಡುವ ಅಗತ್ಯವಿರಲಿಲ್ಲ” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ತಮ್ಮ ಸರ್ಕಾರ ಅಧಿಕಾರದಲ್ಲಿರುವ 11 ವರ್ಷಗಳಲ್ಲಿ ಬಡವರಿಗೆ – ಹಿಂದೂಗಳು ಅಥವಾ ಮುಸ್ಲಿಮರಿಗೆ – ಏನು ಮಾಡಿದ್ದಾರೆ ಎಂದು ಓವೈಸಿ ಪ್ರಶ್ನಿಸಿದ್ದಾರೆ.
ವಕ್ಫ್ ಆಸ್ತಿಗಳೊಂದಿಗೆ ಏನಾಗಿದೆಯೋ ಅದಕ್ಕೆ ದೊಡ್ಡ ಕಾರಣವೆಂದರೆ ವಕ್ಫ್ ಕಾನೂನುಗಳು ಯಾವಾಗಲೂ ದುರ್ಬಲವಾಗಿದ್ದವು. ಮೋದಿಯವರ ವಕ್ಫ್ ತಿದ್ದುಪಡಿಗಳು ಅವುಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ ಗರ್ಹಿ ಅವರು, ‘ಮುಸ್ಲಿಮರು ಪಂಕ್ಚರ್ ಸರಿಪಡಿಸುತ್ತಾರೆ’ ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗಳು ಬಳಸುವ ಭಾಷೆಯಾಗಿದೆ, ಇದನ್ನು ದೇಶದ ಅತ್ಯುನ್ನತ ವ್ಯಕ್ತಿ ಬಳಸಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ. “ಇಂತಹ ಹೇಳಿಕೆ ಪ್ರಧಾನಿಗೆ ಸಲ್ಲದು. ಅಲ್ಲದೆ, ನೀವು ದೇಶದ ಯುವಕರನ್ನು ಈ ಹಂತಕ್ಕೆ ತಂದಿದ್ದೀರಿ. ಉದ್ಯೋಗಗಳಿಲ್ಲ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಹೇಳಿದ್ದಾರೆ.
ನೀವು ಕಾಂಗ್ರೆಸ್‌ನವರು ಮುಸ್ಲಿಂರ ಬಗ್ಗೆ ಸಹಾನೂಭೂತಿ ಹೊಂದಿದ್ದೀರಿ ಎಂದು ನೀವು ಹೇಳುತ್ತೀರಿ. ನೀವು ಅವರನ್ನು ದ್ವೇಷಿಸುತ್ತೀರಿ. ಮುಖ್ತಾರ್ ಅಬ್ಬಾಸ್ ನಖ್ವಿ, ಶಹನವಾಜ್ ಹುಸೇನ್, ಎಂಜೆ ಅಕ್ಬರ್ ಮತ್ತು ಜಾಫರ್ ಇಸ್ಲಾಂ ಅವರನ್ನು ಯಾಕೆ ಕಡೆಗಣಿಸಿದಿರಿ? ಕ್ಫ್ ಮಸೂದೆಯ ಮೂಲಕ ಮುಸ್ಲಿಮರಿಗೆ ಒಳ್ಳೆಯದನ್ನು ಮಾಡಬೇಕೆಂದು ಹೇಳುತ್ತಿದ್ದೀರಿ, ಆದರೆ ಲೋಕಸಭೆಯಲ್ಲಿ ಅದನ್ನು ಮಂಡಿಸಲು ನಿಮ್ಮಲ್ಲಿ ಒಬ್ಬ ಮುಸ್ಲಿಂ ಸಂಸದರೂ ಇಲ್ಲ. ನೀವು ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತೀರಿ. ಲೋಕಸಭೆ ಅಥವಾ ರಾಜ್ಯಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭೆಯಲ್ಲಿ ನಿಮಗೆ ಮುಸ್ಲಿಂ ಮಹಿಳಾ ಸದಸ್ಯರಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ: ಬದುಕನ್ನು ಕಿತ್ತುಕೊಂಡ ʼವೈಟ್ ಟಾಪಿಂಗ್ ಕಾಮಗಾರಿʼ! Janashakthi Media