ಡ್ರೋನ್ –ವಸಂತರಾಜ ಎನ್.ಕೆ
ಡ್ರೋನ್ ಬಗ್ಗೆ ನಾವು ಈಗಾಗಲೇ ಸಾಕಷ್ಟು ಕೇಳಿದ್ದೇವೆ. ಫಿಲಂಗಳಲ್ಲಿ, ಮದುವೆ ಮತ್ತಿತರ ದೊಡ್ಡ ಸಾರ್ವಜನಿಕ ಸಮಾರಂಭಗಳಲ್ಲಿ ಎತ್ತರದಿಂದ ಮಾಡುವ ವಿಹಂಗಮ ದೃಶ್ಯಗಳ ಶೂಟಿಂಗ್ ನಲ್ಲಿ, ಮತ್ತು ಇತ್ತೀಚಿನ ಉಕ್ರೇನ್, ಇರಾನ್ ಯುದ್ಧದಲ್ಲಿ ಅವು ಪ್ರಸಿದ್ಧವಾಗಿವೆ. ಡ್ರೋನ್ ಅಂದರೇನು ? ಅದು ಹೇಗೆ ಕೆಲಸ ಮಾಡುತ್ತದೆ? ಯಾವ ರೀತಿಯ ಬಳಕೆ ಸಾಧ್ಯವಿದೆ, ಆಗುತ್ತಿದೆ? ಭಾರತದಲ್ಲಿ ಯಾವ ಬಳಕೆಗೆ ಅವು ಲಭ್ಯವಿವೆ? ಅವುಗಳ ಪರಿಣಾಮವೇನು ? ಈ ಎಲ್ಲ ಪ್ರಶ್ನೆಗಳಿಗೆ ಭಾಗಶಃ ವಾದರೂ ಉತ್ತರ ಬೆಂಗಳೂರಿನಲ್ಲಿ ಎಪ್ರಿಲ್ 17-18 ರಂದು ನಡೆದ ಡ್ರೋನ್ ಸಂತೆಯಲ್ಲಿ ಸಿಕ್ಕಿತು. ಡ್ರೋನ್
ಏಪ್ರಿಲ್ 17 : ಹೊಲದಲ್ಲಿ ಬೀಜ ಬಿತ್ತುವ, ಬೆಳೆಗಳ ಮೇಲೆ ಕೀಟನಾಶಕ ಸಿಂಪಡಿಸುವ, ಹಾಲ್ ಅಥವಾ ಬಯಲಲ್ಲಿ ಕಾರ್ಯಕ್ರಮದ ವಿಹಂಗಮ ದೃಶ್ಯದ ವಿಡಿಯೊ ತೆಗೆದು ಕಳಿಸಬಲ್ಲ, ಒಂದು ಸ್ಥಳದ ಆಕಾಶ ಸರ್ವೇ ಮಾಡಿ 2ಡಿ-3ಡಿ ಮ್ಯಾಪ್ ತಯಾರಿಸಬಲ್ಲ ಹಲವು ಡ್ರೋನ್ ಗಳು ಇಲ್ಲಿದ್ದವು. ಎಲ್ಲಿ ಅಂದಿರಾ? ‘ಡ್ರೋನ್ ಸಂತೆ’ಯಲ್ಲಿ. ‘ಡ್ರೋನ್-ಸಂತೆ’ ನೂ ಮಾಡ್ತಾರಾ ಎಂದಿರಾ? ಪ್ರತಿ ವರ್ಷ ನಡೆಯುವ ‘ಡ್ರೋನ್ ಎಕ್ಸ್ಪೊ’ (Drone Expo) 2026ರ ಆವೃತ್ತಿ ನಮ್ಮ ಬೆಂಗಳೂರಿನ ಮಾದಾವರ ಮೆಟ್ರೋ ಸ್ಟೇಶನ್ ಬಳಿ ಇರುವ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಏಪ್ರಿಲ್ 17-18ರಂದು ನಡೆಯಿತು. ನಾನು ಮೊದಲ ದಿನ ಈ ಸಂತೆಗೆ ಹೋಗಿದ್ದೆ. ಸಂತೆಯ ಕೆಲವು ಝಲಕ್ ಗಳು.
ಡ್ರೋನ್ ಬಗ್ಗೆ ನಾವು ಈಗಾಗಲೇ ಸಾಕಷ್ಟು ಕೇಳಿದ್ದೇವೆ. ಫಿಲಂಗಳಲ್ಲಿ, ಮದುವೆ ಮತ್ತಿತರ ದೊಡ್ಡ ಸಾರ್ವಜನಿಕ ಸಮಾರಂಭಗಳಲ್ಲಿ ಎತ್ತರದಿಂದ ಮಾಡುವ ವಿಹಂಗಮ ದೃಶ್ಯಗಳ ಶೂಟಿಂಗ್ ನಲ್ಲಿ, ಮತ್ತು ಇತ್ತೀಚಿನ ಉಕ್ರೇನ್ , ಇರಾನ್ ಯುದ್ಧದಲ್ಲಿ ಅವು ಪ್ರಸಿದ್ಧವಾಗಿವೆ. ಡ್ರೋನ್ ಅಂದರೇನು ? ಅದು ಹೇಗೆ ಕೆಲಸ ಮಾಡುತ್ತದೆ? ಇತರ ಯಾವ ರೀತಿಯ ಬಳಕೆ ಸಾಧ್ಯವಿದೆ, ಆಗುತ್ತಿದೆ? ಅವುಗಳ ಪರಿಣಾಮವೇನು ? ಈ ಎಲ್ಲ ಪ್ರಶ್ನೆಗಳಿಗೆ ಭಾಗಶಃವಾದರೂ ಉತ್ತರ ಈ ಸಂತೆಯಲ್ಲಿ ಸಿಗುತ್ತದೆ. ಇಲ್ಲಿ ಡ್ರೋನ್ ತಯಾರಕರು, ವಿಶೇಷ ಬಾಗಗಳ ತಯಾರಕರು, ಅವುಗಳನ್ನು ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಲು ತಾಂತ್ರಿಕ ಸೌಲಭ್ಯ ಒದಗಿಸುವವರು, ತರಬೇತಿ ಕೊಡುವವರು, ತಮ್ಮ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಮಾಡಲು ಬಯಸಿದವರಿಗೆ ತಾಂತ್ರಿಕ ಕಮರ್ಶಿಯಲ್ ಸಲಹೆ ನೀಡುವವರು – ಹೀಗೆ ಹಲವು ಕಂಪನಿಗಳು ಸ್ಟಾಲ್ ಹಾಕಿದ್ದವು. ಡ್ರೋನ್ ಕ್ಷೇತ್ರದಲ್ಲಿ ಕೆಲಸ ಮಾಡುವ ಮತ್ತು ಆಸಕ್ತಿಯಿರುವ ಇಂಜಿನಿಯರುಗಳು, ವಿದ್ಯಾರ್ಥಿಗಳು, ಸೇನಾಪಡೆಗಳ ಸಿಬ್ಬಂದಿ, ಡ್ರೋನ್ ಬಳಕೆ ಮಾಡ ಬಯಸುವವರು, ಸಾಮಾನ್ಯ ಕುತೂಹಲಿಗಳು – ಹೀಗೆ ಸಂತೆಯಲ್ಲಿ ಗದ್ದಲವಿತ್ತು. ಮೊದಲ ದಿನವೇ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ‘ಡ್ರೋನ್
ಇದನ್ನೂ ಓದಿ : ಡ್ರೋನ್ ಬಳಸಿ ಚೀನಾದಲ್ಲಿ ಹೈಟೆಕ್ ಫುಡ್ ಡೆಲಿವರಿ ವ್ಯವಸ್ಥೆ
ಡ್ರೋನ್ ಅಂದರೇನು ?
ಡ್ರೋನ್ ಅಂದರೆ ಸರಳವಾಗಿ ನಿರ್ದಿಷ್ಟ ರೀತಿಯ ಕ್ಷೇತ್ರದ ಬಳಕೆಗೆ ತಯಾರಿಸಿದ ಮಾನವ ರಹಿತವಾದ ದೂರದಿಂದ ನಿಯಂತ್ರಿಸಬಹುದಾದ ಮತ್ತು ಅಗ್ಗದ ವಿಮಾನ ಅಥವಾ ಹೆಲಿಕಾಪ್ಟರ್ ಎನ್ನಬಹುದು. ಡ್ರೋನ್ ಮತ್ತು ವಿಮಾನ/ಹೆಲಿಕಾಪ್ಟರ್ ಗಳು ಕೆಲಸ ಮಾಡುವ ವಿಧಾನದ ಹಿಂದಿರುವ ವಿಜ್ಞಾನವೊಂದೇ. ಹಾಗಾಗಿ ಅವನ್ನು ಯು.ಎ.ವಿ (UAV Unmanned Aerial Vehicle) ಎಂದೂ ಕರೆಯಲಾಗುತ್ತದೆ. ರಕ್ಷಣಾ ಪಡೆಗಳು ಬಳಸುವ ಕೆಲವು ಡ್ರೋನ್ ಗಳು ದುಬಾರಿಯಾಗಿದ್ದರೂ, ಅದೇ ಕ್ಷಮತೆಯ ಪೈಲಟ್ ಸಹಿತ ವಿಮಾನಗಳಿಗಿಂತ ಬಹಳ ಪಟ್ಟು ಅಗ್ಗವಾಗಿರುತ್ತವೆ. ಡ್ರೋನ್
ಡ್ರೋನ್ ಗಳಲ್ಲಿ ಅವುಗಳ ಗಾತ್ರ, ವೇಗ, ಗಾಳಿಯಲ್ಲಿ ಸವೆಸಬಹುದಾದ ದೂರ, ಸಮಯ, ನಿರ್ದಿಷ್ಟ .ಕ್ಷೇತ್ರಗಳ ಬಳಕೆಗೆ ಒಯ್ಯಬೇಕಾದ ಸಾಮಗ್ರಿಯ ತೂಕ, ನಿಯಂತ್ರಣದ ವಿಧಾನ – ಇವುಗಳ ಆಧಾರದ ಮೇಲೆ ಹಲವು ವಿಧದವು ಇವೆ. ಗಾತ್ರದಲ್ಲಿ ಕೆಲವು ಸೆಂಟಿ ಮೀಟರ್ ನಿಂದ ಹತ್ತಾರು ನೂರಾರು ಮೀಟರ್ ಉದ್ದ-ಅಗಲದ ಡ್ರೋನ್ ಗಳಿವೆ. ಆದರೆ ಎಲ್ಲ ವಿಧದ ಡ್ರೋನ್ ಗಳಲ್ಲಿ ಸಾಮಾನ್ಯವಾಗಿ ಈ ಮುಂದಿನ ಭಾಗಗಳು ಇರುತ್ತವೆ (ಚಿತ್ರ 1 ಮತ್ತು 2 ನೋಡಿ)

ಚಿತ್ರ 1 ಡ್ರೋನ್ ನ ಮುಖ್ಯ ಬಾಗಗಳು
ಮೋಟರ್ ಮತ್ತು ಪ್ರೊಪೆಲ್ಲರ್ ಹೊಂದಿರುವ ರೋಟರ್; ಡ್ರೋನ್ ನ ಫ್ರೇಮ್, ಹಾರುವಾಗ ತನ್ನ ಎತ್ತರ, ವೇಗ, ಅಡೆತಡೆಗಳನ್ನು ತಿಳಿಯಲು ಬೇಕಾದ ಕ್ಯಾಮೆರಾ, ಗೈರೋಸ್ಕೋಪ್, ಎಕ್ಸೆರೆಲೊಮೀಟರ್, ಇತ್ಯಾದಿ ‘ಜ್ಞಾನೇಂದ್ರಿಯ’ ಗಳು (ಸೆನ್ಸರ್ಸ್); ತನ್ನ ಸ್ಥಾನ ತಿಳಿಯಲು ಬೇಕಾದ ಜಿ.ಪಿಎಸ್ ನಂತಹವು: ಬ್ಯಾಟರಿ, ನೆಲದಲ್ಲಿರುವ ನಿಯಂತ್ರಕದೊಂದಿಗೆ ರೇಡಿಯೊ/ರಾಡಾರ್ ಸಂಪರ್ಕ, ಬ್ಯಾಟರಿ – ಡ್ರೋನ್ ನ ಮುಖ್ಯ ಭಾಗಗಳು. ಇವಲ್ಲದೆ ಡ್ರೋನ್ ಹಾರುವಾಗ ‘ಪೈಲಟ್’ ನ ಪಾತ್ರ ವಹಿಸುವ ಇಲೆಕ್ಟ್ರಾನಿಕ್ ನಿಯಂತ್ರಕ ವೂ ಇರುತ್ತದೆ.

ಚಿತ್ರ 2 ಡ್ರೋನ್ ನ ಪ್ರಮುಖ ಬಾಗಗಳು
ಕೆಲವು ಭಾಗಗಳು ಕೆಲವು ವಿಧದ ಡ್ರೋನ್ ಗಳಲ್ಲಿ ವಿಭಿನ್ನವಾಗಿರುತ್ತದೆ. ಡ್ರೋನ್ ಗಳ ಪ್ರಮುಖ ವಿಧಗಳು – ಏಕ ರೋಟರ್ ಡ್ರೋನ್, ಬಹು ರೋಟರ್ ಡ್ರೋನ್, ಸ್ಥಿರ ರೆಕ್ಕೆಯ (ವಿಮಾನದಂತಹ) ಡ್ರೋನ್, ಸ್ಥಿರ ರೆಕ್ಕೆ ಮತ್ತು ಬಹು-ರೋಟರ್ ಎರಡನ್ನೂ ಹೊಂದಿರುವ ಹೈಬ್ರಿಡ್ ಡ್ರೋನ್ ಗಳು. (ಚಿತ್ರ 3 ನೋಡಿ)

ಚಿತ್ರ 3 – ಡ್ರೋನ್ ವಿಧಗಳು
ಸ್ಥಿರ ರೆಕ್ಕೆಯ ಡ್ರೋನ್ ಗಳಿಗೆ ಹಾರಲು (ವಿಮಾನಗಳಂತೆ) ರನ್ ವೇ ಬೇಕಾಗುತ್ತದೆ. ಆದರೆ ಅವು ಕಡಿಮೆ ಬ್ಯಾಟರಿ ಶಕ್ತಿ ಬಳಸುವುದರಿಂದ ದೂರದ ಮತ್ತು ದೀರ್ಘ ಕಾಲದ ಹಾರಾಟ ಬೇಕಾಗುವ ಬಳಕೆಗಳಲ್ಲಿ ಹೆಚ್ಚು ಉಪಯುಕ್ತ. ರೋಟರ್ ಡ್ರೋನ್ ಗಳು (ಹೆಲಿಕಾಪ್ಟರ್ ನಂತೆ) ಲಂಬವಾಗಿ ಒಂದೇ ಸ್ಥಳದಲ್ಲಿ ಮೇಲಕ್ಕೆ ಏರಬಲ್ಲವು ಅಥವಾ ಕೆಳಕ್ಕೆ (VTOL – Vertical Take Off and Landing) ಇಳಿಯಬಲ್ಲವು. ಒಂದೇ ಸ್ಥಳದಲ್ಲಿ ನಿಲ್ಲಬಲ್ಲವು ಅಥವಾ ಸುತ್ತಬಲ್ಲವು. ಹೆಚ್ಚು ರೋಟರ್ ಗಳಿದ್ದಷ್ಟು ಹೆಚ್ಚು ವೇಗವಾಗಿ ಹೆಚ್ಚಿನ ಎತ್ತರಕ್ಕೆ ಏರಬಲ್ಲವು. ಹಲವು ಅಡೆತಡೆಗಳಿರುವ ಮತ್ತು ಹೆಚ್ಚು ಜಾಗವಿಲ್ಲದ ಸ್ಥಳಗಳ ಮೂಲಕವೂ ಕ್ಷಿಪ್ರ ಹಾದಿ ಬದಲಾವಣೆಯೊಂದಿಗೆ ಹಾರಬಲ್ಲವು. ಆದರೆ ಅವು ಹೆಚ್ಚು ಬ್ಯಾಟರಿ ಶಕ್ತಿ ಹೀರುತ್ತವೆ. ಹೈಬ್ರಿಡ್ ಡ್ರೋನ್ ಗಳು ಸ್ಥಿರ ರೆಕ್ಕೆ ಮತ್ತು ಬಹು ರೋಟರ್ ಎರಡನ್ನೂ ಹೊಂದಿದ್ದು ಎರಡರ ಅನುಕೂಲಗಳನ್ನೂ ಹೊಂದಿರುತ್ತವೆ. ಆಕಾಶದಲ್ಲಿ ಹಾರುವ ಡ್ರೋನ್ ಅಲ್ಲದೆ ಅದನ್ನು ಯಾವ ರೀತಿ ಎಲ್ಲಿ ಹೋಗಬೇಕು ಏನು ಮಾಡಬೇಕು ಎಂದು ನಿರ್ದೇಶನ ನೀಡುವುದು ನೆಲದಲ್ಲಿ ‘ರಿಮೋಟ್ ಕಂಟ್ರೊಲರ್’ ಹಿಡಿದ ಮಾನವ ನಿಯಂತ್ರಕ ಅಥವಾ ಕಂಪ್ಯೂಟರ್ ವ್ಯವಸ್ಥೆಯೇ ಎಂಬುದರ ಮೇಲೂ ಡ್ರೋನ್ ಭಿನ್ನವಾಗಿರುತ್ತದೆ. ಡ್ರೋನ್
ಡ್ರೋನ್ ಎಕ್ಸ್ಪೊ ದಲ್ಲಿ ಭೌತಿಕವಾಗಿ ಇದ್ದ ಮಾಡೆಲ್ ಗಳಲ್ಲಿ ಹೆಚ್ಚಿನವು ಬಹು ರೋಟರ್ ಡ್ರೋನ್ ಅಥವಾ ಹೈಬ್ರಿಡ್ ವಿಧದವೇ ಇದ್ದವು. ಆದರೆ ಸ್ಥಿರ ರೆಕ್ಕೆಯ ಕೆಲವು ಮತ್ತು ಬಳಕೆಯ ವಿಡಿಯೊಗಳಿದ್ದವು.
ಕೃಷಿ ಡ್ರೋನ್
ಡಾ.ಎಂ.ಜಿ.ಆರ್ ಶೈಕ್ಷಣಿಕ ಸಂಸ್ಥೆ ಮತ್ತು ಬೆನ್ಝೀ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ತಯಾರಿಸಿದ NAI AGRO DRONE ಆಕರ್ಷಣೆಯ ಕೇಂದ್ರವಾಗಿತ್ತು. ಇದಕ್ಕೆ ನಾಗರಿಕ ವಿಮಾನಯಾನ ಇಲಾಖೆಯ ಡಿ.ಜಿ.ಸಿ.ಎ ಅನುಮೋದನೆ ಸಿಕ್ಕಿದ್ದು ಇದನ್ನು ತಮಿಳುನಾಡಿನಲ್ಲಿ ವ್ಯಾಪಕವಾಗಿ ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಇದು ಬೆಳೆಗಳ ಮೇಲೆ ಸಿಂಪಡಿಸಲು 10 ಲೀಟರ್ ಕೀಟನಾಶಕ (ಅಥವಾ ನೀರು) ಅಥವಾ ಬಿತ್ತನೆಗೆ 9 ಕೆಜಿ ಬೀಜಗಳನ್ನು ಒಯ್ಯಬಲ್ಲುದು. ಇದರ ಗಾತ್ರ 2 ಮೀಟರ್ ಉದ್ದ, 1.8 ಮಿ ಅಗಲ, 0.73 ಮಿ ಎತ್ತರ ಇದೆ. ಇದು 2 ಕಿಮಿ ದೂರದ ತನಕ ಸೆಕೆಂಡ್ ಗೆ 10 ಮೀಟರ್ ವೇಗದಲ್ಲಿ 20 ನಿಮಿಷಗಳ ಕಾಲ ಕೆಲಸ ಮಾಡಬಲ್ಲದು. ಇದು 98.4 ಮೀಟರ್ ಎತ್ತರಕ್ಕೆ ಏರಬಲ್ಲದು. ಇದು 6 ರೋಟರುಗಳನ್ನು ಹೊಂದಿರುವ ಬಹು ರೋಟರ್ ವಿಧದ ಡ್ರೋನ್. ಇದು ಬೀಜ ಬಿತ್ತುವಾಗ ಆಥವಾ ನೀರು/ಕೀಟನಾಶಕ ಸಿಂಪಡಿಸುವಾಗ ಆಗಾಗ ಒಂದು ಸ್ಥಳದಲ್ಲಿ ಸ್ಥಿರವಾಗಿ ನಿಂತು ಕೆಲಸ ಮುಗಿಸಿ ಮುಂದಕ್ಕೆ ನಿಧಾನವಾಗಿ ಹೋಗಬೇಕಾಗಿ ಬರುವುದರಿಂದ ಈ ಕೃಷಿ ಬಳಕೆಗೆ ಬಹು ರೋಟರ್ ಡ್ರೋನ್ ಸೂಕ್ತವಾದದ್ದು. ಇದರ ವಿದ್ಯುತ್ ಶಕ್ತಿ 1952 ವಾಟ್. ಇದರ ಬ್ಯಾಟರಿ ಶಕ್ತಿ 21 ಸಾವಿರ mAh. ಇದೇ ಸಂಸ್ಥೆಯದ್ದು (ಪ್ರಮುಖವಾಗಿ ಎತ್ತರದ ಕಟ್ಟಡಗಳ ಮಾಡಿನ ಮೇಲೆ ಹಾಸಿದ) ಸೋಲಾರ್ ಪ್ಯಾನೆಲ್ ತೊಳೆಯುವ ಬಹು-ರೋಟರ್ ಡ್ರೋನ್ ಸಹ ಇದೆಯಂತೆ.

ಚಿತ್ರ 4 NAI AGRO DRONE ಸಂತೆಯಲ್ಲಿ (ಕೃಷಿ ಕಾರ್ಯಾಚರಣೆಯಲ್ಲಿ- ತಲೆಬರಹದೊಂದಿಗಿನ ಚಿತ್ರದಲ್ಲಿ)
‘ಏರ್ ಬೈಕ್’ ನಿಂದ ‘ಏರ್ ಅಂಬುಲೆನ್ಸ್’ ವರೆಗೆ
ಸಂತೆಯಲ್ಲಿ ಗಮನ ಸೆಳೆದ ಇನ್ನೊಂದು ಏರ್ ಬೈಕ್ ಡ್ರೋನ್ (Air Bike MYLU). ಇದು ಹೈಬ್ರಿಡ್ ವಿಧದ ಡ್ರೋನ್. ಇದು 200 ಕೆಜಿ ತೂಕ ಎತ್ತಬಲ್ಲದು. ಇದರಲ್ಲಿ ಒಬ್ಬ ಮನುಷ್ಯನೂ ಹೋಗಬಹುದು. ಇದು ಲಂಬವಾಗಿ ಏರುವುದು ಇಳಿಯುವುದಲ್ಲದೆ 20 ನಿಮಿಷ ಹಾರಾಟದಲ್ಲಿ 10 ಕಿಮಿ ಹೋಗಬಲ್ಲದು. ಇದನ್ನು ಯಾವುದೇ ತುರ್ತು ಸಾಮಗ್ರಿ ಸಾಗಾಣಿಕೆಗೆ ಬಳಸಬಹುದು. ಅಮೆಝಾನ್ ನಂತಹ ಸಾಗಾಣಿಕ ಕಂಪನಿ ತನ್ನ ನಗರದ ಪ್ರಾದೇಶಿಕ ಗೊಡೌನುಗಳ ಗಳ ನಡುವೆ ಎಲ್ಲಾ ಪ್ಯಾಕೇಜುಗಳನ್ನು ವೇಗದ ಸಾಗಾಣಿಕೆ ಮಾಡಲು ಬಳಸಬಹುದು. ಮುಂದೆ ಈ ಮೂಲಮಾದರಿಯ ಆಧಾರದಲ್ಲಿ ‘ಏರ್ ಅಂಬುಲೆನ್ಸ್’ ಅಭಿವೃದ್ಧಿ ಪಡಿಸುವುದು ಈ ಕಂಪನಿಯ ಗುರಿಯಂತೆ. ಈ ಕಂಪನಿ ರೊಬೊಟ್ ಗಳನ್ನು ತಯಾರಿಸುತ್ತಿದ್ದು, ತನ್ನ ಸೇವೆಗಳಲ್ಲಿ ಅಗತ್ಯವಿದ್ದಲ್ಲಿ ಡ್ರೋನ್-ರೊಬೊಟ್ ಗಳನ್ನು ಜತೆಗೆ ಬಳಸುತ್ತದಂತೆ.

ಚಿತ್ರ 5. ಏರ್ ಬೈಕ್ ಡ್ರೋನ್ (Air Bike MYLU) ಸಂತೆಯಲ್ಲಿ
ಡ್ರೋನ್ ಒಂದು ಸೇವೆಯಾಗಿ
ವಾಯುಯಂತ್ರ (www.vayuyantra.com) ಎಂಬ ಕಂಪನಿ ಡ್ರೋನ್ ಆಧಾರಿತ ಸೇವೆಗಳನ್ನು ಕೊಡುತ್ತದೆ. ಡ್ರೋನ್ ಖರೀದಿ ಮಾಡಬೇಕಾಗಿಲ್ಲ. ಸೇವೆಗೆ ಹಣ ಪಾವತಿ ಮಾಢಿದರಾಯಿತಂತೆ. 2 ಕೆಜಿ ಯಿಂದ 10 ಕೆಜಿ ಭಾರ ಒಯ್ಯಬಲ್ಲ ಬಹು (4 ಮತ್ತು 6) ರ ರೋಟರುಗಳಿರುವ ಡ್ರೋನ್ ಗಳ ಮೂಲಕ ಸೇವೆ ಒದಗಿಸುತ್ತದೆ. ಸಂತೆಯಲ್ಲಿ ಈ ಕಂಪನಿ ತನ್ನ ಡ್ರೋನ್ ಗಳನ್ನು ಪ್ರದರ್ಶಿಸುವ ಬದಲು ತಾನು ಕೊಡುವ ಸೇವೆಗಳ ಪ್ರಾತ್ಯಕ್ಷಿಕೆಯ ವಿಡಿಯೊಗಳನ್ನು ತೋರಿಸುತ್ತಿತ್ತು. ಎತ್ತರದ ಗಗನಚುಂಬಿ ಕಟ್ಟಡಗಳ ಮುಂಭಾಗ ಉದ್ದವಾದ ಬ್ರಶ್ ಮತ್ತು ನೀರಿನ ಜೆಟ್ ಗಳಿಂದ ಸ್ವಚ್ಛಗೊಳಿಸುವ ಅಥವಾ ಇತರ ರಿಪೇರಿಗಳ ಸೇವೆ; ಎತ್ತರದ ಕಟ್ಟಡ ಅಥವಾ ಸುಲಭವಾಗಿ ನಿಲುಕದ ಜಾಗಗಳಲ್ಲಿ ಬೆಂಕಿ ಹತ್ತಿಕೊಂಡಾಗ ನೀರಿನ ಜೆಟ್ ಅಥವಾ ಕಾರ್ಬನ್ ಡೈ ಆಕ್ಸೈಡ್ ಸುರಿದು ಆರಿಸುವ ಸೇವೆ; ಯಾವುದೇ ಕಟ್ಟಡದ (ಒಳಗೆ/ಹೊರಗೆ) ಅಥವಾ ಸಂಸ್ಥೆಯ ಒಟ್ಟು ಕ್ಯಾಂಪಸ್ ಸುತ್ತ ಚಲಿಸುವ ಡ್ರೋನ್ ಮೂಲಕ ಕಣ್ಗಾವಲಿನ ಸೇವೆ; ಕೃಷಿಯಲ್ಲಿ ನೀರು/ಕೀಟನಾಶಕ ಸಿಂಪಡಿಸುವ ಅಥವಾ ಬೀಜ ಬಿತ್ತುವ ಸೇವೆ – ಇವು ವಿಡಿಯೊದಲ್ಲಿದ್ದ ಕೆಲವು ಸೇವೆಗಳು. ಡ್ರೋನ್
ಈ ವರೆಗೆ ಹೇಳಿದ ಹೆಚ್ಚಿನ ಡ್ರೋನ್ ಗಳು ಮಾನವ ‘ಆಪರೇಟರ್’ ಹಾರಿಸಿ ನಿಯಂತ್ರಿಸುವಂಥವು. AXLDRONE (www.axldrone.com) ಎಂಬ ಕಂಪನಿ ಪರಸ್ಪರ ಸಂಯೋಜನೆ/ಸಂಪರ್ಕ ಇರುವ ಹಲವು ಡ್ರೋನ್ ಗಳ ಜಾಲ ವನ್ನು ನಿಯಂತ್ರಿಸುವ ಮೊಬೈಲ್ ಆಪ್ ಮತ್ತು ಕಂಪ್ಯೂಟರ್ ಸಾಫ್ಟ್ ವೇರ್ ಜತೆ ಒಂದು ಪ್ಯಾಕೇಜ್ ನ್ನು ಕೊಡುತ್ತದೆ. ಇದನ್ನು ಸಂಕಷ್ಟದಲ್ಲಿರುವ ಅಥವಾ ಕಾಣೆಯಾದವರನ್ನು ಹುಡುಕಿ ರಕ್ಷಿಸುವ ವಿಪತ್ತು ನಿರ್ವಹಣೆಯ ವಿಶೇಷ ‘ಮಿಶನ್’ ಗಳಲ್ಲಿ; ಯಾವುದೇ ರೀತಿಯ ದೊಡ್ಡ ಪ್ರದೇಶದ ಗಡಿ ಕಣ್ಗಾವಲಿಗೆ; ಒಂದು ಪ್ರದೇಶದ ಕ್ಷೇತ್ರ ಸಮೀಕ್ಷೆ ಅಥವಾ ವಿವರವಾದ ಮ್ಯಾಪಿಂಗ್ ಗೆ; ದೊಡ್ಡ ಕೃಷಿ ಫಾರ್ಮುಗಳಲ್ಲಿ ಬಳಸಬಹುದಂತೆ.
ಡ್ರೋನ್ ‘ವಿನಾಶಕ’ !
ರಕ್ಷಣಾ ಪಡೆಗಳಿಗೆ ಸಂಬಂಧಿಸಿದ ಡ್ರೋನ್ ಗಳನ್ನು ತಯಾರಿಸುವ ಕಂಪನಿಗಳೂ ಇದ್ದವು ಅವುಗಳಲ್ಲಿ ಒಂದು AccelUAV (www.acceluav.com) ಎಂಬ ಕಂಪನಿ ತಮ್ಮ ‘ವಿನಾಶಕ’ ಎಂಬ ಉಪಕರಣ ಡ್ರೋನ್ ಹಿಂಡುಗಳ ದಾಳಿಗೆ ಪ್ರತಿದಾಳಿ ಮಾಡಿ ಹೊಡೆದುರುಳಿಸುವ ಕೆಲಸ ಮಾಡುತ್ತದೆ ಎಂದು ಹೇಳುತ್ತದೆ. ಅದರ ಕುರಿತು ಕಂಪನಿ ಮಾಹಿತಿ ಹಂಚಿಕೊಂಡಿದೆ. ಅದರ ಫೋಟೊ ಬಿಟ್ಟರೆ, ಉಪಕರಣದ ಮಾದರಿ ಅಥವಾ ಅದರ ಕೆಲಸದ ವಿಡಿಯೊವನ್ನೂ ಹಂಚಿಕೊಂಡಿಲ್ಲ. ಇದನ್ನು ರಕ್ಷಣಾ ಪಡೆಗಳಲ್ಲದೆ, ಆಂತರಿಕ ಭದ್ರತಾ ಪಡೆಗಳು (ಪೋಲಿಸ್ ಇತ್ಯಾದಿ) ಮತ್ತು ಆಯಕಟ್ಟಿನ ಸ್ಥಾವರ ಗಳ (ತೈಲ ಶುದ್ಧೀಕರಣ ಘಟಕ, (ಅಣು) ವಿದ್ಯುತ್ ಉತ್ಪಾದನಾ ಘಟಕ, ವಿಮಾನ ನಿಲ್ದಾಣ ಇತ್ಯಾದಿ) ಭದ್ರತೆ ನೋಡಿಕೊಳ್ಳುವ ಸಿ.ಆರ್.ಪಿ.ಎಫ್/ಸಿ.ಐ.ಎಸ್.ಎಫ್ ನಂತಹ ಸಂಸ್ಥೆಗಳು ಬಳಸಬಹುದು ಎಂದು ಕಂಪನಿ ಹೇಳಿದೆ. ಡ್ರೋನ್ ಬಳಕೆ ವ್ಯಾಪಕವಾಗುತ್ತಿದ್ದಂತೆ ಮತ್ತು ಅದು ಎಲ್ಲರಿಗೂ ಸಾಕಷ್ಟು ಅಗ್ಗವಾಗಿ ಲಭ್ಯವಾಗುತ್ತಿದ್ಧಂತೆ ಅವನ್ನು ವಿನಾಶಕಾರಿ ರೀತಿಯಲ್ಲಿ ಬಳಸುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ ಇದು ನಾಗರಿಕ ಭದ್ರತಾ ಸೇವಾ ಕ್ಷೇತ್ರದಲ್ಲೂ ಅಗತ್ಯವಾಗುತ್ತದೆ ಎಂದು ಕಂಪನಿ ಭಾವಿಸುತ್ತದೆ.

ಡ್ರೋನ್ ತಯಾರಕರು ಮಾತ್ರವಲ್ಲದೆ ಡ್ರೋನ್ ಉದ್ಯಮದ ಒಂದು ವಲಯವೇ (ಇಕೊ-ಸಿಸ್ಟಮ್) ಬೆಳೆದಿದ್ದು, ಈ ವಲಯದ ಹಲವು ಇತರ ಉದ್ಯಮಗಳೂ ಸಂತೆಯಲ್ಲಿ ಭಾಗವಹಿಸಿದ್ದವು. ಡ್ರೋನ್ ನ ವಿವಿಧ ಭಾಗಗಳ (ಫ್ರೇಮ್, ಮೋಟರ್, ಬ್ಯಾಟರಿ, ಸೆನ್ಸರ್, ಚಾರ್ಜರ್ ಇತ್ಯಾದಿ) ತಯಾರಕರು; ಈ ತಯಾರಿಕೆಗೆ ಯಂತ್ರಗಳ (ಉದಾ: ವಿಶಿಷ್ಟ ವಿನ್ಯಾಸದ ರೋಟರ್, ಫ್ರೇಮ್ ಗಳನ್ನು 3 ಡಿ ಪ್ರಿಂಟಿಂಗ್ ಮೂಲಕ ತಯಾರಿಸುವ ಎಚ್.ಪಿ ಮಶೀನ್ ಇತ್ತು), (ಕಾಂಪೋಸಿಟ್ ಮುಂತಾದ) ವಿಶಿಷ್ಟ ಸಾಮಗ್ರಿಗಳ ತಯಾರಕರು; ಡ್ರೋನ್ ಬಳಕೆ ಹೊಸದದ್ದರಿಂದ ಅದಕ್ಕೆ ತರಬೇತಿ ಕೊಡುವವರು; ಡ್ರೋನ್ ಬಳಕೆ ಬಗ್ಗೆ ಹೊಸ ಬಳಕೆದಾರರಿಗೆ ಸಲಹಾಕಾರರು (ಕನ್ಸಲ್ಟೆನ್ಸಿ) – ಹೀಗೆ ಹತ್ತು ಹಲವು ಕಂಪನಿಗಳು ಸಂತೆಯಲ್ಲಿ ಭಾಗವಹಿಸಿದ್ದವು. ಡ್ರೋನ್ ಗೆ ಮೀಸಲಾದ ಒಂದು ಪತ್ರಿಕೆ ಡ್ರೋನ್-ಆಚಾರ್ಯ (Drone Acharyas Magazine), ಒಂದು ಯೂ ಟ್ಯೂಬ್ ಡ್ರೋನ್ ಟಿವಿ (dronetv.in) ಸಹ ಇದ್ದವು. ಡ್ರೋನ್

ಯಾವುದೇ ಕ್ಷೇತ್ರದಲ್ಲಿ ಡ್ರೋನ್ ಗಳ ಜತೆಗೆ ರೊಬೊಟ್ ಮತ್ತು ಕೃತಕ ಬುದ್ಧಿಮತ್ತೆಗಳ ಜಂಟಿ ಅನ್ವಯ ಮಾಡಿದರೆ, ಬಹುಶಃ ಇಂದಿಗೆ ದೊಡ್ಡ ಸಂಖ್ಯೆಯಲ್ಲಿ ಲಭ್ಯವಿರುವ (ಉದಾ: ಕೃಷಿ, ಸಾಗಾಣಿಕೆ, ವಿತರಣೆ, ಸೆಕ್ಯುರಿಟಿ) ಹೆಚ್ಚಿನ ಜೀವನೋಪಾಯದ ಮಾರ್ಗಗಳು ಮತ್ತು ಉದ್ಯೋಗ ಗಳಿಗೆ ಸಂಚಕಾರ ಕಾದಿದೆ ಎಂಬಂತೆ ಕಾಣುತ್ತದೆ. ಡ್ರೋನ್ ಚಾಲಕ, ರಿಪೇರಿದಾರ ಬಿಟ್ಟರೆ (ಅದೂ ಮೊದಲಿನ ಹಂತದಲ್ಲಿ, ಕೊನೆಗೂ ಅದನ್ನು ಕೃತಕ ಬುದ್ಧಿಮತ್ತೆಯ ಕಂಪ್ಯೂಟರ್ ಗಳು ವಹಿಸಿಕೊಳ್ಳಬಹುದು) ಇತರ ಉದ್ಯೋಗಗಳು ಮಾಯವಾಗಬಹುದು. ಉದಾಹರಣೆಗೆ ಅಮೇಜಾನ್ ತನ್ನ ಸಾಗಾಣಿಕೆ-ವಿತರಣೆ ಸೇವೆಯಲ್ಲಿ, ಖರೀದಿ ಜಾಗದಿಂದ, ಕೇಂದ್ರೀಯ ಉಗ್ರಾಣಕ್ಕೆ ಸಾಗಾಣಿಕೆ, ಪ್ರಾದೇಶಿಕ ಉಗ್ರಾಣದಿಂದ ಸ್ಥಳೀಯ ವಿತರಣಾ ಕೇಂದ್ರಗಳಿಗೆ ಸಾಗಾಣಿಕೆ, ಅಲ್ಲಿಂದ ಮನೆಮನೆಗೆ ವಿತರಣೆ – ಇವೆಲ್ಲವನ್ನೂ ಡ್ರೋನ್, ರೊಬೊಟ್ ಮತ್ತು ಕೃತಕ ಬುದ್ಧಿಮತ್ತೆ ಸಾಮರ್ಥ್ಯದ ಕಂಪ್ಯೂಟರ್ ಗಳ ಜಂಟಿ ಅನ್ವಯದಿಂದ, ಹೆಚ್ಚೂ ಕಡಿಮೆ ಪೂರ್ಣವಾಗಿ ಮಾನವ ರಹಿತವಾಗಿ ಸಾಧಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಡ್ರೋನ್
ಡ್ರೋನ್ ಸಂತೆ, ಡ್ರೋನ್ ತಂತ್ರಜ್ಞಾನದ ಬಳಕೆ ನಮ್ಮ ಸಮಾಜದ ಮೇಲೆ ಮೂಡಿಸಲಿರುವ ಪರಿಣಾಮಗಳ ವಿರಾಟ್ ದರ್ಶನ ಮಾಡಿತ್ತು.
**************************************
ಇದನ್ನೂ ನೋಡಿ : ಬಸವ ಜಯಂತಿ ವಿಶೇಷ | ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ Janashakthi Media ಡ್ರೋನ್
