ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್‌ಎ) ಈಶಾನ್ಯ ಭಾಗದ ರಾಜ್ಯಗಳಲ್ಲಿ ಆರ್ಕ್ಟಿಕ್ ಚಳಿಗಾಳಿಯಿಂದಾಗಿ ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶ ಕುಸಿತ ಕಂಡಿದೆ. ಇಲ್ಲಿ ಶೀತಗಾಳಿಯಿಂದ ತಾಪಮಾನ ಮೈನಸ್ ಡಿಗ್ರಿಗೆ ತಲುಪಿದ್ದು, ಜನರು ಚಳಿಯಿಂದ ನಡುಗುವಂತಹ ಪರಿಸ್ಥಿತಿ ಎದುರಾಗಿದೆ.
ನ್ಯೂ ಹ್ಯಾಂಪ್ಶೈರ್ನ ಮೌಂಟ್ ವಾಷಿಂಗ್ಟನ್ ಎಂಬಲ್ಲಿ ಉಷ್ಣಾಂಶ ಬರೋಬ್ಬರಿ ಮೈನಸ್ 79 ಡಿಗ್ರಿಗೆ ಕುಸಿದಿದೆ. ಈ ಭಾಗದಲ್ಲಿ ಇಂತಹ ವಾತಾವರಣ ಬಹಳ ಅಪರೂಪಕ್ಕೊಮ್ಮೆ ದಾಖಲಾಗುವಂಥದ್ದು ಎಂದು ವರದಿಗಳು ಹೇಳುತ್ತಿವೆ.
ಹವಾಮಾನ ವರದಿಗಳ ಪ್ರಕಾರ ಆರ್ಕ್ಟಿಕ್ ಶೀತಗಾಳಿಯು ಕೆನಡಾದ ಪೂರ್ವಭಾಗದಿಂದ ಅಮೆರಿಕ ಪ್ರವೇಶಿಸಿದೆ. ಮಿನೇಸೊಟಾ ರಾಜ್ಯದ ಕಾಬೆಟೊಗಾಮ ಎಂಬ ಪ್ರದೇಶದಲ್ಲಿ ಉಷ್ಣಾಂಶ ಮೈನಸ್ 39.5 ಡಿಗ್ರಿಗೆ ತಲುಪಿದೆ. ಈ ಅವಧಿಯಲ್ಲಿ ಅಮೆರಿಕದಲ್ಲಿ ದಾಖಲಾದ ಅತಿ ಕಡಿಮೆಯ ಉಷ್ಣಾಂಶ ವರದಿ ಇದಾಗಿದೆ ಎನ್ನಲಾಗಿದೆ.
ಶೀತಗಾಳಿಯ ಪರಿಣಾಮವಾಗಿ ಅಮೆರಿಕದ ಈಶಾನ್ಯ ಭಾಗದ ಬಹುತೇಕ ಎಲ್ಲಾ ಜಾಗಗಳಲ್ಲೂ ಮೈನಸ್ 40 ಡಿಗ್ರಿಗಿಂತ ಕಡಿಮೆ ಉಷ್ಣಾಂಶವಿದೆ. ಮೌಂಟ್ ವಾಷಿಂಗ್ಟನ್ ಸ್ಟೇಟ್ ಪಾರ್ಕ್ ಬಳಿ ಮೈನಸ್ 76 ಡಿಗ್ರಿಯವರೆಗೂ ಇಳಿದಿದೆ ಎಂದು ವರದಿಯಾಗಿದ್ದು ಶೀತಗಾಳಿಯಿಂದ ಜನರು ನಲುಗು ಹೋಗಿದ್ದಾರೆ.
ಆರ್ಕ್ಟಿಕ್ ಬ್ಲಾಸ್ಟ್ ಎಂದರೆ…
ಭೂಮಿಯ ಉತ್ತರ ಗೋಳ ಸುತ್ತಮುತ್ತಲ ಚಳಿಗಾಳಿಯು ಹವಾಮಾನದ ಕೆಳಸ್ತರ ಒತ್ತಡ ಪ್ರದೇಶದಲ್ಲಿ ಬಂಧಿಯಾಗಿರುತ್ತದೆ. ಭೂಮಿಯಿಂದ ಹಲವು ಕಿ.ಮೀ. ಮೇಲಿನಿಂದ ಆವರಿಸುವ ಜೆಟ್ ಸ್ಟ್ರೀಮ್ಗಳು ಈ ಚಳಿಗಾಳಿಯು ಹಿಡಿದಿಡುತ್ತದೆ. ಹೀಗಾಗಿ ಸಾಮಾನ್ಯವಾಗಿ ಈ ಚಳಿಗಾಳಿಯು ನಾರ್ತ್ ಪೋಲ್ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಕೆಲವೊಮ್ಮೆ ಕಡಿಮೆ ಒತ್ತಡ ಪ್ರದೇಶ ದುರ್ಬಲವಾಗಿಬಿಟ್ಟರೆ ಜೆಟ್ ಸ್ಟ್ರೀಮ್ ಅನ್ನು ದಬ್ಬುತ್ತದೆ. ಇದರಿಂದ ಶೀತಗಾಳಿಯು ಬೇರೆ ಪ್ರದೇಶಗಳಿಗೆ ವ್ಯಾಪಿಸುತ್ತದೆ.
ಹೀಗಾದಲ್ಲಿ ಉಷ್ಣಾಂಶವು ಸಾಮಾನ್ಯ ದಿನಗಳಿಗಿಂತ ತೀರಾ ಕೆಳಗೆ ಕುಸಿಯುತ್ತದೆ. ದಟ್ಟ ಮಂಜಿನ ಹನಿ, ಹಿಮಪಾತಗಳು ಸಂಭವಿಸುತ್ತವೆ. ಈ ಆರ್ಕ್ಟಿಕ್ ಸ್ಫೋಟವನ್ನು ಪೋಲಾರ್ ವೋರ್ಟೆಕ್ಸ್ ವಿದ್ಯಮಾನ ಎಂದೂ ಕರೆಯಲಾಗುತ್ತದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ