ತಿರುವನಂತಪುರ: ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಎಡರಂಗ ಸರಕಾರ ಓಣಂ ಹಬ್ಬದ ಪ್ರಯುಕ್ತ ಬೋನಸ್, ಉತ್ಸವ ಭತ್ಯೆ, ರಜೆ ವೇತನ ಮತ್ತು ಮುಂಗಡ ವೇತನ ಪಾವತಿ ಸೇರಿದಂತೆ ಇದೀಗ ರಾಜ್ಯದ 87 ಲಕ್ಷ ಪಡಿತರ ಚೀಟಿದಾರರಿಗೆ ಉಚಿತ ಆಹಾರ ಕಿಟ್ ವಿತರಣೆ ಮಾಡುತ್ತಿದೆ.
ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಆಹಾರ ಧಾನ್ಯಗಳು, ಬೇಳೆಕಾಳುಗಳು, ಕಾಂಡಿಮೆಂಟ್ಸ್, ಮಸಾಲೆಗಳು, ಎಣ್ಣೆ ಇತ್ಯಾದಿ ಸೇರಿದಂತೆ 14 ವಸ್ತುಗಳನ್ನು ಒಳಗೊಂಡಿರುವ ಕಿಟ್‌ಗಳಿಗಳ ವಿತರಣೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಇದಕ್ಕಾಗಿ ರಾಜ್ಯ ಸರ್ಕಾರ 425 ಕೋಟಿ ರೂ ಬಿಡುಗಡೆ ಮಾಡಿದೆ. ಕೇರಳದಲ್ಲಿ ಎಲ್ಲರೂ ಓಣಂ ಆಚರಿಸಲು ಸಾಧ್ಯವಾಗುತ್ತದೆ ಎಂದು ಕೇರಳ ಎಡರಂಗ ಸರ್ಕಾರ ಹೇಳಿದೆ.
ಓಣಂ ಆಹಾರ ಕಿಟ್ ನಲ್ಲಿರುವ ವಸ್ತುಗಳು
ಗೋಡಂಬಿ: 50 ಗ್ರಾಂ, ಮಿಲ್ಮಾ ತುಪ್ಪ: 50 ಮಿಲಿ ಲೀಟರ್, ಶಬರಿ ಮೆಣಸಿನ ಪುಡಿ: 100 ಗ್ರಾಂ. ಅರಿಶಿನ ಪುಡಿ: 100 ಗ್ರಾಂ. ಏಲಕ್ಕಿ: 20 ಗ್ರಾಂ. ಶಬರಿ ತೆಂಗಿನ ಎಣ್ಣೆ: 500 ಮಿಲಿ. ಚಹಾದ ಪುಡಿ: 100 ಗ್ರಾಂ. ಶರ್ಕ್ಕರ ವರಟ್ಟಿ: 100 ಗ್ರಾಂ, ಉಣಕ್ಕಲ್ಲರಿ (ಕೇರಳ ಕಚ್ಚಾ ಅಕ್ಕಿ/ ಪಾಯಸ ಅಕ್ಕಿ): 500 ಗ್ರಾಂ, ಸಕ್ಕರೆ: 1 ಕೆಜಿ, ಪಚ್ಚೆ ಹಸಿರು: 500 ಗ್ರಾಂ, ತೊಗರಿ ಬೇಳೆ: 250 ಗ್ರಾಂ, ಪುಡಿ ಉಪ್ಪು: 1 ಕೆಜಿ, ಬಟ್ಟೆ ಚೀಲ: 1. ಒಳಗೊಂಡಿದೆ.
ಬಟ್ಟೆ ಚೀಲ ಸೇರಿದಂತೆ 14 ವಸ್ತುಗಳ ಉಚಿತ ಆಹಾರ ಕಿಟ್‌ಗಳನ್ನು ಸೆಪ್ಟೆಂಬರ್ 7 ರವರೆಗೆ ವಿತರಣೆ ಮಾಡಲಾಗುತ್ತದೆ. ಆಗಸ್ಟ್ 23 ಮತ್ತು 24 ರಂದು ಹಳದಿ ಪಡಿತರ ಚೀಟಿದಾರರು, ಅಂತ್ಯೋದಯ ಅನ್ನ ಯೋಜನೆ(ಎಎವೈ)ದಾರರಿಗೆ ಕಿಟ್‌ಗಳನ್ನು ವಿತರಿಸಲಾಗುವುದು. ಪಿಎಚ್‌ಎಚ್, ಗುಲಾಬಿ ಪಡಿತರ ಚೀಟಿದಾರರರು ಕಿಟ್‌ಗಳನ್ನು ಆಗಸ್ಟ್ 25, 26 ಮತ್ತು 27 ರಂದು ಪಡೆಯಬಹುದು.
ಆದ್ಯತೆಯೇತರ ಸಬ್ಸಿಡಿ(ಎನ್‌ಪಿಎಸ್) – ನೀಲಿ ಪಡಿತರ ಚೀಟಿ ಹೊಂದಿರುವವರಿಗೆ ಆಗಸ್ಟ್ 29, 30 ಮತ್ತು 31 ರಂದು ಆಹಾರ ಕಿಟ್ ವಿತರಿಸಲಾಗುವುದು. ಆದರೆ ಆದ್ಯತೆಯೇತರ ಸಬ್ಸಿಡಿ (ಎನ್‌ಪಿಎನ್‌ಎಸ್) – ಬಿಳಿ ಕಾರ್ಡ್ ಹೊಂದಿರುವವರು ಸೆಪ್ಟೆಂಬರ್ 1, 2 ಮತ್ತು 3 ರಂದು ನೀಡಲಾಗುತ್ತದೆ.
ನಿಗದಿತ ದಿನಾಂಕದಂದು ಪಡಿತರದಾರರು ತಮ್ಮ ಆಹಾರ ಕಿಟ್‌ಗಳನ್ನು ಪಡೆಯಲು ಸಾಧ್ಯವಾಗದವರು ಸೆಪ್ಟೆಂಬರ್ 4, 5, 6 ಮತ್ತು 7 ರಂದು ಪಿಡಿಎಸ್ ಅಂಗಡಿಗಳಿಂದ ಪಡೆಯಬಹುದು. ಎಲ್ಲಾ ಕಾರ್ಡುದಾರರು ತಮ್ಮ ಕಿಟ್‌ಗಳನ್ನು ಆಯಾ ಪಡಿತರ ಅಂಗಡಿಗಳಿಂದಲೇ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎಲ್ಲಾ ಸರ್ಕಾರಿ ಮಾನ್ಯತೆ ಪಡೆದ ಕಲ್ಯಾಣ ಸಂಸ್ಥೆಗಳ ಮನೆ ಬಾಗಿಲಿಗೆ ತಲುಪಿ ಆಹಾರ ಕಿಟ್‌ಗಳನ್ನು ತಲುಪಿಸುತ್ತಾರೆ. ಅಲ್ಲದೆ, ಬುಡಕಟ್ಟು ಕಾಲೋನಿಗಳಿಗೂ ತಲುಪಿಸಲು ಶೀಘ್ರಗತಿಯ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.
ಕೇರಳ ರಾಜ್ಯದ ಎರಡಂಗ ಸರ್ಕಾರವು ಓಣಂ ಹಬ್ಬದ ಪ್ರಯುಕ್ತ ಸೆಪ್ಟಂಬರ್ ತಿಂಗಳಿನಲ್ಲಿ 8,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಬೋನಸ್ ನೀಡುವುದು ಅಲ್ಲದೆ ಓಣಂ ದಿನಗಳಲ್ಲಿ 2 ತಿಂಗಳ ಕಲ್ಯಾಣ ಪಿಂಚಣಿಯನ್ನು ಒಟ್ಟಿಗೆ ನೀಡಲು ನಿರ್ಧರಿಸಲಾಗಿದೆ.
ಕಳೆದ ವರ್ಷ 4,000 ರೂ. ಬೋನಸ್ ಹಾಗೂ ಅರ್ಹರಲ್ಲದವರಿಗೆ 2,750 ರೂ. ಉತ್ಸವ ಭತ್ಯೆ ನೀಡಲಾಗಿತ್ತು. ಸರಕಾರಿ ನೌಕರರಿಗೆ ಓಣಂ ಮುಂಗಡವಾಗಿ ತಲಾ 15 ಸಾವಿರ ರೂ. ಹಾಗೂ ಅರೆಕಾಲಿಕ ನೌಕರರು ಸೇರಿದಂತೆ ಇತರ ಉದ್ಯೋಗಿಗಳಿಗೆ 5,000 ಮುಂಗಡ ನೀಡಲಾಗಿತ್ತು. ಈ ಬಾರಿಯೂ ಇದೇ ಮೊತ್ತದ ಸವಲತ್ತು ನೀಡಲು ಹಣಕಾಸು ಇಲಾಖೆ ಚಿಂತನೆ ನಡೆಸಿದೆ.
ಆರ್ಥಿಕವಾಗಿ ಹಿಂಡುತ್ತಿರುವ ಕೇಂದ್ರ: ಪಿಣರಾಯಿ ವಿಜಯನ್
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯವನ್ನು ಆರ್ಥಿಕವಾಗಿ ಹಿಂಡುವ ಮೂಲಕ ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಮತ್ತು ರಾಜ್ಯದ ಸೀಮಿತ ಹಕ್ಕುಗಳನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದೂ ಹೇಳಿದ್ದಾರೆ.
ದಕ್ಷಿಣದ ರಾಜ್ಯದ ಮೇಲೆ ಕೇಂದ್ರ ಸರ್ಕಾರವು ವಿಶಿಷ್ಟ ರೀತಿಯ ಹಣಕಾಸಿನ ಒತ್ತಡವನ್ನು ಹೇರುತ್ತಿದೆ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಉಲ್ಲಂಘಿಸುತ್ತಿದೆ. ರಾಜ್ಯಕ್ಕೆ ಲಭಿಸಬೇಕಾದ ಕಂದಾಯ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಮತ್ತು ಸಾಲದ ಮಿತಿಯನ್ನು ಮೊಟಕುಗೊಳಿಸುವ ಯತ್ನ ಕೂಡ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ.