ಹೈದರಾಬಾದ್: ಅಂತರ್ ಧರ್ಮೀಯ ವಿವಾಹಕ್ಕೆ ಒಂದು ಜೀವವೇ ಬಲಿಯಾಗಿದೆ. 26 ವರ್ಷದ ದಲಿತ ಯುವಕನನ್ನ ಭೀಕರವಾಗಿ ಕೊಲೆ ಹತ್ಯೆ ಮಾಡಲಾಗಿದೆ. ಕೊಲೆಯಾದ ದಲಿತ ಯುವಕ ಹೆಸರು ಬಿಲ್ಲಿಪುರಂ ನಾಗರಾಜು ಎನ್ನಲಾಗಿದೆ. ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದಕ್ಕೆ ಕೊಲೆ ಮಾಡಲಾಗಿದ್ದು, ಯುವತಿಯ ಸಂಬಂಧಿಕರು ಬುಧವಾರ ರಾತ್ರಿ 9ಗಂಟೆಗೆ ಹತ್ಯೆ ಮಾಡಿದ್ದಾರೆ.
ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನ ಅವರಿಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಸರೂರ್ ನಗರ್‌ನಲ್ಲಿ ನವವಿವಾಹಿತ ದಂಪತಿ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದಾಗ ಯುವತಿಯ ಸಹೋದರ ಹಾಗು ಇನ್ನೊಬ್ಬ ಸಂಬಂಧಿ ಇಬ್ಬರು ದಂಪತಿಗಳನ್ನು ದಾರಿಯಲ್ಲಿ ತಡೆದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಜನರ ಗುಂಪು ಜಮಾಯಿಸಿದರೂ ದಾಳಿಕೋರರು ನಾಗರಾಜು ಅವರನ್ನು ಥಳಿಸುತ್ತಲೇ ಇದ್ದರು. ಈ ಭೀಕರ ಹತ್ಯೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸರ ಪ್ರಕಾರ ಬಿಲ್ಲಿಪುರಂ ನಾಗರಾಜು ಮೇಲೆ ಹಲ್ಲೆ ಮಾಡಿದ್ದು ಇಬ್ಬರಾದರೆ, ನಾಗರಾಜು ಪತ್ನಿ ಸಯದಾ ಅಶ್ರಿನ್ ಸುಲ್ತಾನ ಪ್ರಕಾರ ಈ ದಾಳಿಯಲ್ಲಿ ಐವರು ಭಾಗಿಯಾಗಿದ್ದಾರೆ. ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಲ್ಲಿಪುರಂ ನಾಗರಾಜು ಪರಿಶಿಷ್ಟ ಜಾತಿಗೆ ಸೇರಿದ ಮಾಲ ಸಮುದಾಯದವನಾಗಿದ್ದಾನೆ. ರಂಗಾರೆಡ್ಡಿ ಜಿಲ್ಲೆಯ ಮಾರಪಲ್ಲೆ ಎಂಬ ಊರಿನವನು. ಇನ್ನು, ಅಶ್ರಿನ್ ಅದೇ ಜಿಲ್ಲೆಯ ಘಾನಾಪುರ್ ಗ್ರಾಮದವಳಾಗಿದ್ದಾಳೆ. ಅವರಿಬ್ಬರೂ ಜನವರಿಯಲ್ಲಿ ಹೈದರಾಬಾದ್‌ನ ಹಳೆ ಕ್ವಾರ್ಟರ್ಸ್‌ನಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ತಮ್ಮ ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾಗಿದ್ದರು. 10ನೇ ತರಗತಿಯಿಂದಲೂ ಇಬ್ಬರಿಗೂ ಪರಸ್ಪರ ಪರಿಚಯವಿತ್ತು ಎಂದು ತಿಳಿದುಬಂದಿದೆ.
ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿರುವ ಪ್ರಕಾರ, ಕೊಲೆಯ ಹಿಂದೆ ಇಬ್ಬರು ವ್ಯಕ್ತಿಗಳಿದ್ದಾರೆ. ಐರನ್ ರಾಡ್ ಮತ್ತು ಚಾಕುವಿನಿಂದ ಕೊಲೆ ಮಾಡಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದರೆ, ಕೊಲೆಯ ಉದ್ದೇಶ ಸ್ಪಷ್ಟ ಇದೆ. ಬೇರೆ ಧರ್ಮೀಯ ಎನ್ನುವ ಕಾರಣಕ್ಕೆ ಹತ್ಯೆ ನಡೆದಿದೆ” ಎಂದು ಸರೂರ್‌ನಗರ್ ಇನ್ಸ್‌ಪೆಕ್ಟರ್ ಕೆ. ಸೀತಾರಾಮ್ ಹೇಳಿದ್ದಾರೆ.
ಹಿಂದೂ-ಮುಸ್ಲಿಂ ವಿವಾಹವಾದ್ದರಿಂದ ಬಿಜೆಪಿ ಪಕ್ಷವು ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ಇಲ್ಲಿಯ ಸ್ಥಳೀಯ ಬಿಜೆಪಿ ಕಾರ್ಯಕರ್ತರು ನಾಗರಾಜು ಕೊಲೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಾ, ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಜರುಗಿಸಬೇಕೆಂದು ಒತ್ತಾಯಿಸಿದ್ಧಾರೆ.