ಟೋಕಿಯೋ: ಇಂದು ನಡೆದ ಪುರುಷ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ ರವಿಕುಮಾರ್ ದಹಿಯಾ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಕುಸ್ತಿ ಸ್ಪರ್ಧೆಯ ವಿಭಾಗದಲ್ಲಿ ರವಿ ಕುಮಾರ್ ದಹಿಯಾ ಫೈನಲ್ ಪ್ರವೇಶಿಸಿದ್ದು ಪದಕ ಜಯಿಸುವ ಅಂತದಲ್ಲಿದ್ದಾರೆ.
ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ತಂದುಕೊಡುತ್ತಿರುವ ದೇಶದ ಐದನೇ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆ ರವಿ ಕುಮಾರ್ ಅವರದ್ದಾಗುತ್ತದೆ. 1952ರಲ್ಲಿ ಕೆ.ಡಿ ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಪ್ರಮುಖರು.
ಇದನ್ನು ಓದಿ: ಒಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ-ಬಾಕ್ಸರ್ ಲವ್ಲಿನಾಗೆ ಒಲಿದ ಕಂಚು
57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಾಲ್ಕನೇ ಶ್ರೇಯಾಂಕದ ರವಿ ಕುಮಾರ್ ದಹಿಯಾ ಕಜಕಿಸ್ತಾನದ ಸನಾಯೆವ್ ಎದುರು ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಹೋರಾಟ ನಡೆಸಿದರು. ಆರಂಭದಿಂದಲೇ ಕಜಕಿಸ್ತಾನದ ಕುಸ್ತಿಪಟು 9-2 ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಪೈಪೋಟಿ ನೀಡಿದ ರವಿಕುಮಾರ್ ಫಲಿತಾಂಶದ ದಿಕ್ಕನ್ನೇ ಬದಲಿಸುವ ಮೂಲಕ ಇತಿಹಾಸ ನಿರ್ಮಿಸಿದರು.
57 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ರವಿ ಕುಮಾರ್ ದಹಿಯಾ ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌವೋರ್ ಉಗುವ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ದಹಿಯಾ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ಕೊಲಂಬಿಯಾದ ಟೈಗ್ರೇರೋಸ್ ಉರ್ಬಾನೋ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದರು. ಫೈನಲ್ ಪಂದ್ಯವು ಆಗಸ್ಟ್ 05ರ ಸಂಜೆ 4.10ಕ್ಕೆ ಆರಂಭವಾಗಲಿದೆ.
ಈ ಬಾರಿಯ ಒಲಿಂಪಿಕ್ಸ್ನಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಈಗಾಗಲೇ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ. ರವಿ ಕುಮಾರ್ ದಹಿಯಾ ಫೈನಲ್ ಪ್ರವೇಶಿಸುವುದರೊಂದಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಪಡೆದುಕೊಂಡಿದ್ದಾರೆ.