10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ` ಸೂಲಗಿತ್ತಿ ಸುಲ್ತಾನ್ ಬಿ’ ಇನ್ನಿಲ್ಲ

ಜಗಳೂರು : 10 ಸಾವಿರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದ ಸೂಲಗಿತ್ತು ಸುಲ್ತಾನ್ ಬಿ (85) ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ದಶಕಗಳ ಕಾಲ ಹಳ್ಳಿಗಾಡಿನ ಅನಕ್ಷರಸ್ಥ ಬಡ ಹೆಣ್ಣುಮಕ್ಕಳಿಗೆ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಸಾವಿರಾರು ಜನರ ಪಾಲಿಗೆ ಜೀವರಕಕ್ಷಿಯಾಗಿದ್ದ ಸುಲ್ತಾನಮ್ಮ ಎಂದೇ ಹೆಸರಾಗಿದ್ದ ಸುಲ್ತಾನ್ ಬಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದವರಾದ ಸುಲ್ತಾನ್ ಬಿ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳೇ ಇಲ್ಲದ ಸಂದರ್ಭದಲ್ಲಿ ಹೆರಿಗೆ ಮಾಡಿಸಲು ಆರಂಭಿಸಿದ್ದರು. ಸುಮಾರು 7 ದಶಕಗಳ ಕಾಲ 10 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಉಚಿತವಾಗಿ ಮಾಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ಅಸ್ಪತ್ರೆಗಳೇ ಇಲ್ಲದ ಸಂದರ್ಭದಲ್ಲಿ 10 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಉಚಿತವಾಗಿ ಮಾಡಿಸಿರುವ ಸುಲ್ತಾನ್ ಬಿ ಗೆ 2021 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ನಾಟಿ ವೈದ್ಯೆ: ಇಸುಬು, ಹುಳಕಡ್ಡಿಗೂ (ಚರ್ಮ ಸಂಬಂಧಿ ರೋಗಗಳು) ಪರಿಣಾಮಕಾರಿ ನಾಟಿ ಔಷಧ ಕೊಡುತ್ತಿದ್ದರು. ಅಲೋಪಥಿ ವೈದ್ಯರಿಂದ ಗುಣಮುಖವಾಗದ ಹಲವು ಚರ್ಮರೋಗಳನ್ನು ಗಿಡಮೂಲಿಕೆ ಚಿಕಿತ್ಸೆಯ ಮೂಲಕ ಗುಣಪಡಿಸುತ್ತಿದ್ದರು.

ಬಾಲ್ಯದಿಂದ ಕೊನೆಯವರೆಗೆ ಬಡತನದಲ್ಲೇ ಜೀವಿಸಿದ್ದ ಸುಲ್ತಾನಮ್ಮ ತಮ್ಮ ಬಹುಮುಖಿ ಸಮಾಜಸೇವೆಯಲ್ಲೇ ತಮ್ಮ ಬದುಕಿನ ಸಾರ್ಥಕವನ್ನು ಕಂಡುಕೊಂಡಿದ್ದರು. ಎತ್ತಿನಗಾಡಿ ಇಟ್ಟುಕೊಂಡು ಪಟ್ಟಣದಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಗಂಡ ಹಾಗೂ ಪುತ್ರ ಅಕಾಲಿಕವಾಗಿ ಮೃತಪಟ್ಟಾಗಲೂ ಎದೆಗುಂದದ ಸುಲ್ತಾನ್‌ಬಿ ಸ್ವತಃ ಬಾರುಕೋಲು ಹಿಡಿದು ಒಂಟಿ ಎತ್ತಿನ ಗಾಡಿಯನ್ನು ಓಡಿಸುತ್ತಾ ಪಟ್ಟಣದಲ್ಲಿ ಹಲವು ಕಾಲ ಮಹಿಳಾ ಹಮಾಲಿಯಾಗಿ ಕೆಲಸ ಮಾಡಿದ್ದರು.

ಸುಲ್ತಾನ್‌ಬಿ ಅವರ ಅಗಲಿಕೆಯಿಂದ ಪಾರಂಪರಿಕ ವೈದ್ಯ ಪದ್ದತಿಯ, ತಾಯಿ ಹೃದಯದ ಸಮಾಜಸೇವಕಿಯನ್ನು ಸಮಾಜ ಕಳೆದುಕೊಂಡಂತಾಗಿದೆ.

Donate Janashakthi Media

Leave a Reply

Your email address will not be published. Required fields are marked *