ಎಐಕೆಎಸ್ ಹುತಾತ್ಮ ಜ್ಯೋತಿ ಜಾಥಾಕ್ಕೆ ಅದ್ದೂರಿ ಸ್ವಾಗತ
ಕೋಲಾರ: ರೈತರು ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಡಿದರೆ ಎಂತಹ ಸರ್ವಾಧಿಕಾರಿ ಸರ್ಕಾರಗಳನ್ನು ಕೂಡ ಮಣಿಸಬಹುದು ಎಂಬುದನ್ನು ದೆಹಲಿಯ ರೈತ ಹೋರಾಟವೇ ಸಾಕ್ಷಿಯಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ರಾಷ್ಟ್ರೀಯ ಹಣಕಾಸು ಕಾರ್ಯದರ್ಶಿ ಹಾಗೂ ಕೇರಳ ಮಾಜಿ ಶಾಸಕ ಪಿ.ಕೃಷ್ಣಪ್ರಸಾದ್ ತಿಳಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಎಐಕೆಎಸ್ ವತಿಯಿಂದ 33ನೆಯ ರಾಷ್ಟ್ರೀಯ ಸಮ್ಮೇಳನದ ಭಾಗವಾಗಿ ನಗರಕ್ಕೆ ಆಗಮಿಸಿದ ಹುತ್ಮಾತ ಜಾಥಾವನ್ನು ಸ್ವಾಗತಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ರೈತ ವಿರೋಧಿ ನೀತಿಗಳ ವಿರುದ್ಧದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರವೂ ದೊಡ್ಡ ಪ್ರಮಾಣದ ಹೋರಾಟಗಳಲ್ಲಿ ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ದಮನ ಮತ್ತು ದೌರ್ಜನ್ಯ ಕ್ರೂರವಾಗಿದ್ದರೂ ಭಯಪಡದೇ ಅಪ್ರತಿಮ ಧೈರ್ಯ ಸಾಹಸದಿಂದ ಹೋರಾಟ ಮುನ್ನಡೆಸಿದ್ದಾರೆ. ಸ್ವಾತಂತ್ರ್ಯ ಪೂರ್ವದ ಹೋರಾಟಗಳು ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಭಾಗವಾಗಿದ್ದರೆ ನವ ಉದಾರವಾದದ ಕಾಲಘಟ್ಟದ ಇವತ್ತಿನ ಹೋರಾಟಗಳು ಕಾರ್ಪೊರೇಟ್ ಕಂಪನಿ ವಿರೋಧಿ ಹಾಗೂ ಸಮಾಜವಾದಿ ಸಮಾಜ ಸ್ಥಾಪನೆ ಹೋರಾಟದ ಅವಿಭಾಜ್ಯವಾಗಿದೆ ಎಂದರು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಗುಲಾಮರ ರೀತಿಯಲ್ಲಿ ಸರಕಾರ ನಡೆಸುತ್ತಾ ಇದ್ದು ಪ್ರತಿಯೊಂದು ನೀತಿಗಳು ಯೋಜನೆಗಳು ಅಂಬಾನಿ ಅದಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿದ್ದು ಇಂತಹ ನೀತಿಗಳ ವಿರುದ್ದವಾಗಿ ಮುಂದಿನ ಏಪ್ರಿಲ್ 5 ರಂದು ದೆಹಲಿಯಲ್ಲಿ ಸಂಘರ್ಷ ರ‍್ಯಾಲಿ ನಡೆಯಲಿದೆ. ಪ್ರತಿ ಹಳ್ಳಿಯಿಂದ ಭಾಗವಹಿಸುವಂತೆ ರೈತರಿಗೆ ತಿಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಜಂಟಿ ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಚಾರಗಳಲ್ಲಿ ಹೇಳಿಕೊಂಡಂತೆ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಬಿಜೆಪಿಗೆ ಮನುಷ್ಯರ ಮೇಲಿನ ಪ್ರೀತಿಗಿಂತ ಗೋವುಗಳ ಮೇಲೆ ಪ್ರೀತಿ ಜಾಸ್ತಿಯಾಗಿದೆ ಹಲವಾರು ಜನ ವಿರೋಧಿ ಕಾಯ್ದೆಗಳ ಮೂಲಕ ರೈತ ಸಮುದಾಯಕ್ಕೆ ಕಿರುಕುಳ ನೀಡುತ್ತಿವೆ. ಬಲವಾದ ರೈತ ಚಳವಳಿಯಿಂದ ಮಾತ್ರ ರೈತ ಸಮುದಾಯದ ಹಿತರಕ್ಷಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಸಮ್ಮೇಳನದ ಹೆಸರಿನಲ್ಲಿ ಜಿಲ್ಲೆಯಲ್ಲಿ ಪ್ರತಿಯೊಂದು ಹಳ್ಳಿಗೂ ರೈತ ಸಂಘ ತೆಗೆದುಕೊಂಡುತ್ತೇವೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ಕಾರ್ಮಿಕ ಜನಪರ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘಟನೆ ಶಕ್ತಿಯಿಂದ ಸಾಧ್ಯವಾಗುತ್ತದೆ ರೈತರ ಬೆಳೆಗಳಿಗೆ ಮಾರುಕಟ್ಟೆ ದರಗಳನ್ನು ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಳ್ಳಲು ಜೊತೆಯಾಗುತ್ತೇವೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ಯು ಬಸವರಾಜ , ಪಿ ಆರ್ ಸೂರ್ಯನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಜಿಲ್ಲಾ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಸಿಐಟಿಯು ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಜೆಎಂಎಸ್ ರಾಜ್ಯ ಉಪಾಧ್ಯಕ್ಷೆ ಗೀತಾ ,ಮುಖಂಡರಾದ ಗಂಗಮ್ಮ ವಿ ನಾರಾಯಣರೆಡ್ಡಿ, ಅಲಹಳ್ಳಿ ವೆಂಕಟೇಶಪ್ಪ ಮತ್ತಿತರರು ಭಾಗಿಯಾಗಿದ್ದರು.
ಬಾಗೇಪಲ್ಲಿಯಲ್ಲಿ ದ್ವಿಚಕ್ರ ವಾಹನ ಮೂಲಕ ಸ್ವಾಗತ
ಬಾಗೇಪಲ್ಲಿ: ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) 35ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ತೆಲಂಗಾಣ-ತ್ರಿಶ್ಯೂರ್ ಹುತಾತ್ಮ ಜ್ಯೋತಿ ಜಾಥಾಕ್ಕೆ ಅದ್ದೂರಿ ಸ್ವಾಗತ ನೀಡಿದರು. ಬಾಗೇಪಲ್ಲಿ ಟೌನ್ ಪ್ರದೇಶದಲ್ಲಿ ಬಹಿರಂಗ ಸಭೆ ನಡೆಸಿ ಜಾಥಾದ ಉದ್ದೇಶಗಳನ್ನು ವಿವರಿಸಲಾಯಿತು.
ಜಾಥಾ ನಾಯಕ ಪಿ ಕೃಷ್ಣಪ್ರಸಾದ್, ಜಾಥಾ ಉಪನಾಯಕ ತೆಲಂಗಾಣ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಸಾಗರ್, ಜಾಥಾ ಮ್ಯಾನೇಜರ್ ಕೇರಳ ರೈತ ಸಂಘದ ನಾಯಕ ಹಾಗೂ ಮಾಜಿ ಶಾಸಕ ಪ್ರಕಾಶ್ ಮಾಸ್ಟರ್, ಆಂದ್ರಪ್ರದೇಶ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಚಂದ್ರಶೇಖರ್ ರೆಡ್ಡಿ ಸೇರಿದಂತೆ ಜಾಥಾದಲ್ಲಿ ಭಾಗಿಯಾಗಿರುವ ಯಾತ್ರಿಗಳನ್ನು ಬಹಳ ಉತ್ಸಾಹದಿಂದ ಸ್ವಾಗತಿಸಲಾಯಿತು. ಜಾಥಾವನ್ನು ಸುಮಾರು 600ಕ್ಕೂ ಹೆಚ್ಚು ದ್ವಿಚಕ್ರ ವಾಹನದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿ ಸಿ ಬಯ್ಯಾರೆಡ್ಡಿ, ಯು ಬಸವರಾಜ, ಟಿ ಯಶವಂತ, ಹೆಚ್ ಆರ್ ನವೀನ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಅದ್ಯಕ್ಷ ಪಿ ಮಂಜುನಾಥ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಹೆಚ್ ಪಿ ಲಕ್ಷ್ಮೀನಾರಾಯಣ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಪಿ ಮುನಿವೆಂಕಟಪ್ಪ, ರೈತ ಸಂಘ ಮುಖಂಡರಾದ ಹೇಮಚಂದ್ರ, ರವಿಚಂದ್ರಾರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.