ಪರೀಕ್ಷೆ ಮುಂದೂಡಿಕೆ ಆದೇಶ ಹಿಂಪಡೆದು, ನ್ಯಾಯಾಲಯದ ತೀರ್ಪಿನಂತೆ ಪರೀಕ್ಷೆಗಳನ್ನು ರದ್ದುಪಡಿಸಿ

ಬೆಂಗಳೂರು: ರಾಜ್ಯದಲ್ಲಿ 5ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಕ್ಕೆ ಸರಕಾರವು ಡಿಸೆಂಬರ್ 12, 2022ರಂದು ಹೊರಡಿಸಿದ್ದ ಸುತ್ತೋಲೆಯು ನಿಯಮಬಾಹಿರವೆಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಈ ಆದೇಶವನ್ನು ತಡೆಯುವಂತೆ ಸರಕಾರ ಸಲ್ಲಿಸಿದ ತುರ್ತು ಮೇಲ್ಮನವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವು ಸ್ವಾಗತಾರ್ಹವೆಂದು ಸಮಾನ ಮನಸ್ಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಈ ಬಗ್ಗೆ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಡಾ. ನಿರಂಜನಾರಾಧ್ಯ .ವಿ.ಪಿ., ಡಾ.ಶ್ರೀನಿವಾಸ ಕಕ್ಕಿಲಾಯ, ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಡಾ.ಮೀನಾಕ್ಷಿ ಬಾಳಿ, ಬಸವರಾಜ ಗುರಿಕಾರ, ವಿಮಲಾ.ಕೆ.ಎಸ್, ಅಮರೇಶ ಕಡಗದ(ಎಸ್‌ಎಫ್‌ಐ), ಯೋಗಾನಂದ ಬಿ ಎನ್ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ನ್ಯಾಯಾಲಯದ ಆದೇಶ ಪಾಲಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನು ಓದಿ: 5‌ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ ರದ್ದು : ಹೈಕೋರ್ಟ್‌

ಉಚ್ಚ ನ್ಯಾಯಾಲಯವು ಇಷ್ಟು ಸ್ಪಷ್ಟವಾಗಿ ಆದೇಶಗಳನ್ನು ನೀಡಿದ್ದರೂ ಅವನ್ನು ಕಡೆಗಣಿಸಿ, ‘ಈ ಪರೀಕ್ಷೆಗಳನ್ನು ನ್ಯಾಯಾಲಯದ ಆದೇಶದಂತೆ ಮುಂದೂಡಲಾಗಿದೆ’ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾರ್ಚ್ 11ರಂದು ಜ್ಞಾಪನ ಪತ್ರವನ್ನು ಪ್ರಕಟಿಸಿರುವುದು ಆಘಾತಕಾರಿಯಾಗಿದ್ದು, ಇದು ನ್ಯಾಯಾಲಯದ ಆದೇಶಗಳಿಗೆ ವ್ಯತಿರಿಕ್ತವೂ, ನಿಂದನೀಯವೂ ಆಗಿದೆ ಎಂದಿದ್ದಾರೆ.

ಮಂಡಳಿಯೂ ಬಿಡುಗಡೆಗೊಳಿಸಿರುವ ಜ್ಞಾಪನ ಪತ್ರದಲ್ಲಿ ಮಕ್ಕಳ ಕಲಿಕಾ ನ್ಯೂನತೆಗಳು ಹಾಗೂ ಹಿನ್ನಡೆಗಳನ್ನು ಅರಿಯುವುದು ಈ ಮೌಲ್ಯಾ಼ಂಕನದ ಉದ್ದೇಶವೆಂದು ಹೇಳಲಾಗಿದೆ. ಕೋವಿಡ್ ನೆಪದಲ್ಲಿ ಅನಗತ್ಯವಾಗಿ ಶಾಲೆ ಮುಚ್ಚಿ, ವಿದ್ಯಾಗಮವನ್ನೂ ನಿಲ್ಲಿಸಿ, ಬಳಿಕ ಅಯೋಗ್ಯರಿಂದ ಅನಧಿಕೃತವಾಗಿ ಪಠ್ಯಪುಸ್ತಕಗಳನ್ನು ಕೆಡಿಸಿ, ಕಲಿಕಾ ಚೇತರಿಕೆಯನ್ನೂ ಅರೆಬರೆಯಾಗಿ ಮಾಡಿದ ಕಾರಣಕ್ಕೆ ರಾಜ್ಯದ ವಿದ್ಯಾರ್ಥಿಗಳ ಕಲಿಕೆಗೆ ಅಪಾರವಾದ, ಶಾಶ್ವತವಾದ ಹಿನ್ನಡೆಯಾಗಿದೆ ಎನ್ನುವುದನ್ನು ಹಲವು ಸಮೀಕ್ಷೆಗಳು ಈಗಾಗಲೇ ಸ್ಪಷ್ಟವಾಗಿ ತೋರಿಸಿಯಾಗಿದೆ.

ಇದನ್ನು ಓದಿ: ಅಂಕಗಳಿಕೆಯೊಂದೇ ಬುದ್ದಿವಂತಿಕೆ ಅಳೆಯುವ ಮಾರ್ಗವೇ! ; ಸರ್ಕಾರವನ್ನು ಪ್ರಶ್ನಿಸಿದ ಹೈಕೋರ್ಟ್‌

ಸತ್ಯ ಹೀಗಿರುವಾಗ ಸರಕಾರದ ಈ ಎಲ್ಲಾ ಅವೈಜ್ಞಾನಿಕ ಕ್ರಮಗಳಿಂದ ಆಗಿರುವ ಹಿನ್ನಡೆಯನ್ನು ಪರೀಕ್ಷಿಸಲು ಈ ಮಕ್ಕಳ ಮೌಲ್ಯಾ಼ಂಕನ ಮಾಡುವುದಕ್ಕೆ ಹೊರಟಿರುವುದು ಮಕ್ಕಳ ಮೇಲೆ ಮಾಡುತ್ತಿರುವ ಅನ್ಯಾಯ ಹಾಗೂ ದುಷ್ಟತನವಷ್ಟೇ ಅಲ್ಲ, ಅತ್ಯಂತ ಬೇಜವಾಬ್ದಾರಿಯ ನಡೆ ಎಂದು ಸಮಾನ ಮನಸ್ಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಈ ಗೊಂದಲದ ನಿರ್ಧಾರದಿಂದ ಶಿಕ್ಷಣ ಹಕ್ಕು ಕಾಯಿದೆಯು ನಿರಂತರ ಉಲ್ಲಂಘನೆಯಾಗುತ್ತಿದ್ದು ಪಾಲಕರಿಗೆ  ಹಾಗು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯಾಗಿದೆ. ಈ ಎಲ್ಲ ಗೊಂದಲಗಳಿಗೆ ಶಿಕ್ಷಣ ಸಚಿವರ ಅಪ್ರಬುದ್ಧತೆ ಹಾಗು ಸರ್ವಾಧಿಕಾರಿ ಧೋರಣೆ ಹಾಗು ಮೂಲವಾರಸುದಾರರನ್ನು ಒಳಮಾಡಿಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಿಸುವ ಅಪ್ರಜಾಸತ್ತಾತ್ಮಕ ಕಾರ್ಯವಿಧಾನವೇ ಕಾರಣವಾಗಿದೆ.

ಶಿಕ್ಷಣ  ಹಕ್ಕು ಕಾಯ್ದೆ ಅಡಿಯಲ್ಲಿ ನಿರಂತರ ಹಾಗು ವ್ಯಾಪಕ ಮೌಲ್ಯಮಾಪನಕ್ಕೆ ಅವಕಾಶವಿದ್ದು, ನಿರಂತರ ಮೌಲ್ಯಮಾಪನದ ಮೂಲಕ ಮಕ್ಕಳ ಕಲಿಕೆಯನ್ನು ಪರೀಕ್ಷಿಸಲಾಗುತ್ತಿದೆ. ಇದರ ಭಾಗವಾಗಿ ಈಗಾಗಲೇ ನಾಲ್ಕು  ರೂಪಣಾತ್ಮಕ ಹಾಗು ಒಂದು ಸಂಕಲನಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿದೆ. ಅಂತಿಮವಾಗಿ, ಬಾಕಿ ಉಳಿದಿರುವ ಒಂದು ಸಂಕಲನಾತ್ಮಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಮುಗಿಸಿ, ಅದರ ಆಧಾರದಲ್ಲಿ ಇಲಾಖೆ ತಿಳಿಯ ಬಯಸುವ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನತೆ, ಯಾವ ವಿಷಯದಲ್ಲಿ ಹಿನ್ನಡೆಯಾಗಿದೆಯೆಂಬುದನ್ನು ಉದ್ದೇಶಿತ ವಾರ್ಷಿಕ ಸಾರ್ವಜನಿಕ ಮೌಲ್ಯಾಂಕನ  ಪರೀಕ್ಷೆಗಿಂತ ಹೆಚ್ಚು ಆಳವಾಗಿ ತಿಳಿಯಬಹುದಾಗಿದೆ ಎಂದಿದ್ದಾರೆ.

ಇದರೊಂದಿಗೆ, ಕಲಿಕಾ ಚೇತರಿಕೆ ಭಾಗವಾಗಿ ಮೌಲ್ಯಮಾಪನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಕಲಿಕಾ ಮೌಲ್ಯಮಾಪನಕ್ಕೆ ಈಗಾಗಲೇ  ಆರ್‌ಟಿಇಯಲ್ಲಿ ವೈಜ್ಞಾನಿಕ ಹಾಗು ಮಕ್ಕಳ ಸ್ನೇಹಿ ವ್ಯವಸ್ಥೆಯಿರುವಾಗ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಬಿಟ್ಟು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಅವೈಜ್ಞಾನಿಕ ಸನಾತನ ಪರೀಕ್ಷಾ ಸಂಪ್ರದಾಯಕ್ಕೆ ನೂಕುತ್ತಿರುವುದು ನಿಜಕ್ಕೂ ಹಿನ್ನೆಡೆಯಾಗಿದೆ.

ಹಕ್ಕು ಆಧಾರಿತ ಮಕ್ಕಳ ಸ್ನೇಹಿ ಶಿಕ್ಷಣ ಕ್ರಮದಿಂದ ಪರೀಕ್ಷಾ ಕೇಂದ್ರಿತ ಬ್ಯಾಂಕಿಂಗ್ ವಿಧಾನದ ಮಕ್ಕಳ ವಿರೋಧಿ ಕಲಿಕಾ ವ್ಯವಸ್ಥೆಗೆ ಮರಳುತ್ತಿರುವುದು ನಿಜಕ್ಕೂ ಶೋಚನೀಯ ಮತ್ತು ಅನಪೇಕ್ಷಣೀಯ. ಜೊತೆಗೆ, ನಮ್ಮ ಕಲಿಕಾ ವ್ಯವಸ್ಥೆಯು ಸಾಮರ್ಥ್ಯಧಾರಿತ ವ್ಯವಸ್ಥೆಯಾಗಿದ್ದು ನಿಗದಿಗೊಳಿಸಿದ ಸಾಮರ್ಥ್ಯಗಳನ್ನು ಕಲಿಸಿಯೇ ಮುಂದೆ ಹೋಗಬೇಕಿರುವುದರಿಂದ, ವಾರ್ಷಿಕ ಪರೀಕ್ಷೆ ಅವೈಜ್ಞಾನಿಕ ಮಾತ್ರವಲ್ಲದೆ ಅವಿವೇಕದ ನಡೆಯಾಗುತ್ತದೆ.

ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಬರೆದ ಬಹುತೇಕರು ಪಿಹೆಚ್‌ಡಿ ಮಾಡಿದವರೇ

ಪ್ರತೀ ತರಗತಿಯಲ್ಲಿ ಮತ್ತು ಪ್ರತೀ ವಿಷಯದಲ್ಲಿ ಮಕ್ಕಳು ಕಲಿಯಲೇಬೇಕಾದ ಸಾಮರ್ಥ್ಯಗಳನ್ನು ಗುರುತಿಸಿ ಮಕ್ಕಳು, ಶಿಕ್ಷಕರು ಹಾಗು ಪಾಲಕರು ಅವುಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಅಧಿಸೂಚಿಸಲಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಸ್ಪಷ್ಟ ಆದೇಶಗಳನ್ನು ತಿರುಚಿ ‘ಪರೀಕ್ಷೆಗಳನ್ನು ಮುಂದೂಡಲಾಗಿದೆ’ ಎಂದು ಹೇಳಿರುವ ಸರ್ಕಾರದ 2023ರ ಮಾರ್ಚ್‌ 11ರ ಜ್ಞಾಪನ ಪತ್ರವನ್ನು ಈ ಕೂಡಲೇ ಹಿಂಪಡೆದು, 5ನೇ ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಕೂಡಲೇ ಸ್ಪಷ್ಟನೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಕ್ಕಳಲ್ಲಿ, ಹೆತ್ತವರಲ್ಲಿ ಮತ್ತು ಶಿಕ್ಷಕರಲ್ಲಿ ಇನ್ನಷ್ಟು ಗೊಂದಲ, ಆತಂಕ ಹಾಗೂ ಕಷ್ಟಗಳನ್ನು ಉಂಟು ಮಾಡುವ ಹಠಮಾರಿ ಧೋರಣೆಯನ್ನು ಬಿಡಬೇಕು. ಸರಕಾರದ ವೈಫಲ್ಯಗಳಿಗೆ ಸರಕಾರವು ಸ್ವ-ಮೌಲ್ಯಾ಼ಂಕನ ಮಾಡಿಕೊಂಡು, ಮಕ್ಕಳನ್ನು ಹಿಂಸಿಸುವ ಕ್ರಮವನ್ನು ಕೈ ಬಿಡಬೇಕೆಂದು ನಾವು ಮಕ್ಕಳ ಪರವಾಗಿ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು ಸಮಾನ ಮನಸ್ಕರು, ವಿದ್ಯಾರ್ಥಿ ಸಂಘಟನೆಯ ಮುಖಂಡರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಪ್ರಕಟಿಸಿದೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಪರವಾಗಿ ಮೊಯ್ಯುದ್ದೀನ್ ಕುಟ್ಟಿ(ಮಂಗಳೂರು), ಅಬ್ದುಲ್ ಸಲಾಂ ಚಿತ್ತೂರು(ಉಡುಪಿ), ಶಿವಕ್ಕಳ ಆಂಜನೇಯ(ದಾವಣಗೆರೆ), ದೇವಪ್ಪ(ಕೊಪ್ಪಳ), ಶಾಂತಿ(ಕಾರವಾರ), ಅಶ್ವಿನ್ ಕುಮಾರ್(ಶಿವಮೊಗ್ಗ), ರಾಘವೇಂದ್ರ (ಬಳ್ಳಾರಿ), ಉಮೇಶ್ ದೊಡ್ಡ ಗಂಗವಾಡಿ(ರಾಮನಗರ), ಅಶೋಕ(ಮಾಗಡಿ), ಮಾಥ್ಯು ಮುನಿಯಪ್ಪ(ಬೆಂಗಳೂರು ಗ್ರಾಮಾಂತರ), ಈರಣ್ಣ ಮುರಗೋಡ(ಧಾರವಾಡ), ಜಿ ಕೆ ಶ್ರೀನಿವಾಸುಲು(ಕೋಲಾರ), ಕೆ ಎನ್ ವಿಜಯ ಕುಮಾರ್(ಚಿಕ್ಕಮಗಳೂರು), ನಾಗರಾಜ. ಸಜ್ಜಿ(ವಿಜಯನಗರ), ಡಿ.ಬಿ.ಕುಪ್ಪಸ್ತ (ಡಿಬಿಕೆಜಿ) (ವಿಜಯಪುರ), ಕೆ ಎ ನಾಗೇಶ್ (ಕೊಡಗು), ಶಂಕರ್ ಬಣಪ್ಪನವರ (ಬೆಳಗಾವಿ), ಅಶೋಕ (ಚಿಕ್ಕಬಳ್ಳಾಪುರ), ಯತೀಶ್ (ಮಂಡ್ಯ), ಹಫೀಜುಲ್ಲಾ (ರಾಯಚೂರು), ದಯಾನಂದಾರಾಧ್ಯ (ತುಮಕೂರು), ವೀರಭದ್ರಪ್ಪ(ಕಲ್ಬುರಗಿ), ಮಹೇಶ (ಚಾಮರಾಜನಗರ), ಉಮಾ ದ್ರಾವಿಡಿಯನ್ (ಮೈಸೂರು), ಲಕ್ಷ್ಮಿ ವಲ್ಲಪ್ಪ (ಬಾಗಲಕೋಟೆ), ಯಲ್ಲಪ್ಪ ತಳವಾರ(ಗದಗ). ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *