ಬೆಂಗಳೂರು: ಸರ್ಕಾರವೂ ಶೈಕ್ಷಣಿಕ ಕ್ಷೇತ್ರಕ್ಕೆ ಬಗೆಯುತ್ತಿರುವ ದ್ರೋಹ ಮತ್ತಷ್ಟು ದೊಡ್ಡದಾಗುತ್ತಲೇ ಇದೆ. ಒಂದೆಡೆ, ಸರ್ಕಾರಿ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ದೊಡ್ಡ ಪ್ರಮಾಣದಲ್ಲಿ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮತ್ತೊಂದೆಡೆ ಸರ್ಕಾರದ ನಿರ್ಧಾರಗಳು ಭವಿಷ್ಯದ ವಿದ್ಯಾರ್ಥಿಗಳಿಗೆ ಅಗಾಧ ಗಂಢಾತರಗಳು ತಂದೊಡ್ಡುತ್ತಿವೆ.
ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ 7 ನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಮತ್ತಷ್ಟು ಸ್ಪಷ್ಟನೆಗಳನ್ನು ನೀಡಿರುವ ಸರ್ಕಾರ ವಿವಿಯ ನಿರ್ವಹಣೆಗೆ ಅನುದಾನ ಒದಗಿಸುವುದಿಲ್ಲ ಎಂಬ ಅಂಶಗಳು ಒಳಗೊಂಡಿದೆ. ಇದು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಬಗೆಯುತ್ತಿರುವ ದ್ರೋಹ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಜೇಶನ್(ಎಐಡಿಎಸ್ಒ) ತಿಳಿಸಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಐಡಿಎಸ್ಒ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಆದೇಶದಲ್ಲಿ 7 ನೂತನ ಮಾದರಿ ವಿಶ್ವವಿದ್ಯಾಲಯಗಳು ಪ್ರಸ್ತುತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಪಾಠ ನಿರ್ವಹಿಸಬೇಕು, ವಿ.ವಿ. ಸ್ಥಾಪನೆಗಾಗಿ ಯಾವುದೇ ಜಮೀನು ಖರೀದಿಸಬಾರದು, ಹೊಸ ಕಟ್ಟಡ ಕಟ್ಟಬಾರದು, ಮಾತೃ ವಿ.ವಿ.ಯಲ್ಲಿ ಈಗಾಗಲೇ ಇರುವ ಹುದ್ದೆಗಳನ್ನೇ ನೂತನ ಮಾದರಿ ವಿ.ವಿ.ಗಳು ಬಳಸಿಕೊಳ್ಳಬೇಕು, ಹೊಸ ಹುದ್ದೆಗಳು ಸೃಷ್ಟಿಯಾಗಬಾರದು, ವಿ.ವಿ.ಗಳು ಡಿಜಿಟಲ್ ಹಾಗೂ ಕೌಶಲ್ಯಾಧಾರಿತ ‘earn while you learn’ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು, ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕವನ್ನೆ ವಿ.ವಿ.ಯ ನಿರ್ವಹಣೆಗೆ ಬಳಸಿಕೊಳ್ಳಬೇಕು.. ಇನ್ನೂ ಹಲವು ಷರತ್ತುಗಳನ್ನು ವಿಧಿಸಲಾಗಿದೆ!! ಈ ಪ್ರಕ್ರಿಯೆಯಲ್ಲಿ ವಿ.ವಿ. ನಡೆಸಲು ಸಾಧ್ಯವೇ? ಕಿಂಚಿತ್ತೂ ಸೌಕರ್ಯವಿಲ್ಲದೆ ಸೃಷ್ಟಿಯಾಗುವ ನೂತನ ಮಾದರಿಯು ವಿ.ವಿ.ಯಾಗಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ, ಮೂಲ ಸೌಕರ್ಯಗಳಿಲ್ಲದೆ, ಜಾಗ, ಕಟ್ಟಡ ಇಲ್ಲದೆ ವಿ.ವಿ.ಗಳ ಏಳಿಗೆ ಹೇಗೆ ಆಗುತ್ತದೆ? ‘ಕಲಿಯುತ ಹಣ ಪಡಿ’ ಎಂದು ಹೇಳುತ್ತಾ, ಅಂತಿಮವಾಗಿ ‘ಕಲಿಯಲು ಹಣ ಕೊಡಿ’ ಎಂದು ನೂತನ ವಿ.ವಿ.ಗಳ ಖಾಸಗೀಕರಣಕ್ಕೆ ಸರ್ಕಾರ ಈಗಲೇ ಮುನ್ನುಡಿ ಬರೆಯುತ್ತಿದೆ. ವಿ.ವಿ.ಗಳು ಸ್ವಯಂ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ, ವಿ.ವಿ.ಗಳಿಗೆ ಆರ್ಥಿಕ ನೆರವು ನೀಡುವ ತನ್ನ ಮೂಲಭೂತ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಂಡಿರುವುದನ್ನು ಎಐಡಿಎಸ್ಒ ಸಂಘಟನೆಯನ್ನು ಖಂಡಿಸಿದೆ.
ಹೊಸದನ್ನೇನು ಸೃಷ್ಠಿ ಮಾಡುವುದಿಲ್ಲ, ಇರುವುದನ್ನೂ ಸಹ ಮಾರಿಕೊಳ್ಳುತ್ತೇವೆ ಎನ್ನುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ವಿ.ವಿ.ಗಳು ಜ್ಞಾನದ ಭಂಡಾರಗಳಾಗಬೇಕು, ಪ್ರಜಾತಾಂತ್ರಿಕ, ವೈಜ್ಞಾನಿಕ ಆಲೋಚನೆಗಳ ಆಗರವಾಗಬೇಕು, ವಿ.ವಿ.ಗಳ ಆರ್ಥಿಕ ನಿರ್ವಹಣೆ ಸರ್ಕಾರದ ಜವಾಬ್ದಾರಿಯಾಗಬೇಕು ಎಂಬ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನವೋದಯ ಚಿಂತಕರ ಆಶಯಗಳಿಗೆ ಸರ್ಕಾರ ಕೊಳ್ಳಿ ಇಟ್ಟು ಇದೀಗ, 7 ವಿವಿಗಳನ್ನು ಸೃಷ್ಠಿ ಮಾಡುತ್ತಿಲ್ಲ ಬದಲಿಗೆ, 7 ವಿವಿಗಳನ್ನು ಮಾರುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಸಂಘಟನೆ ಆರೋಪಿಸಿದೆ.
ಕೂಡಲೇ ಸರ್ಕಾರ ಈ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಎಐಡಿಎಸ್ಒ ಸಂಘಟನೆಯು, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಶಿಕ್ಷಣ ವಿರೋಧಿ ನೀತಿಯನ್ನು ಸರ್ಕಾರ ಜಾರಿಗೊಳಿಸಲು ಬಿಡದೆ ಬಲಿಷ್ಠ ಹೋರಾಟವನ್ನು ಕಟ್ಟಲು ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಜನ ಸಾಮಾನ್ಯರು ಸಜ್ಜಾಗಬೇಕು ಕರೆ ನೀಡಿದೆ.