ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಉದಯಪುರ ಘಟನೆ ಸೇರಿದಂತೆ ದೇಶಾದ್ಯಂತ ನಡೆದ ಎಲ್ಲಾ ಹಿಂಸಾಚಾರ ಘಟನೆಗಳಿಗೆ ನೀವೇ ಕಾರಣ. ನೂಪುರ್ ಶರ್ಮಾ ತಮ್ಮ ಬೇಜವಾಬ್ದಾರಿ ಮಾತುಗಳಿಂದ ಇಡೀ ದೇಶಕ್ಕೇ ಬೆಂಕಿ ಹಚ್ಚಿದರು ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ನೂಪರ್ ಶರ್ಮಾ ಇಡೀ ದೇಶದಲ್ಲಿ ಕೋಮು ಭಾವನೆಯನ್ನು ಪ್ರಚೋದಿಸಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಲು ಕಾರಣರಾಗಿದ್ದಾರೆ. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಉದಯ್‌ಪುರದಲ್ಲಿ ಟೈಲರ್‌ನ ಹತ್ಯೆಯಾದ ದುರದೃಷ್ಟಕರ ಘಟನೆಗೆ ಆಕೆಯ ಆಕ್ರೋಶವೇ ಕಾರಣ. ಬಿಜೆಪಿಯಿಂದ ಅಮಾನತುಗೊಂಡಿರುವ ವಕ್ತಾರರು ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಕಿರುವುದನ್ನು ಗಮನಿಸಿ ದೇಶದ ಕ್ಷಮೆ ಯಾಚಿಸಬೇಕೆಂದು ಹೇಳಿದೆ.
ನೂಪುರ್ ಶರ್ಮಾ ಬೆದರಿಕೆಗಳು ಎದುರಿಸುತ್ತಿದ್ದಾಳೆ, ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ನೂಪುರ್ ಶರ್ಮಾ ಪರ ವಕೀಲರು ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಆಕೆಯ ಪ್ರಚೋದನಕಾರಿ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಆದರೆ ಆಕೆ ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದರು.
ನೂಪುರ್ ಶರ್ಮಾ ಬಿಜೆಪಿ ಪಕ್ಷದ ವಕ್ತಾರೆ ಆದ ಕಾರಣದಿಂದ ಅಧಿಕಾರ ನೆತ್ತಿಗೇರಿದೆ. ಆಕೆ ಧಾರ್ಮಿಕ ವ್ಯಕ್ತಿಯಲ್ಲ. ವಿವಿಧ ಧರ್ಮದವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ. ಶರ್ಮಾ ಹೇಳಿಕೆಯು ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವಂತದ್ದು, ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರದ ಹೊಣೆಗೆ ಅವರೇ ಕಾರಣ ಎಂದು ನ್ಯಾಯಪೀಠ ಹೇಳಿದೆ.
ನೂಪುರ್ ಶರ್ಮಾ ದೂದರ್ಶನದಲ್ಲಿನ ಚರ್ಚೆಯು ದುರ್ಬಳಕೆಯಾದರೆ ಆ ಚಾನಲ್ ನಿರೂಪಕರ ವಿರುದ್ಧ ಮೊದಲಿಗೆ ಕೇಸು ಹಾಕಬೇಕು. ನೂಪುರ್ ಶರ್ಮಾ ನಾಲಿಗೆ ಸಡಿಲಬಿಟ್ಟು ಮಾತನಾಡಿದ್ದರಿಂದ ಇಡೀ ದೇಶಕ್ಕೆ ಬೆಂಕಿ ಬಿದ್ದಿತ್ತು. ಪ್ರಜಾಪ್ರಭುತ್ವದಲ್ಲಿ ಹುಲ್ಲಿಗೆ ಬೆಳೆಯುವ ಹಕ್ಕು ಇದೆ, ಕತ್ತೆಗೂ ತಿನ್ನುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆ ವೇಳೆ ನೂಪುರ್ ಶರ್ಮಾ ಪರ ವಕೀಲ ಅವರು, ತಮ್ಮ ಹೇಳಿಕೆ ಕುರಿತಾಗಿ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಿದಾಗ, ಸಿಟ್ಟಿಗೆದ್ದ ನ್ಯಾಯಪೀಠ, ಅವರು ಟಿವಿ ವಾಹಿನಿಯಲ್ಲೇ ಕುಳಿತು ಇಡೀ ದೇಶದ ಕ್ಷಮೆ ಯಾಚನೆ ಮಾಡಬೇಕು. ಈಗಾಗಲೇ ಅವರು ಕ್ಷಮೆಯಾಚನೆ ಮಾಡುವಾಗ ಬೇಷರತ್ತಾಗಿ ಕ್ಷಮೆ ಕೇಳಿಲ್ಲ. ಯಾರದ್ದೇ ಭಾವನೆಗಳಿಗೆ ಘಾಸಿಯಾಗಿದ್ದರೆ, ನಾನು ನಮ್ಮ ಹೇಳಿಕೆ ಹಿಂಪಡೆಯುವೆ ಎಂದಿದ್ದಾರೆ. ಅದೂ ಕೂಡಾ ತುಂಬಾ ತಡವಾಗಿ ಕ್ಷಮೆ ಕೇಳಿದ್ದಾರೆ. ಹಾಗೆ ನೋಡಿದರೆ ಇವರು ಧಾರ್ಮಿಕ ಮುಖಂಡರೇನೂ ಅಲ್ಲ. ಅವರು ಕೇವಲ ಪ್ರಚೋದನೆಯ ಉದ್ದೇಶದಿಂದಲೇ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹರಿಹಾಯ್ದಿದೆ.
ಇದೇ ವೇಳೆ ಟಿವಿ ಚಾನಲ್‌ಗಳ ವಿರುದ್ಧವೂ ಹರಿಹಾಯ್ದ ಸುಪ್ರೀಂ ಕೋರ್ಟ್, ಗ್ಯಾನ್‌ವಾಪಿ ಮಸೀದಿ ವಿಚಾರ ಕಾನೂನು ವ್ಯಾಪ್ತಿಯಲ್ಲಿ ಇರುವ ಸಂದರ್ಭದಲ್ಲಿ ಟಿವಿ ಚಾನಲ್ ಗಳಿಗೆ ಏನು ಕೆಲಸವಿದೆ. ನೀವೇನೂ ಅಜೆಂಡಾವೊಂದನ್ನು ಪ್ರಚಾರ ಮಾಡುತ್ತಿದ್ಧಾರಾ ಎಂದು ಸವಾಲೆಸೆದಿದೆ.
ಪ್ರವಾದಿ ಬಗ್ಗೆ ನೂಪುರ್ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆ ವಿದೇಶಗಳಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಹಿಂಸಾಚಾರಕ್ಕೂ ತಿರುಗಿದೆ. ಅನೇಕ ದುರ್ಘಟನೆಗಳು ನಡೆಯುತ್ತಿದೆ.