ಎನ್‌ಆರ್‌ಎಫ್ :ಸಂಶೋಧಕರ, ವಿಜ್ಞಾನಿಗಳ ಆತಂಕ

ಒಕ್ಕೂಟ ಮಂತ್ರಿಮಂಡಲ ಇತ್ತೀಚೆಗೆ ಮಂಜೂರು ಮಾಡಿದ ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ (ಎನ್‍ಆರ್‌ಎಫ್‍) ವೈಜ್ಞಾನಿಕ ಸಂಶೋಧನೆಯ ರಂಗದಲ್ಲಿ ಒಂದು ಹೊಸ ಕ್ರಾಂತಿಗೆ ಸಿದ್ಧತೆ ಎಂದು ಆರೆಸ್ಸೆಸ್ ಸಿದ್ಧಾಂತಿ ರಾಂ ಮಾಧವ್ ಹೇಳುತ್ತಾರೆ. ಆದರೆ ಇದು ಸಂಶೋಧನೆಗೆ ಜಿಡಿಪಿಯ ಕೇವಲ 0.7%ದಷ್ಟಿರುವ ಸರಕಾರದ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಏನೂ ಹೇಳಿಲ್ಲ, ಅಷ್ಟೇ ಅಲ್ಲ, ಈಗಿರುವ ಅಲ್ಪ ಬೆಂಬಲ ವ್ಯವಸ್ಥೆಯನ್ನೂ ಅಸ್ಥಿರಗೊಳಿಸುತ್ತದೆ ಎಂದು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು ಸಂಶೋಧಕರ ರಾಷ್ಟ್ರವ್ಯಾಪಿ ಸಂಘಟನೆ ‘ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ’ ಹೇಳುತ್ತದೆ. ಸಂಶೋಧನೆಗೆ ಸರಕಾರದ ಬೆಂಬಲವನ್ನು ಕನಿಷ್ಟ ಜಿಡಿಪಿಯ 3%ಕ್ಕೆ ಏರಿಸಬೇಕು ಎಂದು ಅದು ಆಗ್ರಹಿಸಿದೆ.

‘ಹೊಸ ಕ್ರಾಂತಿಗೆ ಸಿದ್ಧತೆ’ಯೋ-ಅಥವ ಮತ್ತೊಂದು ‘ಜುಮ್ಲಾ’ವೋ?

 ನರೇಂದ್ರ ಮೋದಿ ಸರಕಾರ ಒಂದು ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’(ನ್ಯಾಷನಲ್ ರಿಸರ್ಚ್ ಫೌಂಡೇಶನ್-ಎನ್‌ಆರ್‌ಎಫ್)ವನ್ನು ಸ್ಥಾಪಿಸಲು ನಿರ್ಧರಿಸಿದೆ, ಇದು ಹಲವರಿಗೆ ಸಾಮಾನ್ಯ ಸಂಗತಿಯಾಗಿ ಕಂಡರೂ, ವಾಸ್ತವಿಕವಾಗಿ ವೈಜ್ಞಾನಿಕ ಸಂಶೋಧನೆಯ ರಂಗದಲ್ಲಿ ಒಂದು ಹೊಸ ಕ್ರಾಂತಿಗೆ ಸಿದ್ಧತೆ ಎಂದು ಬಿಜೆಪಿ ಮುಖಂಡ ಮತ್ತು ಆರೆಸ್ಸೆಸ್ ಸಿದ್ಧಾಂತಿ ರಾಂ ಮಾಧವ್ ಹೇಳಿದ್ದಾರೆ(ಇಂಡಿಯನ್ ಎಕ್ಸ್ಪ್ರೆಸ್, ಜುಲೈ 1). ಇದರ ಗುರಿ ಸಂಶೋಧನೆ ಮತ್ತು ಅಭಿವೃದ್ಧಿ(ಆರ್&ಡಿ)ಯ ಬೀಜ ಬಿತ್ತುವುದು, ಬೆಳೆಸುವುದು ಮತ್ತು ಪ್ರೋತ್ಸಾಹಿಸುವುದು ಮತ್ತು ಭಾರತೀಯ ವಿಶ್ವ ವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ಆರ್&ಡಿ ಪ್ರಯೋಗಾಲಯಗಳ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಪೋಷಿಸುವುದು ಎನ್ನಲಾಗಿದೆ.

ಆದರೆ ಈಗಾಗಲೇ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು ಸಂಶೋಧಕರು ಸರಕಾರದ ಈ ನಿರ್ಧಾರದ ಬಗ್ಗೆ ಬಹಳಷ್ಟು ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ರಾಷ್ಟ್ರವ್ಯಾಪಿ ಸಂಘಟನೆ ‘ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ’ ಈ ಬಗ್ಗೆ ಒಂದು ಸಾರ್ವಜನಿಕ ಹೇಳಿಕೆಯನ್ನು ಪ್ರಕಟಿಸಿದೆ.

ಇದುವರೆಗೆ ಹಲವು ಸರಕಾರೀ ಸಂಸ್ಥೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‍ಟಿ), ಅಣುಶಕ್ತಿ ವಿಭಾಗ( ಡಿಎಇ), ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ), ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್), ಭಾರತೀಯ ವೈದ್ಯಕೀಯ  ಸಂಶೋಧನಾ ಮಂಡಳಿ (ಐಸಿಎಂಆರ್‍), ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ(ಐಸಿಹೆಚ್‍ಆರ್), ಯುಜಿಸಿ ಮುಂತಾದವುಗಳು, ಅಲ್ಲದೆ ವಿವಿಧ ಮಂತ್ರಾಲಯಗಳು ತಂತಮ್ಮ ಕ್ಷೇತ್ರಗಳಲ್ಲಿ ಸಂಶೋಧನೆಗೆ ನಿಧಿಗಳನ್ನು ಒದಗಿಸುತ್ತಿವೆ. ಆದರೆ ಇನ್ನು ಮುಂದೆ  “ಎನ್‌ಆರ್‌ಎಫ್ ವೈಯಕ್ತಿಕವಾಗಿ ವಿಜ್ಞಾನಿಗಳ ಸಂಶೋಧನಾ ಪ್ರಸ್ತಾವನೆಗಳನ್ನು ಕುರಿತಂತೆ ನಿರ್ಧರಿಸುವ ಮತ್ತು ಅದನ್ನು ಬೆಂಬಲಿಸುವ ಪ್ರಧಾನ ಸಂಸ್ಥೆಯಾಗಿ ಬಿಡುತ್ತದೆ. ಇದು ಸಂಶೋಧನೆಗೆ ಬೆಂಬಲವನ್ನು ಕೇಂದ್ರೀಕರಿಸುವ ಒಂದು ಯೋಜನೆ. ಇದುವರೆಗೆ, ಒಬ್ಬ ಸಂಶೋಧಕನಿಗೆ ತನ್ನ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಲು ಹಲವು ಆಯ್ಕೆಗಳಿದ್ದವು. ಒಂದು ನಿಧಿ ನೀಡುವ ಸಂಸ್ಥೆ ಅದನ್ನು ತಿರಸ್ಕರಿಸಿದರೆ, ಇನ್ನೊಂದು ಸಂಸ್ಥೆಯಿಂದ ಬೆಂಬಲ ಪಡೆಯುವ ಸಾಧ್ಯತೆಯಿದೆ. ನಿಧಿ ನೀಡಿಕೆಯ ಕೇಂದ್ರೀಕರಣ ಆ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ” ಎಂದು ಹೇಳಿಕೆ ವ್ಯಕ್ತಪಡಿಸಿರುವ ಆತಂಕಗಳಲ್ಲಿ ಪ್ರಮುಖವಾದ್ದು.(ಇಂಡಿಯನ್ ಎಕ್ಸ್ ಪ್ರೆಸ್/ದಿ ವೈರ್, ಜುಲೈ 4)

ವಿವಿಧ ನಿಧಿ/ಬೆಂಬಲ ನೀಡಿಕೆ ಸಂಸ್ಥೆಗಳು ನಿರ್ದಿಷ್ಟ ಸಂಶೋಧನಾ ಕ್ಷೇತ್ರಗಳಿಗೆ ಒತ್ತು ನೀಡುತ್ತಿರುವುದರಿಂದ ಸಂಶೋಧನಾ ನಿಧಿ ಪಡೆಯುವ ಸಾಧ್ಯತೆ ಸಾಪೇಕ್ಷವಾಗಿ ಹೆಚ್ಚು. ಆದರೆ ಈ ಏಕ-ಗವಾಕ್ಷಿ ಯೋಜನೆಯಿಂದ ಆ ಸಾಧ್ಯತೆಗಳು ಮುಚ್ಚಿ ಹೋಗುತ್ತವೆ- ವಿಶೇಷವಾಗಿ ಸಾಮಾಜಿಕ ವಿಜ್ಞಾನಗಳಲ್ಲಿ ಮತ್ತು ತಕ್ಷಣದ ಔದ್ಯಮಿಕ ಪ್ರಯೋಜನಗಳಿಲ್ಲದ ನೈಸರ್ಗಿಕ ವಿಜ್ಞಾನಗಳಲ್ಲಿ ಇದು ಭಾರೀ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ‘ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ’ಯ ಅಧ್ಯಕ್ಷ ಪ್ರೊ. ಧ್ರುಬಜ್ಯೋತಿ ಮುಖರ್ಜಿ ಹೇಳಿದ್ದಾರೆ.

ನೂತನ ಶಿಕ್ಷಣ ನೀತಿ-2020ರ ಪ್ರಕಾರ ಎನ್‌ಆರ್‌ಎಫ್ ನ ನಿರ್ವಹಣೆಯನ್ನು ಸರಕಾರದಿಂದ ಸ್ವತಂತ್ರವಾಗಿರುವ ಒಂದು ಆವರ್ತಕ ನಿರ್ವಾಹಕ ಮಂಡಳಿ (ರೊಟೇಟಿಂಗ್ ಬೋರ್ಡ್ ಆಫ್ ಗವರ್ನರ್ಸ್) ಮಾಡಬೇಕು. ಆದರೆ ಈಗ ಒಕ್ಕೂಟ ಸರಕಾರ ಈ ಸಂಸ್ಥೆಯ ನಿರ್ವಾಹಕ ಮಂಡಳಿಗೆ ಪ್ರಧಾನ ಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳು ಪದನಿಮಿತ್ತ ಉಪಾಧ್ಯಕ್ಷರುಗಳಾಗಿರುತ್ತಾರೆ ಎಂದು ನಿರ್ಧರಿಸಿದೆ. ಅಲ್ಲದೆ ದೈನಂದಿನ ನಿರ್ವಹಣೆಯನ್ನು ನಡೆಸುವ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರು ಕೂಡ ಸರಕಾರೀ ನೇಮಕದ ವ್ಯಕ್ತಿ(ಪ್ರಧಾನ ವೈಜ್ಞಾನಿಕ ಸಲಹೆಗಾರ)ಯೇ ಆಗಿರುತ್ತಾರೆ. ಅಂದರೆ ಎನ್‌ಆರ್‌ಎಫ್ ಸರಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಯೋಚನೆಯೇ ಇಲ್ಲ ಎಂದಾಗುತ್ತದೆ.

ಪ್ರಧಾನ ಮಂತ್ರಿಗಳೇ ಇದರ ಅಧ್ಯಕ್ಷರಾಗಿರುವುದು ಒಂದು ಬಹು ಮಹತ್ವದ ಸಂಗತಿ ಎಂದು ರಾಂ ಮಾಧವ್ ಭಾವಿಸಿದರೆ, ಇದು ಈ ಎನ್‌ಆರ್‌ಎಫ್‌ನ ಆತಂಕಕಾರಿ ಸಂಗತಿಗಳಲ್ಲಿ ಒಂದು ಎಂದು ಸಂಶೋಧಕರು ಮತ್ತು ವಿಜ್ಞಾನಿಗಳ ಸಂಘಟನೆ ಭಾವಿಸುತ್ತಿದೆ.

ಮೋದಿ ಸರಕಾರ ಪಂಚಗವ್ಯ ಇತ್ಯಾದಿಗಳನ್ನು, ತಥಾಕಥಿತ ‘ಭಾರತೀಯ ಜ್ಞಾನ ವ್ಯವಸ್ಥೆ”ಗಳನ್ನು ಪ್ರೋತ್ಸಾಹಿಸುತ್ತಿರುವುದನ್ನು ಕಾಣುತ್ತಿರುವಾಗ, ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದವು, ಇಂಟರ್ನೆಟ್ ಟೆಲಿವಿಷನ್, ಸ್ಟೆಮ್‌ಸೆಲ್ ಸಂಶೋಧನೆ, ತಳಿ ಇಂಜಿನಿಯರಿಂಗ್, ಪ್ಲಾಸ್ಟಿಕ್ ಸರ್ಜರಿ ಇದ್ದವು ಎಂದು ಸರಕಾರೀ ಮುಖಂಡರುಗಳೇ ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರ ನೇತೃತ್ವದಲ್ಲಿರುವ ಈ ಸಂಸ್ಥೆ ಎಂತಹ ಸಂಶೋಧನೆಯನ್ನು ಪ್ರೋತ್ಸಾಹಿಸಬಹುದು ಎಂಬ ಆತಂಕ ವಿಜ್ಞಾನಿಗಳಲ್ಲಿ ಇದ್ದರೆ ಅದರಲ್ಲಿ ಆಶ್ವರ್ಯವೇನಿಲ್ಲ.

ರಾಂ ಮಾಧವ ಅವರು ಸರಕಾರದ ಈ ನಿರ್ಧಾರವನ್ನು ಬಲವಾಗಿ ಬೆಂಬಲಿಸುತ್ತ “ಜಗತ್ತು ಉದ್ದಿಮೆ 4.0, ವೆಬ್ 3.0, ತಳಿಶಾಸ್ತ್ರ 2.0ದ ಪರಿವರ್ತನಕಾರೀ ಯುಗವನ್ನು ಪ್ರವೇಶಿಸಿದೆ. ಇದೀಗ ಕೃತಕ ಬುದ್ಧಿಮತ್ತೆ, ಕ್ವಾಂಟಂ ಲೆಕ್ಕಾಚಾರ, ರೊಬೊಟಿಕ್ ಯುಗ. ಭಾರತ ಈ ಹಿಂದಿನ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಕ್ರಾಂತಿಗಳನ್ನು ತಪ್ಪಿಸಿಕೊಂಡಿತು. ಆದರೆ ಈ ಬಾರಿ, ಇದರ ಅಂತರ್ಗತ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳುವ ಅವಕಾಶವಿದೆ” ಎಂದಿದ್ದಾರೆ. ಆದರೆ ಡಾರ್ವಿನರನ್ನು, ರಾಸಾಯನಿಕ ಆವರ್ತಕ ಕೋಷ್ಟಕಗಳನ್ನು ಪಠ್ಯದಿಂದ ತೆಗೆಯುತ್ತಿರುವ ಸರಕಾರದ ನೇತೃತ್ವದಲ್ಲಿ ಇದು ನಿಜವಾಗಲೂ ಸಾಧ್ಯವೇ ಎಂಬ ಸಂದೇಹವೂ ಅನುಚಿತವೇನಲ್ಲ.

ಭಾರತದಲ್ಲಿನ ಪರಿಸ್ಥಿತಿಗೆ ಮುಖ್ಯವಾಗಿ ಸಾರ್ವಜನಿಕ ಮತ್ತು ಖಾಸಗೀ ಬೆಂಬಲದ, ನಿಧಿನೀಡಿಕೆಯ ಕೊರತೆಯೇ ಕಾರಣ ಎಂದು ರಾಂ ಮಾಧವ್ ರವರೂ ಹೇಳುತ್ತಾರೆ. ಅಮೆರಿಕಾ ಮತ್ತು ಚೀನಾದಲ್ಲಿ ಸಂಶೋಧಕರಿಗೆ ಬೃಹತ್ ಪ್ರಮಾಣದಲ್ಲಿ ನಿಧಿ ಒದಗಿಸಲಾಗುತ್ತಿದೆ. ಅಮೆರಿಕಾದಲ್ಲಿ 640 ಬಿಲಿಯ ಡಾಲರ್, ಚೀನಾದಲ್ಲಿ 580 ಬಿಲಿಯ ಡಾಲರ್, ಆದರೆ ಭಾರತದಲ್ಲಿ ಕೇವಲ 15 ಬಿಲಿಯ ಡಾಲರ್ ಎಂದೂ ಅವರೇ ಹೇಳುತ್ತಾರೆ. ಭಾರತ ತನ್ನ ಜಿಡಿಪಿಯ 0.7%ದಷ್ಟು ಮಾತ್ರ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಸಂಶೋಧನೆಗಳಿಗೆ ಖರ್ಚು ಮಾಡುತ್ತದೆ ಎಂದೂ ಹೇಳುವ ರಾಂ ಮಾಧವ್, ಚೀನಾದ ಜಿಡಿಪಿ ನಮ್ಮ ಜಿಡಿಪಿಯ 5-6 ಪಟ್ಟು ಇದ್ದರೂ, ಅದರ 2.5%ದಷ್ಟು ಖರ್ಚು ಮಾಡುತ್ತಿದೆ ಎಂದೂ ಹೇಳುತ್ತಾರೆ. ಈಗ ಈ ಎನ್‌ಆರ್‌ಎಫ್ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:ನಮ್ಮ ಆರ್ಥಿಕತೆಯಲ್ಲಿ ಎಷ್ಟು ಉದ್ಯೋಗಗಳ ಸೃಷ್ಟಿ ಆಗಬೇಕು?

ಮೇಲ್ನೋಟಕ್ಕೆ ಇದು ದೊಡ್ಡ ಮೊತ್ತವಾಗಿ ಕಂಡರೂ, ಇದರಲ್ಲಿ 36,000ಕೋಟಿ ರೂ. ಖಾಸಗಿಯವರಿಂದ ನಿರೀಕ್ಷಿಸಲಾಗಿದೆ. ಅಂದರೆ ಸರಕಾರ ಮುಂದಿನ ಐದು ವರ್ಷಗಳಲ್ಲಿ ಪ್ರತಿವರ್ಷ ಖರ್ಚು ಮಾಡಲಿರುವುದು 2800 ಕೋಟಿ ರೂ. ಮಾತ್ರ. “ಭಾರತದಲ್ಲಿ ನಡೆಸುತ್ತಿರುವ ಸಂಶೋಧನೆಗಳ ಪ್ರಮಾಣದ ಬಗ್ಗೆ ತುಸುವಾದರೂ ತಿಳಿದಿರುವವರಿಗೆ, ಈ ಮೊತ್ತ ಈಗಿನ ಅತ್ಯಲ್ಪ ಬೆಂಬಲದ ಮಟ್ಟವನ್ನು ಉಳಿಸಿಕೊಳ್ಳಲೂ ಸಾಲದು ಎಂಬುದು ಗೊತ್ತಿದೆ” ಎನ್ನುತ್ತಾರೆ ಪ್ರೊ. ಧ್ರುಬಜ್ಯೋತಿ ಮುಖರ್ಜಿ.

ಅಲ್ಲದೆ, ಭಾರತದಲ್ಲಿ ಖಾಸಗಿಯವರು ಆರ್‍&ಡಿಗೆ ನಿಧಿ ನೀಡುತ್ತಿರುವುದು ಬಹಳ ಕಡಿಮೆಯೇ, ಏಕೆಂದರೆ ಅವರಲ್ಲಿ ಇದಕ್ಕೆ ಬೇಕಾಗುವ  ದೂರದೃಷ್ಟಿಯ ಕೊರತೆ ಕಂಡುಬಂದಿದೆ.

 ಹೀಗಿರುವಾಗ ಈ ಎನ್‌ಆರ್‌ಎಫ್ ಭಾರತದಲ್ಲಿ ಆರ್&ಡಿಗೆ ಭಾರೀ ಬೆಂಬಲ ನೀಡುತ್ತದೆ, ವಿಜ್ಞಾನಿಗಳಿಗೆ ಇದುವರೆಗೆ ಕೇಳಿರದಿದ್ದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಪ್ರೋತ್ಸಾಹ ನೀಡುತ್ತದೆ ಎಂಬ ರಾಂ ಮಾಧವ್ ರವರ ಉದ್ಗಾರವಂತೂ ‘ಅಚ್ಛೇ ದಿನ್’ಗಳಲ್ಲೇ ಗೃಹ ಮಂತ್ರಿಗಳು ಅರ್ಥಪೂರ್ಣವಾಗಿ ವರ್ಣಿಸಿರುವ “ಜುಮ್ಲಾ”ಗಳ ಸಾಲಿಗೆ ಸೇರುವಂತದ್ದೇ ಎಂಬ ಆತಂಕ ಸಹಜವೇ.

ಹೀಗೆ, ಇದು ಈಗಿರುವ ಸಂಶೋಧನಾ ಬೆಂಬಲ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಕ್ರಮ ಎಂದು ಪ್ರತಿಭಟಿಸಿರುವ ‘ಬ್ರೇಕ್‍ ಥ್ರೂ ಸೈನ್ಸ್ ಸೊಸೈಟಿ’ ಸಂಶೋಧನೆಗೆ ಸರಕಾರದ ಬೆಂಬಲವನ್ನು ಕನಿಷ್ಟ ಜಿಡಿಪಿಯ 3%ಕ್ಕೆ ಏರಿಸಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *