ಬೆಂಗಳೂರು : ಹಳೆ ಪಿಂಚಣಿ ಯೋಜನೆ ಜಾರಿಗಾಗಿ 14 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಎನ್‌ಪಿಎಸ್ ನೌಕರರ ಹೋರಾಟವು ಜನವರಿ 1 ರಂದು ತಾತ್ಕಾಲಿಕವಾಗಿ ಮುಕ್ತಾಯಗೊಂಡಿದೆ. ಈ ಧರಣಿಯನ್ನು ತಾಲೂಕು ಮಟ್ಟಕ್ಕೆ ಸ್ಥಳಾಂತರಗೊಳಿಸಿರುವುದಾಗಿ ಎಂದು ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತಿಳಿಸಿದ್ದಾರೆ.
ರಾತ್ರಿ 8:15 ರ ಸುಮಾರಿಗೆ ಈ ನಿರ್ಧಾರವನ್ನು ಪ್ರಕಟಿಸಿದ ಅವರು, ನಮ್ಮ ಬೇಡಿಕೆ ಈಡೇರಿರುವವರೆಗೂ ಫ್ರೀಡಂ ಪಾರ್ಕಿನ ಅನಿರ್ದಿಷ್ಟಾವಧಿ ಹೋರಾಟವನ್ನು ತಾಲೂಕು ಮಟ್ಟಕ್ಕೆ ಸ್ಥಳಾಂತರಗೊಳಿಸುತ್ತೇವೆ. ಮುಖ್ಯಮಂತ್ರಿಗಳು ಮಾತುಕತೆಗೆ ಕರೆಯುವವರೆಗೆ ಎಲ್ಲಾ ತಾಲ್ಲೂಕಗಳಲ್ಲಿ ವೋಟ್ ಫಾರ್ ಓಪಿಎಸ್ ಅಭಿಯಾನ ಮುಂದುವರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಚಿವ ಸುಧಾಕರ್, ಆಡಳಿತ ಪಕ್ಷದ ನಾಯಕರಾದ ಆಯನೂರು ಮಂಜುನಾಥ್, ಎಂಪಿ ರೇಣುಕಾಚಾರ್ಯ ಅವರುಗಳು ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿ ಮಾಡುವ ಕುರಿತು ಚರ್ಚಿಸಲು ಸಿಎಂ ತೀರ್ಮಾನ ಮಾಡಿದ್ದಾರೆ ಎಂದು ಭರವಸೆ ನೀಡಿದ್ದರು. ಭಾನುವಾರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸುಧಾಕರ್ ಸಿಎಂ ಅವರೊಂದಿಗೆ ನೌಕರರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿಸಿ ಚರ್ಚೆ ನಡೆಸಲು ಕಾರ್ಯ ನಿರ್ವಹಿಸುವೆ. ವೈಯಕ್ತಿಕವಾಗಿ ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಆ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ದರಣಿಯನ್ನು ಫ್ರೀಡಂ ಪಾರ್ಕ್ನಿಂದ ತಾಲ್ಲೂಕ ಮಟ್ಟಕ್ಕೆ ಸ್ಥಳಾಂತರಿಸಿದ್ದೇವೆ. ವೋಟ್ ಫಾರ್ ಓಪಿಎಸ್ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದರು.
ಮಾಜಿ ಪ್ರಧಾನಿ ದೇವೆಗೌಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, CITU ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ, ಉಪಾಧ್ಯಕ್ಷ ಡಾ.ಕೆ ಪ್ರಕಾಶ್, ಇತರೆ ಇಲಾಖೆಗಳ ಸರಕಾರಿ ನೌಕರರು, ಎಸ್ಎಫ್ಐ ಸಂಘಟನೆ ಸೇರಿದಂತೆ ನೂರಾರು ಸಂಘಟನೆಗಳ ಬಲ ಈ ಹೋರಾಟಕ್ಕೆ ಸಿಕ್ಕಿದೆ ಎಂದರು. ಈ ಹೋರಾಟದ ಹಿಂದೆ ಮುಂದೆ ಇದ್ದು ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸರಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಮುಂಬರುವ ಅಧಿವೇಶನ ಸಮಯಕ್ಕೆ 6 ಲಕ್ಷಕ್ಕೂ ಹೆಚ್ಚುಜನ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದರು. ಈ ವೇಳೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಎ.ಎಚ್. ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಸೇರಿದಂತೆ ಅನೇಕರಿದ್ದರು.