ಬೆಂಗಳೂರು: ಕೋಲಾರ ಟಿಕೇಟ್ ಹಂಚಿಕೆ ರಾಜ್ಯ ಕಾಂಗ್ರೆಸ್ ಸೇರಿದಂತೆ ಎಐಸಿಸಿಗೆ ಕಗ್ಗಂಟಾಗಿದೆ. ಈ ಬಾರಿ ಹಾಲಿ ಸಂಸದ ಹೆಚ್. ಮುನಿಯಪ್ಪಗೆ ಕೈತಪ್ಪುವ ಸ್ಪಷ್ಟತೆ ಒಂದೆಡೆ ಕಾಣುತ್ತಿದ್ದರೆ,ಮತ್ತೊಂದೆಡೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಕೋಲಾರದಲ್ಲಿ ಬಣರಾಜಕೀಯ ಜೋರಾಗಿದೆ. ಈ ನಿಟ್ಟಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ವಿಚಾರವಾಗಿ ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ಬೇಟಿ ಮಾಡಿ ಕ್ಷೇತ್ರದ ರಾಜಕೀಯದ ಕುರಿತು ಚರ್ಚಿಸಿ ಒಂದಿಷ್ಟು ವಿಷಯಗಳನ್ನು ಖರ್ಗೆ ಗಮನಕ್ಕೆ ತಂದರು.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ,ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೇ ಆದರು ನಾವೆಲ್ಲಾ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾನು 7 ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದು ನಾನು ಒಂದು ಜಿಲ್ಲೆಗೆ ಸೀಮಿತವಾದ ನಾಯಕ ಅಲ್ಲಾ ನಾನು ಈ ರಾಜ್ಯದಾದ್ಯಂತ ನನ್ನದೇ ಆದ ಕಾರ್ಯಕರ್ತರನ್ನು ಹೊಂದಿದ್ದೇನೆ , ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾ ಡಾ.ಎಂಸಿ ಸುಧಾಕರ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಎಲ್ಲಾ ಶಾಸಕರು ನಾವು ಒಗ್ಗಟ್ಟಿ ನಿಂದ ಕೆಲಸ ಮಾಡಿ ಎರಡು ಕ್ಷೇತ್ರಗಳನ್ನು ಗೆಲ್ಲಸಿಕೊಂಡು ಬರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟಿದ್ದೇವೆ. ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ನಿಲ್ಲಿಸಿದರೂ ಅವರ ಪರ ಕೆಲಸ ಮಾಡಲು ಬದ್ದರಾಗಿದ್ದೇವೆ.ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ 5 ಗ್ಯಾರಂಟಿ ಯೋಜನೆಗಳ ಫಲಪ್ರದವಾಗಿ ನಮಗೆ ಜನರು ಆಶೀರ್ವಾದ ಮಾಡುತ್ತಾರೆ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ : ಸಸ್ಪೆನ್ಸ್ ಆಗಿಯೇ ಉಳಿದ ಕೋಲಾರ ಕ್ಷೇತ್ರ?!
ಐವರು ಶಾಸಕರ ರಾಜೀನಾಮೆ ಬೆದರಿಕೆ : ಈ ಮೊದಲೇ ಹೇಳಿದಂತೆ ಬಣ ರಾಜಕೀಯದ ಜಿದ್ದಾಜಿದ್ದಿ ಜೋರಾಗಿರುವ ಕೋಲಾರದಲ್ಲಿ ಜಂಗೀಕುಸ್ತಿ ಚುನಾವಣಾ ಮತದಾನಕ್ಕೆ ದಿನಾಂಕ ಹತ್ತಿರವಾಗುತ್ತಿದ್ದರೂ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಸಚಿವ ಕೆ.ಹೆಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಿದರೆ (ಐವರು ಶಾಸಕರು) ಮೂವರು ಶಾಸಕರು ಹಾಗು ಇಬ್ಬರು ಪರಿಷತ್ ಸದಸ್ಯರು ರಾಜೀನಾಮೆ ಪ್ರಹಸನಕ್ಕೆ ಮುಂದಾಗಿದ್ದಾರೆ. ವಿಧಾನಸಭಾ ಸ್ಪೀಕರ್ ಹಾಗು ವಿಧಾನಪರಿಷತ್ ಸಭಾಪತಿಗೆ ರಾಜೀನಾಮೆ ಪತ್ರ ನೀಡುವ ನಿರ್ಧಾರ ಮಾಡಿದ್ದಾರೆ.
ಕೆ.ಹೆಚ್ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ, ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಪರಿಷತ್ ಸದ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್ ಸೇರಿ ಐವರು ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರು. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಲೂರು ಶಾಸಕ ಕೆ.ವೈ ನಂಜೇಗೌಡ, ಇಂದು ಕೋಲಾರ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಹಾಗು ಇಬ್ಬರು ಪರಿಷತ್ ಸದಸ್ಯರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಸ್ಪೀಕರ್ ಕಚೇರಿ ಹಾಗೂ ಸಂಜೆ ವೇಳೆಗೆ ಮಂಗಳೂರಿಗೆ ತೆರಳಿ ಸ್ಪೀಕರ್‌ಗೆ ರಾಜೀನಾಮೆ ಪತ್ರ ನೀಡುತ್ತೇವೆ ಎಂದಿದ್ದಾರೆ.
ಈ ನಡುವೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ಹಂಚಿಕೆಗೆ ಮುಂದಾಗಿರುವ ಹೈಕಮಾಂಡ್ ನಾಯಕರು ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದ್ದು, ಉಳಿದ ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಎಡಗೈ ಸಮುದಾಯಕ್ಕೆ ಬಿಟ್ಟುಕೊಡಬೇಕಿದೆ ಎಂಬ ಚರ್ಚೆಗಳು ಕಾಂಗ್ರೆಸ್‌ನ ದಲಿತ ನಾಯಕರಲ್ಲಿ ಕೇಳಿ ಬರುತ್ತಿದೆ.