ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿದೆ. ಈ ನಡುವೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ರವರು ನಾಮಪತ್ರ ಸಲ್ಲಿಸಿದ್ದಾರೆ.
ಆದರೆ ಡಿಕೆಶಿ ಶಿವಕುಮಾರ್ ರವರು ಸಲ್ಲಿಸಿರುವ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆ ಇರುವುದರಿಂದ ಮುಂಜಾಗ್ರತಾವಾಗಿ ಡಿಕೆ ಸುರೇಶ್ ಸಹ ಇಂದು ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಂತೋಷ್ಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಡಿಕೆಶಿ ಪ್ರಕರಣದ ತೀರ್ಪು ಕಾಯ್ದಿರಿಸಿದ ಕೋರ್ಟ್
ಮೊನ್ನೆ ದಿನ ( ಏಪ್ರಿಲ್ 17) ಡಿಕೆ ಶಿವಕುಮಾರ್ರವರು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಇಂದು ಅವರ ಸಹೋದರ ಡಿಕೆ ಸುರೇಶ್ ಸಹ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013ರಿಂದ 2018ರ ವರೆಗೆ ಅಕ್ರಮ ಆಸ್ತಿಗಳಿಕೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಇದರಿಂದ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿರುವ ನಾಮಪತ್ರ ಅನೂರ್ಜಿತ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗ ಡಿ.ಕೆ. ಸುರೇಶ್ ಅವರು ಕನಕಪುರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಣ್ಣನ ಅರ್ಜಿ ಅನೂರ್ಜಿತ ಆದರೂ, ತಮ್ಮ ಗೆದ್ದರೆ ವಿಧಾನಸಭೆಗೆ ಬರಲಿದ್ದಾರೆ.
ಈ ಪ್ರಕರಣವನ್ನು ರದ್ದು ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ಮಧ್ಯೆ ಮಧ್ಯಂತರ ತಡೆಯನ್ನು ರದ್ದು ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳದ ಹಿನ್ನೆಲೆ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013 ರಿಂದ 2018ರ ವರೆಗೆ ಸುಮಾರು 75 ಕೋಟಿ ರೂಪಾಯಿ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಸಿಬಿಐ ಉಲ್ಲೇಖಿಸಿತ್ತು.
ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ :
ಕಳೆದ ಎರಡು ವರ್ಷಗಳಿಂದ ಸಿಬಿಐ ನಡೆಸಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ತನಿಖೆಗೆ ತಡೆ ನೀಡಿರುವುದು ಸುಪ್ರೀಂಕೋರ್ಟ್ನ ನಿಯಮಗಳಿಗೆ ವಿರುದ್ಧ ಎಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ದಾಖಲಾಗಿದ್ದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ತಡೆ ಸಿಕ್ಕಿದ್ದರಿಂದ ಚುನಾವಣೆ ಹೊತ್ತಲ್ಲಿ ಡಿ.ಕೆ.ಶಿವಕುಮಾರ್ ಗೆ ದೊಡ್ಡ ರಿಲೀಫ್ ಸಿಕ್ಕಿತ್ತು.
ಬಿಜೆಪಿ ಈ ಚುನಾವಣೆಯನ್ನು ರಾಜಕೀಯಗೊಳಿಸಲು ಕೇಂದ್ರ ಸರ್ಕಾರದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಇದೇ ವೇಳೆ ಕೇಳಿ ಬರುತ್ತಿವೆ.