ಉಪಚುನಾವಣೆ ಭರಾಟೆ: ರಾಜಕೀಯ ಪಕ್ಷಗಳಿಗೆ ಖಡಕ್​ ಸೂಚನೆ ನೀಡಿದ ಚುನಾವಣಾ ಆಯೋಗ

ನವದೆಹಲಿ: ಉಪಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿರುವ ಕೇಂದ್ರ ಚುನಾವಣಾ ಆಯೋಗವು ಪ್ರಸಕ್ತ ಮೂರು ಲೋಕಸಭಾ ಸ್ಥಾನಗಳು ಹಾಗೂ 30 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಜಿಲ್ಲೆಗಳಿಗೂ ಕೆಲ ಸೂಚನೆಗಳನ್ನು ನೀಡಿದೆ.

ಅಕ್ಟೋಬರ್‌ 30ರಂದು ಹದಿನೈದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 3 ಸಂಸತ್​ ಸ್ಥಾನಗಳು ಹಾಗೂ 30 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಹಾಗೂ ಅದರ ಕೋವಿಡ್​ ಮಾರ್ಗಸೂಚಿಗಳು ಉಪಚುನಾವಣೆ ನಡೆಯುತ್ತಿರುವ ಜಿಲ್ಲೆ ಅಥವಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಉಪಚುನಾವಣೆ ನಡೆಯುವ ಕ್ಷೇಗಳವಲ್ಲದೆ, ಅದರ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳನ್ನು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನಡೆಸುವಂತಿಲ್ಲ ಸೂಚನೆ ನೀಡಿದೆ.

ಕೆಲವು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಯು ಉಪಚುನಾವಣೆ ನಡೆಯುತ್ತಿರುವ ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಇದು ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.

ಜಿಲ್ಲೆಗಳಲ್ಲಿ ಸಾಮಾನ್ಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ಷೇತ್ರವು ರಾಜ್ಯ ರಾಜಧಾನಿ, ಮಹಾನಗರ ಅಥವಾ ನಗರ ಪಾಲಿಕೆಗಳನ್ನು ಒಳಗೊಂಡಿದ್ದಲ್ಲಿ ಎಂಸಿಸಿ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಉಪಚುನಾವಣೆಗೆ ಸಂಬಂಧಿಸಿದ ಯಾವುದೇ ರಾಜಕೀಯ ಚಟುವಟಿಕೆಗಳನ್ನು ಜಿಲ್ಲೆಯೊಳಗೆ ಎಲ್ಲಾದರೂ ಆಯೋಜಿಸಿದ್ದರೆ ಇಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಆ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಪ್ರಕಟಣೆ ಮೂಲಕ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *