ಮಂಡ್ಯ: ಮೇಲುಕೋಟೆ ಚಲುವರಾಯಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ ನಡೆಯುವ ದೀವಟಿಗೆ ಸಲಾಂ(ಸಲಾಂ ಆರತಿ) ಆಚರಣೆಯನ್ನು ಸಂಧ್ಯಾ ಆರತಿ ಎಂದು ಹೆಸರು ಬದಲಾಯಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಆಶ್ವತಿ ಧಾರ್ಮಿಕ ದತ್ತಿ ಆಯುಕ್ತರನ್ನು ಕೋರಿರುವುದು ಕಾನೂನು ಬಾಹಿರ ಮತ್ತು ಅಪಾಯಕಾರಿ, ಕೂಡಲೇ ಈ ಶಿಫಾರಸ್ಸನ್ನು ವಾಪಸ್ಸು ಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ಇತರರ ಮನವಿ ಮೇರೆಗೆ ಈ ಶಿಪಾರಸ್ಸು ಮಾಡಿರುವ ಜಿಲ್ಲಾಧಿಕಾರಿಗಳು ಯಾವ ಕಾನೂನು ಹಾಗೂ ನಿಯಮದ ಅಡಿಯಲ್ಲಿ ಈ ಶಿಪಾರಸ್ಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಬೇಕು. ಜಿಲ್ಲಾಧಿಕಾರಿಗಳ ಈ ಶಿಫಾರಸ್ಸು ಕೋಮುವಾದಿ ಶಕ್ತಿಗಳಿಗೆ ಹೊಸ ಆಯುಧವೊಂದನ್ನು ಕೊಡುತ್ತದೆ ಮತ್ತು ಭಾರತದ ವೈವಿಧ್ಯಮಯ ಧಾರ್ಮಿಕ ಆಚರಣೆಗಳನ್ನು ಬುಲ್ಡೋಜ್ ಮಾಡಿ ಏಕ ರೀತಿಯ ಆಚರಣೆಗಳನ್ನು ಹೇರುವ ಸಂಕುಚಿತ ದೃಷ್ಟಿಯಿಂದ ಕೂಡಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಶಿಫಾರಸ್ಸನ್ನು ಧಾರ್ಮಿಕ ಇಲಾಖೆಯ ಆಯುಕ್ತರು ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ.
ಸಲಾಂ ಆರತಿಯನ್ನೇನೋ ಸಂಧ್ಯಾ ಆರತಿ ಮಾಡುತ್ತೀರಿ, ಚಲುವರಾಯಸ್ವಾಮಿಯ ಪ್ರೀತಿಯ ಮಡದಿ ಬೀಬಿ ನಾಚ್ಚಿಯಾರ್(ವರನಂದಿ ಬಾನು) ಅವರಿಗೆ ವಿಚ್ಚೇದನ ಕೊಡಿಸುತ್ತೀರಾ ಜಿಲ್ಲಾಧಿಕಾರಿಗಳೇ ಎಂದು ಸಿಪಿಐ(ಎಂ) ಪಕ್ಷವು ಪ್ರಶ್ನಿಸಿದೆ. ಚಲುವರಾಯಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಸಹಿಷ್ಣು ಟಿಪ್ಪು ನೀಡಿದ ಕೊಡುಗೆಗಳ ನೆನಪಿಗಾಗಿ ಟಿಪ್ಪುವಿನ ಕಾಲದಿಂದಲೂ “ಸಲಾಂ ಆರತಿ” ಆಚರಣೆಯಲ್ಲಿದೆ. ಈಗ ಎಲ್ಲವನ್ನೂ ಬದಲಾಯಿಸುವ ಬಿಜೆಪಿ ಸರ್ಕಾರದ ರಾಜಕೀಯ ಅಜೆಂಡಾವನ್ನು ಜಾರಿ ಮಾಡಲು ಜಿಲ್ಲಾಧಿಕಾರಿಗಳು ಪ್ರಯತ್ನಿಸುವುದು ಸರಿಯಲ್ಲ ಎಂದು ಸಿಪಿಐ(ಎಂ) ತಿಳಿಸಿದೆ.
ಇಂತಹ ವಿಕೃತಿಗಳನ್ನು ಮತ್ತು ಸಂಕುಚಿತ ರಾಜಕೀಯ ಅಜೆಂಡಾಗಳ ಜಾರಿಯನ್ನು ತಡೆಯಲೆಂದೇ 1991ರ ಪೂಜಾ ಸ್ಥಳಗಳ ಕಾಯಿದೆಯನ್ನು ತರಲಾಗಿದೆ. ಈ ಕಾಯಿದೆಯ ಉದ್ದೇಶವೇ 1947ರ ಪೂರ್ವದಲ್ಲಿ ಈ ದೇಶದ ಇತಿಹಾಸದಲ್ಲಿ ನಡೆದುಹೋದ ಸಂಗತಿಗಳು ಪುನರಾವರ್ತನೆಯಾಗಬಾರದು ಎಂಬುದು ಹಾಗೂ 1947ರ ನಂತರ ಭಾರತೀಯರು ಸಾಂವಿಧಾನಿಕವಾಗಿ ಮಾಡಿಕೊಂಡಿರುವ ಕೂಡಿಬಾಳುವ – ಸಹಬಾಳ್ವೆಯ ಒಪ್ಪಂದವನ್ನು 47ರ ಪೂರ್ವದ ಭೂತಗಳು ಹಾಳುಮಾಡಬಾರದೆಂಬುದು.
ಪೂಜಾ ಸ್ಥಳ ಕಾಯ್ದೆ 1991 ರ ಪ್ರಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಯಾವುದೇ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪರಂಪರಾಗತ ಆಚರಣೆಗಳನ್ನು ಪೂಜಾ ವಿಧಾನಗಳನ್ನು ಬದಲಿಸುವಂತಿಲ್ಲ.
ದಾನ, ದತ್ತಿ, ಭಕ್ತಿ ಮುಂತಾದ ಹಲವು ಕಾರಣಗಳಿಂದ ಧಾರ್ಮಿಕ ಸಾಮರಸ್ಯ ಹಾಗೂ ಸೌಹಾರ್ಧತೆಯ ಪರಂಪರೆ ಎಲ್ಲಾ ಭಾರತೀಯ ಧಾರ್ಮಿಕ ಪರಂಪರೆಯ ಮೂಲಭೂತ ಲಕ್ಷಣವಾಗಿದೆ. ಇದೇ ಭಾರತದ ವೈಶಿಷ್ಟ್ಯ ಇಂತಹ ವೈವಿಧ್ಯಮಯ ವಿಶಿಷ್ಠತೆಯ ನಾಶ ಪರಂಪರೆ ಮತ್ತು ಇತಿಹಾಸಕ್ಕೆ ಮಾಡುವ ದ್ರೋಹ.
ಮಾನ್ಯ ಮಂಡ್ಯ ಜಿಲ್ಲಾಧಿಕಾರಿಗಳು ಈ ಕಾಯ್ದೆಯನ್ನು ಓದಿಕೊಳ್ಳಬೇಕು ಮತ್ತು ಜಿಲ್ಲೆಯ ಸೌಹಾರ್ದ, ಸಹಬಾಳ್ವೆ ಮತ್ತು ಬಹುತ್ವದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಕೆಲಸ ಮಾಡಬೇಕು ಹಾಗೂ ಇಂತಹ ದ್ರೋಹವೆಸಗುವ ಯಾವುದೇ ಪ್ರಯತ್ನಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಬೆಂಬಲಿಸದೇ ತಿರಸ್ಕರಿಸಬೇಕೆಂಬುದು ಸಿಪಿಐ(ಎಂ) ಪಕ್ಷದ ಒತ್ತಾಯವಾಗಿದೆ.