ಸುಪ್ರೀಂ ಕೋರ್ಟ್‌ ಮೇಲೆ ನನಗೆ ಯಾವುದೇ ಭರವಸೆ ಉಳಿದಿಲ್ಲ: ಕಪಿಲ್‌ ಸಿಬಲ್‌

ನವದೆಹಲಿ: ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್‌ ಸಿಬಲ್‌ ಸುಪ್ರೀಂ ಕೋರ್ಟ್‌ ವಿಚಾರದ ಬಗ್ಗೆ ಪ್ರಸ್ತಾಪಿಸಿ ‘ಸುಪ್ರೀಂ ಕೋರ್ಟ್ ಮೇಲೆ ಯಾವುದೇ ಭರವಸೆ ಉಳಿದಿಲ್ಲ. ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕೆಲವೇ ಜಡ್ಜ್‌ಗಳಿಗೆ ವಹಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ʻಇತ್ತೀಚೆಗೆ ನೀಡಿದ ಕೆಲವು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸರ್ವೋಚ್ಚ ನ್ಯಾಯಾಲಯದಿಂದ ಪರಿಹಾರ ಸಿಗುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಭಾವನೆ. ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ 50 ವರ್ಷಗಳ ಕಾರ್ಯನಿರ್ವಹಿಸಿ ಪೂರ್ಣಗೊಳಿಸಿದ ನಂತರ ಈ ಮಾತನ್ನು ಹೇಳುತ್ತಿದ್ದೇನೆʼ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದರೂ, ಅದು ನೆಲದ ವಾಸ್ತವತೆಯನ್ನು ಎಂದಿಗೂ ಬದಲಾಯಿಸುವುದಿಲ್ಲ. ನೀವು ಸರ್ವೋಚ್ಚ ನ್ಯಾಯಾಲಯ ನೀಡಿದ ಪ್ರಗತಿಪರ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ. ಆದರೆ, ವಾಸ್ತವವಾಗಿ ಏನಾಗುತ್ತದೆ ಎಂಬುದರಲ್ಲಿ ಭಾರಿ ವ್ಯತ್ಯಾಸವಿದೆ. ಖಾಸಗಿತನದ ಬಗ್ಗೆ ತೀರ್ಪು ನೀಡಿದೆ. ಇ.ಡಿ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಖಾಸಗಿತನ ಎಲ್ಲಿದೆ ಎಂದು ಪ್ರಶ್ನಿಸಿದರು.

ನನ್ನ 50 ವರ್ಷಗಳ ಸೇವೆಯಲ್ಲಿ ಈ ರೀತಿ ಮಾತನಾಡಬೇಕೆಂದು ಬಯಸಲ್ಲ. ಆದರೆ ಮಾತನಾಡಲೇ ಬೇಕಾದ ಸಂದರ್ಭವಾಗಿದೆ. ನಾವು ಮಾತನಾಡದಿದ್ದರೆ, ಬೇರೆ ಯಾರು ಮಾತನಾಡುತ್ತಾರೆ ಎಂದು ಕೇಳಿದ್ದಾರೆ.

ಕಪಿಲ್‌ ಸಿಬಲ್ ಹೇಳಿಕೆಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ವಕೀಲರ ಸಂಘ (ಎಐಬಿಎ) ‘ಅವಹೇಳನಕಾರಿ’ ಎಂದು ಕರೆದಿದೆ. ದೃಢವಾದ ವ್ಯವಸ್ಥೆಯು ಕಾನೂನಿನಿಂದ ಮಾತ್ರವೇ ಪ್ರೇರಿತವಾಗಿದ್ದು, ಭಾವನೆಗಳಿಂದಲ್ಲ. ಕಪಿಲ್ ಸಿಬಲ್ ಅವರೊಬ್ಬ ಹಿರಿಯ ನ್ಯಾಯವಾದಿ. ನ್ಯಾಯಾಲಯವು ತಮ್ಮ ಅಥವಾ ಸಹೋದ್ಯೋಗಿಗಳ ಸಲ್ಲಿಕೆಗಳನ್ನು ಒಪ್ಪಿಲ್ಲ ಎಂದ ಮಾತ್ರಕ್ಕೇ ನ್ಯಾಯಾಲಯ ಮತ್ತು ನ್ಯಾಯಾಧೀಶರ ತೀರ್ಪುಗಳನ್ನು ನಿರಾಕರಿಸುವುದು ಭೂಷಣವಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಡಾ. ಆದೀಶ್ ಸಿ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *