ಸಾಮ್ರಾಜ್ಯಶಾಹಿಯ ದರೋಡೆಕೋರತನದ ಹಂತದಲ್ಲಿ ಜಗತ್ತಿನ ಯಾವ ದೇಶವೂ ಸುರಕ್ಷಿತವಾಗಿಲ್ಲ

ಭೂಮಿ ಅಥವಾ ಭೂ ಉತ್ಪನ್ನಗಳೂ ಸೇರಿದಂತೆ ಇತರ ದೇಶಗಳ ಸಂಪನ್ಮೂಲಗಳನ್ನು ದೋಚುವುದು ಸಾಮ್ರಾಜ್ಯಶಾಹಿಯು ಸದಾ ಮಾಡುತ್ತಾ ಬಂದಿರುವ ಕೆಲಸವೇ. ಸಮಾಜವಾದೀ ಬಣದ ಉದಯ ಅದಕ್ಕೆ ತಡೆ ತಂದಿತ್ತು. ಅದಿಲ್ಲವಾದ ನಂತರ ಈಗ ಅದು ದರೋಡೆಕೋರತನದ ಹಂತ ತಲುಪಿದೆ. ಯುರೋಪಿನ ಉದಾರವಾದಿಗಳು, ಡೊನಾಲ್ಡ್ ಟ್ರಂಪ್ ಒಬ್ಬ ದರೋಡೆಕೋರನ ರೀತಿಯಲ್ಲಿ ವರ್ತಿಸುತ್ತಿದ್ದು, ಆತನನ್ನು ಮಾತ್ರವೇ ಈ ಎಲ್ಲ ಕೊಳ್ಳೆಹೊಡೆಯುವ ಕೃತ್ಯಗಳಿಗೆ ಹೊಣೆ ಮಾಡುತ್ತಾರಾದರೂ, ಆತ ಅಧಿಕಾರಕ್ಕೆ ಏರುವ ಮೊದಲೇ ಅದು ಈ ಹಂತವನ್ನು ತಲುಪಿತ್ತು. ವೆನೆಜುವೆಲಾ ಪ್ರಕರಣವು ಸಾಮ್ರಾಜ್ಯಶಾಹಿಯ ದರೋಡೆಕೋರ ಹಂತದ ಇತ್ತೀಚಿನ ಕೃತ್ಯವಾಗಿದೆಯಷ್ಟೇ. ವಿಶ್ವದ ಯಾವುದೇ ದೇಶವು ಈಗ ಈ ದರೋಡೆಕೋರ ಹಸ್ತಕ್ಷೇಪದಿಂದ ಸುರಕ್ಷಿತವಾಗಿ ಉಳಿದಿಲ್ಲ. ಆದರೆ ಸಾಮ್ರಾಜ್ಯಶಾಹಿಯ ಇಲ್ಲಿಯವರೆಗಿನ ಅತ್ಯುನ್ನತ ಹಂತವಾಗಿರುವ ಈ ದರೋಡೆಕೋರ ಹಂತವು ದೀರ್ಘಕಾಲ ಮುಂದುವರೆಯುವುದು ಸಾಧ್ಯವಿಲ್ಲ. ಸಾಮ್ರಾಜ್ಯಶಾಹಿ
ಪ್ರೊ. ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ. ನಾಗರಾಜ್

ಸೋವಿಯತ್ ಒಕ್ಕೂಟವು ಪತನವಾದ ಕಾಲದಲ್ಲಿ ಉದಾರವಾದಿ ಬೂರ್ಜ್ವಾ ಬರಹಗಾರರು ಅದನ್ನು ವಿಶ್ವ ವ್ಯಾಪಿ ಪ್ರಜಾಪ್ರಭುತ್ವ ಮತ್ತು ಸ್ಥಿರತೆಯ ವಿಜಯದ ಒಂದು ಹೊಸ ಯುಗದ ಆಗಮನವೆಂದು ಘೋಷಿಸಿದ್ದರು. ಸಮಾಜವಾದದ ಸವಾಲು ಅನವಶ್ಯವಾಗಿಬಿಟ್ಟಿದೆ ಎಂದೂ ಮತ್ತು ಅದರ ಉದ್ದೇಶಕ್ಕೆ ವಿರುದ್ಧವಾದ ಪರಿಣಾಮ ಹೊಂದಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದರು ಮತ್ತು  ಬಂಡವಾಳಶಾಹಿಯು ಅದಾಗಲೇ ತನ್ನ ವಸಾಹತುಗಳಿಗೆ ರಾಜಕೀಯ ಸ್ವಾತಂತ್ರ‍್ಯವನ್ನು ನೀಡಿರುವುದರಿಂದ ಮತ್ತು ತನ್ನ ಪ್ರಮುಖ ಕೇಂದ್ರಗಳಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ಮತ್ತು ಕಲ್ಯಾಣ ಪ್ರಭುತ್ವ ಕ್ರಮಗಳನ್ನು ಪರಿಚಯಿಸಿದ್ದುದರಿಂದ ಸಮಾಜವಾದದ ಸವಾಲು ಇಲ್ಲದೆ ಹೋದರೂ ಮಾನವಕುಲಕ್ಕೆ ಶಾಂತಿಯನ್ನು, ಆರ್ಥಿಕ ಭದ್ರತೆಯನ್ನು ಮತ್ತು ವೈಯಕ್ತಿಕ ಸ್ವಾತಂತ್ರ‍್ಯವನ್ನು ಅದು ಖಾತರಿಪಡಿಸುತ್ತದೆ ಎಂದು ನಂಬಿದ್ದರು. ಮತ್ತೊಂದೆಡೆ, ಎಡಪಂಥೀಯ ಬರಹಗಾರರು ಇವೆಲ್ಲವೂ ಸಮಾಜವಾದದ ಸವಾಲಿನಿಂದ ಬಂಡವಾಳಶಾಹಿಯ ಅಸ್ತಿತ್ವಕ್ಕೇ ಎದುರಾದ ಬೆದರಿಕೆಯ ಸನ್ನಿವೇಶದಲ್ಲಿ ಅದರಿಂದ ಕಿತ್ತುಕೊಂಡ ರಿಯಾಯಿತಿಗಳೆಂದು ಕಂಡರು; ಸಮಾಜವಾದದ ಸವಾಲಿನ ತೀವ್ರತೆ ತಗ್ಗಿದ ಕೂಡಲೇ ಬಂಡವಾಳಶಾಹಿಯು ಯಥಾಪ್ರಕಾರ ತನ್ನ ಎಂದಿನ ಕೊಳ್ಳೆ ಹೊಡೆಯುವ ಚಾರಿತ್ರ್ಯವನ್ನು ಪಡೆದುಕೊಳ್ಳುತ್ತದೆ ಮತ್ತು ಈ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯ ಸರಿಯಾಗಿತ್ತು ಎಂಬುದು ಈಗ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಚರ್ಚೆಯ ವಿಷಯವಾಗಿರುವ ಸಾಮ್ರಾಜ್ಯಶಾಹಿಯು ಪ್ರದರ್ಶಿಸುತ್ತಿರುವ ನಗ್ನ ಆಕ್ರಮಣಕಾರಿ ಸ್ವಭಾವವನ್ನು ಅದರ “ದರೋಡೆಕೋರ ಹಂತ” ಎಂದೇ ಕರೆಯಬಹುದು.

ಯುಎಸ್ ಸಾಮ್ರಾಜ್ಯಶಾಹಿಯು  ಕ್ರಮಬದ್ಧವಾಗಿ ಆಯ್ಕೆಯಾದ ಬೇರೊಂದು ದೇಶದ,  ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಮತ್ತು ಅವರ ಪತ್ನಿಯನ್ನು ಮಿಲಿಟರಿ ಕಾರ್ಯಾಚರಣೆಯ ಮೂಲಕ ಅವರ ನಿವಾಸದಿಂದ ಅಪಹರಿಸಿ, ನಂಬಬಹುದಾದ ಯಾವುದೇ ಪುರಾವೆಯನ್ನೂ ಒದಗಿಸದೆ ಕೇವಲ ಸುಳ್ಳು ಆರೋಪಗಳ ವಿಚಾರಣೆಗೆ ಒಳಪಡಿಸುವ ಸಲುವಾಗಿ ಅವರಿಗೆ ಕೈಕೋಳ ಹಾಕಿ ಅವರನ್ನು ಯುಎಸ್‌ಗೆ ಕರೆತರುವುದು ಮತ್ತು ಒಂದು ಕೈಗೊಂಬೆ ಸರ್ಕಾರವನ್ನು ಸ್ಥಾಪಿಸುವವರೆಗೆ ವೆನೆಜುವೆಲಾವನ್ನು ಅಮೆರಿಕದ ಒಂದು ವಸಾಹತುವಾಗಿ ನೇರವಾಗಿ ಆಳುವುದು, ಎಲ್ಲ ಅಂತರರಾಷ್ಟ್ರೀಯ ಕಾನೂನು ಮತ್ತು ನೈತಿಕ ನಡವಳಿಕೆಯ ಮಾನದಂಡಗಳನ್ನು ಉಲ್ಲಂಘಿಸುವ ಊಹಿಸಲೂ ಆಗದ ಒಂದು ಸೊಕ್ಕಿನ ಕೃತ್ಯವಾಗಿದೆ ಮತ್ತು ಇದೆಲ್ಲವೂ ಸಾಮ್ರಾಜ್ಯಶಾಹಿಯ ಈ “ದರೋಡೆಕೋರ ಹಂತ”ವನ್ನು ಪ್ರತಿನಿಧಿಸುತ್ತದೆ.

ವೆನೆಜುವೆಲಾ ಪ್ರಕರಣವು ಸಾಮ್ರಾಜ್ಯಶಾಹಿಯ ದರೋಡೆಕೋರ ಹಂತದ ಇತ್ತೀಚಿನ ಕೃತ್ಯವಾಗಿದೆಯಷ್ಟೇ. ಹಿಂದೊಮ್ಮೆ ಸಂಪೂರ್ಣ ಸುಳ್ಳು ಆರೋಪಗಳ ಮೇಲೆ, ಇರಾಕಿನ ಸದ್ದಾಂ ಹುಸೇನ್ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಿ ಅವರಿಗೆ ಮರಣದಂಡನೆ ವಿಧಿಸಿರುವುದು, ಲಿಬಿಯಾದ ಮುಅಮ್ಮರ್ ಗಡಾಫಿ ಅವರ ಕ್ರೂರ ಹತ್ಯೆ, ಸಿರಿಯಾದ ಮೇಲೆ ಆಕ್ರಮಣ, ಪ್ಯಾಲೆಸ್ಟೀನಿಯನ್ ಜನರ ಮೇಲೆ, ಅವರು ತಮ್ಮನ್ನು ತಮ್ಮ ಮನೆಗಳಿಂದ ಹೊರಹಾಕಬಾರದು ಎಂದು ಬಯಸಿದ್ದೇ “ಅಪರಾಧ”ಎನ್ನುವಂತೆ ಅವರ ಮೇಲೆ ಸಾಮ್ರಾಜ್ಯಶಾಹಿ ಬೆಂಬಲಿತ ನೆಲಸಿಗ ವಸಾಹತುಶಾಹಿ ಯೋಜನೆಯಂತೆ ನಡೆಸಿದ ನರಮೇಧ, ಗಾಜಾವನ್ನು ಯುಎಸ್ ವಸಾಹತುವನ್ನಾಗಿ ಸ್ವಾಧೀನಪಡಿಸಿಕೊಳ್ಳುವುದು ಮತ್ತು ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ ಒಬ್ಬ “ವೈಸ್ರ‍್ರಾಯ್”ನ ಆಳ್ವಿಕೆಯ ಮೂಲಕ ಅದನ್ನು ಭಾರೀ ಬೆಲೆ ತಂದುಕೊಡಬಹುದಾದ ಒಂದು ರಿಯಲ್ ಎಸ್ಟೇಟ್ ತುಂಡು ಭೂಮಿಯಾಗಿ ಪರಿವರ್ತಿಸುವುದು, ಇವೆಲ್ಲವೂ ಸಾಮ್ರಾಜ್ಯಶಾಹಿಯ ಅನಾವರಣಗೊಳ್ಳುತ್ತಿರುವ ದರೋಡೆಕೋರ ಹಂತದಲ್ಲಿ ಕಂಡು ಬಂದ ಪ್ರಸಂಗಗಳಾಗಿವೆ.

ಇದನ್ನೂ ಓದಿ : ಯುಎಸ್‍ ಅಧ್ಯಕ್ಷರನ್ನು ‘ಖುಶಿಪಡಿಸುವುದು ಮುಖ್ಯ’ ! ಸಾಮ್ರಾಜ್ಯಶಾಹಿ

ಈಗ ಗಿಲೀಟಿಲ್ಲದ ‘ಸುಸಂಸ್ಕೃತ’ರಷ್ಟೇ

ಉದಾರವಾದಿಗಳು, ಮತ್ತೊಮ್ಮೆ, ಒಬ್ಬ ದರೋಡೆಕೋರನ ರೀತಿಯಲ್ಲಿ ವರ್ತಿಸುವ ಡೊನಾಲ್ಡ್ ಟ್ರಂಪ್ ಯಾರಿಗೂ ಬಗ್ಗದ ಒಬ್ಬ ಪುಂಡ ಎಂಬಂತೆ ಬಿಂಬಿಸಿ, ಈ ಎಲ್ಲ ಕೊಳ್ಳೆಹೊಡೆಯುವ ಕೃತ್ಯಗಳಿಗೆ ಆತ ಮಾತ್ರವೇ ಹೊಣೆ ಎನ್ನುತ್ತಾರೆ. ಆದರೆ, ಮೇಲ್ಕಾಣಿಸಿದ ಬಹುತೇಕ ಪ್ರಕರಣಗಳು ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವ ಮೊದಲೇ ನಡೆದಿವೆ. ಟ್ರಂಪ್ ಮತ್ತು ಅಮೆರಿಕದ ಹಿಂದಿನ ಅಧ್ಯಕ್ಷರುಗಳ ನಡುವಿನ ವ್ಯತ್ಯಾಸವೆಂದರೆ, ಹಿಂದಿನವರು ತಮ್ಮ ದರೋಡೆಕೋರ ಕೃತ್ಯಗಳನ್ನು “ಸುಸಂಸ್ಕೃತ” ಮಾತುಗಳ ಗಿಲೀಟಿನಲ್ಲಿ ಮರೆಮಾಚಿದ್ದರು. ಆದರೆ ಟ್ರಂಪ್ ತಮ್ಮ ಆಡಳಿತದ ಉದ್ದೇಶಗಳ ಬಗ್ಗೆ ಯಾವ ಮುಚ್ಚುಮರೆಯನ್ನೂ ಮಾಡುವುದಿಲ್ಲ. ಮೇಲಾಗಿ, ಪ್ಯಾಲೆಸ್ಟೀನಿಯನ್ನರ ನರಮೇಧವೂ ಸೇರಿದಂತೆ, ಮೇಲ್ಕಾಣಿಸಿದ ಎಲ್ಲ ಘಟನೆಗಳೂ, ತಮ್ಮ “ಉದಾರವಾದಿ” ತತ್ವ ಪ್ರಚಾರವನ್ನು ಎಂದಿಗೂ ನಿಲ್ಲಿಸದ ಸಾಮ್ರಾಜ್ಯಶಾಹಿ ದೇಶಗಳ ಬೆಂಬಲವನ್ನು ಪೂರ್ಣವಾಗಿ ಹೊಂದಿವೆ. ನಿಕೋಲಸ್ ಮದುರೊ ಅಪಹರಣವು, ಟ್ರಂಪ್ ಗೆ ಬೆಣ್ಣೆ ಹಚ್ಚ ಬಯಸುವ ಜಾಗತಿಕ ದಕ್ಷಿಣದ ಕೆಲವರನ್ನು (ಅವರಲ್ಲಿ ಭಾರತವೂ ಸೇರಿದೆ) ಹೊರತುಪಡಿಸಿ, ವಿಶ್ವಾದ್ಯಂತ ಖಂಡಿಸಲ್ಪಟ್ಟಿದ್ದರೂ, ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್ನಿನ ಸಕ್ರಿಯ ಬೆಂಬಲ ಅಥವಾ ಮೌನ ಸಮ್ಮತಿ ಪಡೆದಿದೆ.

ನಿಕೋಲಸ್ ಮದುರೊ ಒಬ್ಬ ಸರ್ವಾಧಿಕಾರಿ ಆಡಳಿತಗಾರನಾಗಿದ್ದರಿಂದ, ಅವನ ಪದಚ್ಯುತಿಯ ಬಗ್ಗೆ ಯಾರೂ ವ್ಯಥೆಪಡಬೇಕಾಗಿಲ್ಲ ಎಂಬ ವಾದವನ್ನು ಅಮೆರಿಕದ ಯುರೋಪಿಯನ್ ಮಿತ್ರರಾಷ್ಟ್ರಗಳು ಮುಂದಿಡುತ್ತಿವೆ. ಈ ವಾದವು ಒಂದು ಅಸಂಬದ್ಧತೆಯೇ ಸರಿ. ಅಂತರರಾಷ್ಟ್ರೀಯ ಕಾನೂನು ಅಮೆರಿಕ ಅಥವಾ ಬೇರೆ ಯಾವುದೇ ಒಂದು ದೇಶವು ಮತ್ತೊಂದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಅದರ ವ್ಯವಹಾರಗಳಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡುವುದನ್ನು ಅನುಮತಿಸುವುದಿಲ್ಲ. ಯಾರನ್ನು ಒಬ್ಬ ಆಡಳಿತಗಾರನಾಗಿ ಆರಿಸಬೇಕು ಎಂಬುದನ್ನು ನಿರ್ಧರಿಸುವುದು ಆ ದೇಶದ ಜನರ ಜವಾಬ್ದಾರಿಯಾಗಿರುವುದರಿಂದ, ಮದುರೊ ಒಬ್ಬ ಸರ್ವಾಧಿಕಾರಿಯಾಗಿದ್ದರೋ ಇಲ್ಲವೋ ಎಂಬುದು ಯುಎಸ್ ಹಸ್ತಕ್ಷೇಪದ ವಿಷಯವಾಗಲು ಸಾಧ್ಯವಿಲ್ಲ.

ಅಸಂಬದ್ಧ ಸಮರ್ಥನೆ

ಇದಲ್ಲದೆ, ಮದುರೊ ಬಂಧನದ ನಂತರ ವೆನೆಜುವೆಲಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಷ್ಟು ಜನಪ್ರಿಯ ಬೆಂಬಲವನ್ನು ಮದುರೊ ಅವರ ಪ್ರಮುಖ ಎದುರಾಳಿ ಮಾರಿಯಾ ಕೊರಿನಾ ಮಚಾದೊ ಅವರು ಹೊಂದಿಲ್ಲ ಎಂಬುದನ್ನು ಸ್ವತಃ ಟ್ರಂಪ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಎರಡು ಪ್ರಮುಖ ರಾಜಕೀಯ ವೇದಿಕೆಗಳನ್ನು ಹೊಂದಿರುವ ದೇಶದಲ್ಲಿ, ಒಂದು ವೇದಿಕೆಯು ಸಾಕಷ್ಟು ಜನಪ್ರಿಯ ಬೆಂಬಲ ಹೊಂದಿಲ್ಲದಿದ್ದರೆ, ಆಗ ಇನ್ನೊಂದಕ್ಕೆ ಹೆಚ್ಚಿನ ಬೆಂಬಲ ಇರುತ್ತದೆ ಎಂಬುದು ತರ್ಕಕ್ಕೆ ನಿಲುಕುತ್ತದೆ. ಅಂಥಹ ಒಂದು ತಾರ್ಕಿಕ ಸನ್ನಿವೇಶದಲ್ಲಿ ಮದುರೊಗೆ ರಾಜಕೀಯ ಮಾನ್ಯತೆ ಇಲ್ಲ ಎಂದು ಟ್ರಂಪ್ ಮತ್ತು ಯೂರೋಪಿಯನ್ ನಾಯಕರು ಹೇಳುವುದು ಒಂದು ಸಂಪೂರ್ಣ ಅಸಂಬದ್ಧವೇ ಸರಿ. ಮಚಾದೊ ಮತ್ತು ಮದುರೊ ಇಬ್ಬರಿಗೂ ರಾಜಕೀಯ-ಮಾನ್ಯತೆ ಒಂದು ವೇಳೆ ಇಲ್ಲದಿದ್ದರೆ, ವೆನೆಜುವೆಲಾದಲ್ಲಿ ರಾಜಕೀಯ-ಮಾನ್ಯತೆ ಪಡೆದಿರುವವರು ಯಾರು ಎಂಬುದನ್ನು ಟ್ರಂಪ್ ನಿರ್ದಿಷ್ಟಪಡಿಸಬೇಕಾಗುತ್ತದೆ.

ಯುಎಸ್ ತೈಲ ಕಂಪನಿಗಳು ಮತ್ತು ಯುಎಸ್ ಅಧ್ಯಕ್ಷರ

‘ಚಿಯರ್ಸ್.. ..’

ವ್ಯಂಗ್ಯಚಿತ್ರ ಕೃಪೆ: ಸುಭಾನಿ, ಡೆಕ್ಕನ್ ಕ್ರಾನಿಕಲ್

ಮದುರೊ ಅವರನ್ನು ಪದಚ್ಯುತಿಗೊಳಿಸಿದ ನಿಜ ಕಾರಣವನ್ನು ಟ್ರಂಪ್ ಜನವರಿ 3ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಹಜ ಒರಟುತನದಿಂದ “ನಾವು ನೆಲದಿಂದ ಅಪಾರ ಪ್ರಮಾಣದ ಸಂಪತ್ತನ್ನು ಹೊರ ತೆಗೆಯಲಿದ್ದೇವೆ” ಎಂದು ಹೇಳುವ ಮೂಲಕ ಬಹಿರಂಗಪಡಿಸಿದರು. ಅವರ ಪ್ರಕಾರ, ವೆನೆಜುವೆಲಾದಲ್ಲಿ ಗಳಿಸಿದ ಹಣ ವೆನೆಜುವೆಲಾದ ಜನರಿಗೆ ಮಾತ್ರವಲ್ಲದೆ ಅಮೇರಿಕನ್ ತೈಲ ಕಂಪನಿಗಳಿಗೆ ಮತ್ತು “ಆ ದೇಶದಿಂದ ಉಂಟಾದ ಹಾನಿಗಳಿಗೆ ಮರುಪಾವತಿ ರೂಪದಲ್ಲಿ ಯುಎಸ್‌ಎ”ಗೆ ಹೋಗುತ್ತದೆ. ಅವರು ಉಲ್ಲೇಖಿಸಿದ ಈ “ಹಾನಿಗಳು” ಉಂಟಾಗಿರುವುದು ವೆನೆಜುವೆಲಾ ತನ್ನ ತೈಲ ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸಿದ್ದರಿಂದ ಎಂದು ತೋರುತ್ತದೆ. ವಿಶ್ವದ ಒಟ್ಟು ತೈಲ ನಿಕ್ಷೇಪಗಳಲ್ಲಿ ಶೇ. 17ರಷ್ಟು ಭಾಗವನ್ನು ಹೊಂದಿರುವ ವೆನೆಜುವೆಲಾ ವಿಶ್ವದ ಯಾವುದೇ ದೇಶಕ್ಕಿಂತಲೂ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿದೆ. ಮತ್ತು, ವೆನೆಜುವೆಲಾದ ತೈಲವನ್ನು ದೋಚುವ ಟ್ರಂಪ್ ಅವರ ಪ್ರಸ್ತಾಪವು ಆ ದೇಶವನ್ನು ಸ್ವಾಧೀನಪಡಿಸಿಕೊಂಡು “ನಡೆಸುವ” ಉದ್ದೇಶವನ್ನು ಅವರು ನಿರ್ಲಜ್ಜವಾಗಿ ಒಪ್ಪಿಕೊಂಡಿದ್ದಾರೆ. ಇದು ಬಹಿರಂಗ ದರೋಡೆಕೋರತನವಲ್ಲದೆ ಬೇರೇನೂ ಅಲ್ಲ: ನಿಮ್ಮ ಬಳಿ ತೈಲವಿದೆ, ನಾವು ಅದನ್ನು ನಿಮ್ಮಿಂದ ತೆಗೆದುಕೊಳ್ಳುತ್ತೇವೆ. ಅದಕ್ಕೆ ನಿಮ್ಮ ಅಧ್ಯಕ್ಷರು ಒಂದು ವೇಳೆ ಅಡ್ಡ ಬಂದರೆ ಅವರನ್ನು ಅಪಹರಿಸುವ ಮೂಲಕ ಅಥವಾ ನಿಮ್ಮ ದೇಶವನ್ನು ನೇರವಾಗಿ ವಸಾಹತುವಿನಂತೆ ನಡೆಸುವ ಮೂಲಕ ಅಥವಾ ನಿಮ್ಮ ದೇಶವನ್ನು ಲೂಟಿ ಮಾಡಲು ನಮಗೆ ಅವಕಾಶ ನೀಡುವ ಒಂದು ಕೈಗೊಂಬೆ ಸರ್ಕಾರವನ್ನು ಸ್ಥಾಪಿಸುವ ಮೂಲಕವಾದರೂ ಸರಿಯೇ, ನಾವು ಅದನ್ನು ಪಡೆದೇ ತೀರುತ್ತೇವೆ ಎನ್ನುತ್ತಾರೆ ಟ್ರಂಪ್.

ಖಚಿತವಾಗಿ ಹೇಳಬೇಕೆಂದರೆ, ಭೂಮಿ ಅಥವಾ ಭೂ ಉತ್ಪನ್ನಗಳೂ ಸೇರಿದಂತೆ ಇತರ ದೇಶಗಳ ಸಂಪನ್ಮೂಲಗಳನ್ನು ದೋಚುವುದು ಸಾಮ್ರಾಜ್ಯಶಾಹಿಯು ಸದಾ ಮಾಡುತ್ತಾ ಬಂದಿರುವ ಕೆಲಸವೇ. ಅದು ಸಾಮ್ರಾಜ್ಯಶಾಹಿಯ ಪ್ರಧಾನ ಉದ್ದೇಶವೂ ಹೌದು. ನಿರ್ವಸಾಹತೀಕರಣದ ನಂತರ, ಈ ದೋಚಾಟಕ್ಕೆ ಅಡ್ಡಿಯಾಗುವ ಸರ್ಕಾರಗಳನ್ನು ಉರುಳಿಸಿ ತಾನು ಹೇಳಿದಂತೆ ಕೇಳುವ ಸರ್ಕಾರಗಳನ್ನು ಸ್ಥಾಪಿಸುವ ಮೂಲಕ ಸಾಮ್ರಾಜ್ಯಶಾಹಿಯು ತನ್ನ ಲೂಟಿಯ ಪ್ರಯತ್ನವನ್ನು ಮುಂದುವರೆಸಿತು. ಗ್ವಾಟೆಮಾಲಾದಲ್ಲಿ ಅರ್ಬೆನ್ಜ್, ಇರಾನಿನಲ್ಲಿ ಮೊಸಾದೆೆಗ್, ಕಾಂಗೋ ಎಂದು ಆಗ ಕರೆಯಲಾಗುತ್ತಿದ್ದ ದೇಶದ ಪ್ಯಾಟ್ರಿಸ್ ಲುಮುಂಬಾ ಮತ್ತು ಚಿಲಿಯಲ್ಲಿ ಅಲೆಂದೆ ಇವರುಗಳ ವಿರುದ್ಧ ಸಿಐಎ ಪ್ರಾಯೋಜಿಸಿದ ‘ಕ್ಷಿಪ್ರಕ್ರಾಂತಿ’ಗಳು ಸ್ಪಷ್ಟ ಉದಾಹರಣೆಗಳಾಗಿ ನೆನಪಿಗೆ ಬರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪೂರ್ವ ಯುರೋಪಿನ ದೇಶಗಳಲ್ಲಿ, ಹಿಂದಿನ ಸೋವಿಯತ್ ಗಣರಾಜ್ಯಗಳಲ್ಲಿ ನಡೆದ ವಿವಿಧ ಬಣ್ಣಗಳ ಕ್ರಾಂತಿಗಳು ಮತ್ತು ಪಶ್ಚಿಮ ಏಷ್ಯಾದ ಮೇಲೆ ಅಮೆರಿಕ ನಡೆಸಿದ ದಾಳಿ, ಇವೆಲ್ಲವೂ ಒಂದೇ ಪ್ರಕಾರದವು. ಈ ಹಿಂದಿನ ಎಲ್ಲ ಪ್ರಕರಣಗಳಿಗೂ ಮತ್ತು ವೆನೆಜುವೆಲಾದ ಈಗಿನ ಪ್ರಕರಣಕ್ಕೂ ನಡುವೆ ಇರುವ ವ್ಯತ್ಯಾಸವೆಂದರೆ, ಹಿಂದಿನ ಪ್ರಕರಣಗಳಲ್ಲಿ ಆಂತರಿಕ ಸಂಘರ್ಷದ ಒಂದು ಪಾಳೆಯವನ್ನು ಬೆಂಬಲಿಸುವ ಮತ್ತು ತೆರೆಮರೆಯಲ್ಲಿ ದಂಗೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಯುಎಸ್ ಮಾಡಿತ್ತು. ಆದರೆ ವೆನೆಜುವೆಲಾದಲ್ಲಿ ಮಾನ ಮುಚ್ಚಿಕೊಳ್ಳಲಿಕ್ಕಾದರೂ ಒಂದು ಪಾಳೆಯವನ್ನು ಬೆಂಬಲಿಸುವ ನೆಪವನ್ನೂ ಒಡ್ಡದೆ ನೇರ ಮಿಲಿಟರಿ ಹಸ್ತಕ್ಷೇಪ ಮಾಡಿದೆ.

ಕುಖ್ಯಾತ ಮೊನ್ರೋ ಸಿದ್ಧಾಂತದ ಪುನರುಜ್ಜೀವನ

ಖನಿಜ ಸಂಪತ್ತು ಹೊಂದಿಲ್ಲದಿದ್ದರೂ ಸಹ, ಸಾಮ್ರಾಜ್ಯಶಾಹಿ ವಿರೋಧಿ ಸರ್ಕಾರಗಳನ್ನು ಹೊಂದಿರುವ ದೇಶಗಳನ್ನು ಅಮೆರಿಕ ಗುರಿಮಾಡಿಕೊಂಡಿದೆ. ಟ್ರಂಪ್ ಈಗಾಗಲೇ ಕುಖ್ಯಾತ ಮೊನ್ರೋ ಸಿದ್ಧಾಂತವನ್ನು ಪುನರುಜ್ಜೀವಗೊಳಿಸುವ ಪ್ರಯತ್ನದ ಭಾಗವಾಗಿ ಕ್ಯೂಬಾ, ಮೆಕ್ಸಿಕೊ ಮತ್ತು ಕೊಲಂಬಿಯಾವನ್ನು ಗುರಿಯಾಗಿಸುವ ತನ್ನ ಯೋಜನೆಗಳನ್ನು ಘೋಷಿಸಿದ್ದಾರೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶ ಮಾತ್ರವೇ ಅವರ ಸಾಮ್ರಾಜ್ಯ ವಿಸ್ತರಣೆಯ ವ್ಯಾಪ್ತಿಗೆ ಸೀಮಿತವಾಗಿಲ್ಲ. ವಿಶ್ವದ ಯಾವುದೇ ದೇಶವು ಯುಎಸ್ ಹಸ್ತಕ್ಷೇಪದಿಂದ ಈಗ ಸುರಕ್ಷಿತವಾಗಿ ಉಳಿದಿಲ್ಲ.

ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಮಯದಲ್ಲಿ ಅಮೆರಿಕವು ಆ ದ್ವೀಪದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದಾಗ, ಯುಎಸ್ ಜೊತೆ ಪರಮಾಣು ಸಂಘರ್ಷಕ್ಕೆ ಇಳಿಯಬಹುದಾದ ಅಪಾಯವಿದ್ದರೂ ಸಹ, ಸೂಯೆಜ್ ಕಾಲುವೆಯನ್ನು ಗಮಾಲ್ ಅಬ್ದುಲ್ ನಾಸೆರ್ ರಾಷ್ಟ್ರೀಕರಣಗೊಳಿಸಿದ ನಂತರ ಆಂಗ್ಲೋ-ಫ್ರೆಂಚ್ ಆಕ್ರಮಣದ ವಿರುದ್ಧ ಈಜಿಪ್ಟ್ ಅನ್ನು ರಕ್ಷಿಸಲು ಮುಂದೆ ಬಂದ ರೀತಿಯಲ್ಲಿಯೇ, ಸೋವಿಯತ್ ಒಕ್ಕೂಟವು ಕ್ಯೂಬಾವನ್ನು ರಕ್ಷಿಸಲು ಮುಂದೆ ಬಂದಿತು. ಈ ಎರಡೂ ಸಂದರ್ಭಗಳಲ್ಲಿಯೂ ಸಾಮ್ರಾಜ್ಯಶಾಹಿಯು ಹಿಮ್ಮೆಟ್ಟಬೇಕಾಯಿತು. ಸೋವಿಯತ್ ಒಕ್ಕೂಟದ ಪತನವನ್ನು ಅಥವಾ ಅನುಪಸ್ಥಿತಿಯನ್ನು ಯುಎಸ್ ನೇತೃತ್ವದ ಸಾಮ್ರಾಜ್ಯಶಾಹಿಯಿಂದ ಬೆದರಿಕೆಗೆ ಒಳಗಾದ ವಿಶ್ವದ ಎಲ್ಲ ದೇಶಗಳೂ ಇಂದು ದಾರುಣವಾಗಿ ಅನುಭವಿಸಲಿವೆ.

ಸಾಮ್ರಾಜ್ಯಶಾಹಿಯ ಇಲ್ಲಿಯವರೆಗಿನ ಅತ್ಯುನ್ನತ ಹಂತವಾಗಿರುವ ಈ ದರೋಡೆಕೋರ ಹಂತವು ದೀರ್ಘಕಾಲ ಮುಂದುವರೆಯುವುದು ಸಾಧ್ಯವಿಲ್ಲ. ವಿಶ್ವದ ಜನತೆ, ವಿಶೇಷವಾಗಿ ಸಾಮ್ರಾಜ್ಯಶಾಹಿಯ ಬಲಿಪಶುಗಳಾದ ಮೂರನೇ ಜಗತ್ತಿನ ಜನತೆ, ಸಾಮ್ರಾಜ್ಯಶಾಹಿ ಪ್ರಾಬಲ್ಯದ ಗುಲಾಮಗಿರಿಯನ್ನು ಮತ್ತೊಮ್ಮೆ ಒಪ್ಪಿಕೊಳ್ಳವುದಿಲ್ಲ. ಹಾಗೆ ನೋಡಿದರೆ, ಅರಬ್ ಜಗತ್ತಿನಲ್ಲಿ ಸಾಮ್ರಾಜ್ಯಶಾಹಿ ದರೋಡೆಕೋರತನದ ಹಿಂದಿನ ಪ್ರಕರಣಗಳಲ್ಲಿಯೂ ಸಹ ಅದರ ಹಸ್ತಕ್ಷೇಪದ ಫಲಿತಾಂಶವು ಉದ್ದೇಶಿಸಿದ್ದಕ್ಕಿಂತ ಭಿನ್ನವಾಗಿಯೇ ಇತ್ತು.

ಈ ಸಂದರ್ಭದಲ್ಲಿ ಗಮನಾರ್ಹವಾದ ಅಂಶವೆಂದರೆ, ಮದುರೊ ಅವರನ್ನು ಪದಚ್ಯುತಿಗೊಳಿಸಿದ ನಂತರ ತೆರವಾದ ಅವರ ಸ್ಥಾನವನ್ನು ತುಂಬಿದ ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅಮೆರಿಕದ ಆಜ್ಞೆಯನ್ನು ಪಾಲಿಸುತ್ತಾರೆ ಎನ್ನುವ ಟ್ರಂಪ್ ಅವರ ಆಪ್ಯಾಯಮಾನವಾದ ಊಹೆಯು ಈಗಾಗಲೇ ಟೊಳ್ಳಾಗಿದೆ ಎಂಬುದು: ಡೆಲ್ಸಿ ಅವರು ಅಮೆರಿಕದ ಕ್ರಮವನ್ನು ಖಂಡಿಸಿದ್ದಾರೆ ಮತ್ತು ಮದುರೊ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಟ್ರಂಪ್ “ಮದುರೊಗಿಂತ ಕೆಟ್ಟ ಗತಿ ಕಾದಿದೆ” ಎಂದು ಅವರಿಗೆ ಬೆದರಿಕೆ ಹಾಕಿದ್ದಾರೆ. ವಾಸ್ತವವಾಗಿ ಇಡೀ ದೇಶವೇ ಅಮೆರಿಕದ ಈ ದರೋಡೆಕೋರ ಕೃತ್ಯದ ವಿರುದ್ಧ ಎದ್ದು ನಿಂತಿದೆ. ಸೋವಿಯತ್ ಒಕ್ಕೂಟ ಇಲ್ಲದಿರುವುದು ವಿಶ್ವ ಪ್ರಾಬಲ್ಯ ಹೊಂದುವ ಸಾಮ್ರಾಜ್ಯಶಾಹಿಯ ಬಯಕೆಯನ್ನು ಹುರಿದುಂಬಿಸಿತ್ತಾದರೂ, ಈ ಪ್ರಾಬಲ್ಯವು ಕೇವಲ ಒಂದು ಕನಸಾಗಿಯೇ ಉಳಿಯುತ್ತದೆ.

ಇದನ್ನೂ ನೋಡಿ : “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media

 

Donate Janashakthi Media

Leave a Reply

Your email address will not be published. Required fields are marked *