ಪಾಟ್ನಾ: ಬಿಹಾರದಲ್ಲಿ ಎದ್ದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಅಂತ್ಯಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಯು ನಾಯಕ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿಯಾದ ನಿತೀಶ್ ಕುಮಾರ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಇಂದು(ಆಗಸ್ಟ್ 09) ಬೆಳಿಗ್ಗೆ ಪಕ್ಷದ ಎಲ್ಲಾ ಸಂಸದರು ಹಾಗೂ ಶಾಸಕರೊಂದಿಗೆ ಅತ್ಯಂತ ಮಹತ್ವದ ಸಭೆಯನ್ನು ನಡೆಸಿದ ಬಳಿಕ ನಿತೀಶ್ ಕುಮಾರ್ ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು.
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ಎನ್‌ಡಿಎ ತೊರೆಯುವ ನಿರ್ಧಾರಕ್ಕೆ ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದು ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದರಿಂದ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಿದೆ. ಇದೇ ವೇಳೆ ತಮಗೆ 160 ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ನೀಡಿದ್ದಾರೆ.
ಇದರಿಂದ ಎನ್‌ಡಿಎ ಮೈತ್ರಿಕೂಟ ಮುರಿದು ಬಿದ್ದಿದೆ. ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಸಭೆಯು ರಾಬ್ಡಿ ದೇವಿ ಅವರ ನಿವಾಸದಲ್ಲಿ ನಡೆಯಿತು. ಇದರಲ್ಲಿ ಎಲ್ಲಾ ಶಾಸಕರು ನಿತೀಶ್ ಕುಮಾರ್‌ಗೆ ಬೆಂಬಲ ಪತ್ರಕ್ಕೆ ಸಹಿ ಹಾಕಿದರು.
ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಬಳಿಕ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಮನೆಗೆ ತೆರಳಿದರು. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ಡಿ ದೇವಿ ಅವರನ್ನು ಭೇಟಿ ಮಾಡಿದರು.
2015ರಲ್ಲಿಯೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ಬಳಿಕ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈ ಜೋಡಿಸಿ ‘ಮಹಾಘಟಬಂಧನ್’ ರಚಿಸಿ 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಉಪಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. ಆದರೆ, 2017ರಲ್ಲಿ ಮಹಾಘಟಬಂಧನ್ ಸರ್ಕಾರ ಪತನವಾಗಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ ಜೆಡಿಯು ಮೈತ್ರಿ ಸರ್ಕಾರ ರಚಿಸಿತು.
ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದರು. ಹೀಗಾಗಿ, ಮತ್ತೆ ಜೆಡಿಯು ಆರ್‌ಜೆಡಿ ಜೊತೆ ಕೈಜೋಡಿಸಿ ಮಹಾಘಟಬಂಧನ್ ಸರ್ಕಾರ ರಚಿಸುವ ಸಾಧ್ಯತೆಯಿದೆ.