ಆಳಂದ: 144ನೇ ಕಲಂ ನಿಷೇಧಾಜ್ಞೆ ನಡುವೆಯೂ ಶಿವರಾತ್ರಿ ದಿನದಂದು ಪಟ್ಟಣದಲ್ಲಿ ರಾಘವಚೈತನ್ಯ ಲಿಂಗದ ಶುದ್ಧೀಕರಣ, ಪೂಜೆ ನೆಪದಲ್ಲಿ ಗಲಭೆಗೆ ಕಾರಣರಾದ ಬಿಜೆಪಿ ಶಾಸಕರು, ಸಚಿವರು ಮತ್ತು ಬೆಂಬಲಿಗರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣ ಹೊರವಲಯದ ತಾಲೂಕು ಆಡಳಿತ ಕಾರ್ಯಸೌಧದ ಎದುರು ಸಿಪಿಐ(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀನಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ಆಳಂದ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕೆಲವರು ಇದಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆಪಾದಿಸಿದರು.
ಜನರ ಕೈಗೆ ಕೆಲಸವಿಲ್ಲವಾಗಿದೆ. ನಿರುದ್ಯೋಗ ಹೆಚ್ಚುತ್ತಿದೆ. ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಜನತೆಯು ಆರ್ಥಿಕ ಸಂಕಷ್ಟದಲ್ಲಿದ್ದರೂ ಜನರ ಭಾವನೆ ಕೆರಳಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ 167 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಅಮಾಯಕರು, ವಿದ್ಯಾರ್ಥಿಗಳು, ಮಹಿಳೆಯರು ಇದ್ದಾರೆ. ಹೀಗೆ ಒಂದೇ ಸಮುದಾಯ ಗುರಿಯಾಗಿಸಿಕೊಂಡು ಬಂಧಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಿಪಿಐ(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀನಕರ್, ಜಿಲ್ಲಾ ಮುಖಂಡ ಸುಧಾಮ ಧನ್ನಿ, ಪ್ರಕಾಶ ಜಾನಿ, ಭಾಗಣ್ಣಾ ದೇವನೂರ, ರೂಪಾ ಇಕ್ಕಳಕಿ, ಫಯಾಜ್ ಪಟೇಲ್, ಮಲ್ಲಮ್ಮಾ ಜಿಡಗಾ, ಅಶ್ವಿನಿ ಮಠಪತಿ, ಸರಸ್ವತಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಪ್ರತಿಭಟನೆ ನಂತರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರಗೆ ಮನವಿ ಸಲ್ಲಿಸಲಾಯಿತು.