ನಿರ್ಮಾಣ ಸಾಮಗ್ರಿ ಬೆಲೆ ಏರಿಕೆ ವಿರುದ್ಧ-ಕಾನೂನುಗಳ ಉಳಿವಿಗಾಗಿ ರಾಜ್ಯದ್ಯಾಂತ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಕಬ್ಬಿಣ, ಎಲೆಕ್ಟ್ರಿಕಲ್, ಪ್ಲಂಬಿಂಗ್, ಟೈಲ್ಸ್, ಮಾರ್ಬಲ್ ಬೆಲೆಗಳು ಮೂರು ಪಟ್ಟು ಹೆಚ್ಚಾಗಿದ್ದು, ಇದರಿಂದ ನಿರ್ಮಾಣ ವಲಯ ಕುಸಿತ ಕಂಡು ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಆರೋಪಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ಆನೇಕಲ್, ಗುಲ್ಬರ್ಗ, ಬೀದರ್, ಹೊಸಪೇಟೆ, ಹರಪನಹಳ್ಳಿ, ಜೋಯಿಡಾ, ಮಂಗಳೂರು, ಗಜೇಂದ್ರಗಡ, ಮೈಸೂರು, ಕುಂದಾಪುರ, ಸಂಡೂರು, ಪಿರಿಯಾಪಟ್ಟಣ, ತುಮಕೂರು, ಎಡ್ರಾಮಿ, ಹುಮ್ನಾಬಾದ್, ದೇವದುರ್ಗದಲ್ಲಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಯಲ್ಲಿ ‘ಕಟ್ಟಡ ಸಾಮಗ್ರಿಗಳ ಮೇಲೆ ಜಿಎಸ್‌ಟಿಯನ್ನು ಹೆಚ್ಚಿಸಿದ್ದರಿಂದ ಬೆಲೆಗಳು ತೀವ್ರಗತಿಯಲ್ಲಿ ಏರಿಕೆಯಾಗಿದ್ದು,  ಇದು ನಿರ್ಮಾಣ ವಲಯದ ಮೇಲೆ ದುಷ್ಪರಿಣಾಮ ಬೀರಿದೆ. ಉದ್ಯೋಗಗಳು ಕಡಿತಗೊಂಡು ನಗರಗಳಿಂದ ಹಳ್ಳಿಗಳ ಕಡೆ ಮರು ವಲಸೆ ಶುರುವಾಗಿದೆ’ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಬಹುಮಹಡಿ ಕಟ್ಟಡಗಳ ಸಮುಚ್ಛಯ ಹಾಗು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ವೆಚ್ಚ ವಿಪರೀತ ಏರಿಕೆಯಾಗಿದ್ದು, ಬಿಲ್ಡರ್ ಮತ್ತು ಗ್ರಾಹಕರ ನಡುವೆ ವ್ಯಾಜ್ಯೆಗಳು ಹೆಚ್ಚುತ್ತಿವೆ. ಬಿಲ್ಡರ್‌ಗಳು ಕಳಪೆ ಗುಣಮಟ್ಟದ ನಿರ್ಮಾಣಕ್ಕೆ ತೊಡಗುತ್ತಿದ್ದಾರೆ. ಇದು ಅಂತಿಮವಾಗಿ ಗ್ರಾಹಕರು ಹಾಗು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕ ಕಾಯ್ದೆಗಳನ್ನು ಸಂಹಿತೆಗಳನ್ನಾಗಿ ತಿದ್ದುಪಡಿ ಮಾಡಿರುವುದರಿಂದ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ರಚಿಸಲಾದ ಕಟ್ಟಡ ಕಾರ್ಮಿಕರ ಕಾಯ್ದೆ – 1996 ಹಾಗು ಸೆಸ್ ಕಾಯ್ದೆಗಳು ರದ್ದಾಗಿವೆ. ಮೋದಿ ಸರ್ಕಾರ ಬಡ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡಿದೆ’ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಆರೋಪಿಸಿದರು.

ರಾಜ್ಯದ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ 10 ಸಾವಿರ ಕೋಟಿ ರೂಪಾಯಿಗಳನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಖರ್ಚು ಮಾಡುವ ಬದಲು ಮಂತ್ರಿ ಹಾಗು ಅಧಿಕಾರಿಗಳು ಸೇರಿ ಲೂಟಿ ಮಾಡುತ್ತಿದ್ದಾರೆ. ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟರ್ ಕಿಟ್ ಇತರೆ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದ್ದರೂ ಅವರು ಕ್ರಮಕೈಗೊಳ್ಳದೇ ಭ್ರಷ್ಟರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕೆ. ಮಹಾಂತೇಶ್ ಆರೋಪಿಸಿದರು.

ಬಿಎಂಟಿಸಿ ಬಸ್‌ಪಾಸ್ ವಿತರಣೆ ನಿಲ್ಲಿಸಲಾಗಿದೆ, ಶೈಕ್ಷಣಿಕ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸುವುದನ್ನು ವಿಳಂಬ ಮಾಡಲಾಗುತ್ತಿದೆ, ಇತರೆ ಕಲ್ಯಾಣ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬ ಮಾಡಲಾಗುತ್ತಿದ್ದು, ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಈ ಬಗ್ಗೆ ಗಮನ ನೀಡದ ಅಧಿಕಾರಿಗಳು ಕಚೇರಿಯನ್ನು ಕಾರ್ಪೊರೇಟ್ ಮಾದರಿಯಲ್ಲಿ ನವೀಕರಣ ಮಾಡಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಲಿಂಗರಾಜು ಆರೋಪಿಸಿದರು.

ರಾಜ್ಯಾದ್ಯಂತ ನಾಳೆಯು ಪ್ರತಿಭಟನೆ ನಡೆಯಲಿದ್ದು, ಡೈರಿ ವೃತ್ತದಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ಲಿಂಗರಾಜು ಹೇಳಿದರು.

ಪ್ರಮುಖ ಬೇಡಿಕೆಗಳು

೧. ಕೃಷಿ ಕ್ಷೇತ್ರದ ಬಳಿಕ ಅತಿ ಹೆಚ್ಚು ಉದ್ಯೋಗ ಕಲ್ಪಿಸುವ ಕಟ್ಟಡ ನಿರ್ಮಾಣ ಉದ್ಯಮವನ್ನು ರಕ್ಷಿಸಬೇಕು.

೨. ಕಟ್ಟಡ ಮತ್ತು ತರೆ ನಿರ್ಮಾಣ ಕಾರ್ಮಿಕ ಕಾನೂನು ೧೯೯೬ ಹಾಗೂ ಸೆಸ್‌ ಕಾನೂನು ೧೯೯೬ರ ಕಾನೂನು ಪುನರ್‌ ಸ್ಥಾಪಿಸಬೇಕು.

೩. ದೇಶದ್ಯಾಂತ ಕಾನೂನುಬದ್ಧವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಸಿ ಬಲಪಡಿಸಬೇಕು.

೪. ನಿರಂತರವಾಗಿ ಏರಿಕೆಯಾಗುತ್ತಿರುವ ಸಿಮೆಂಟ್‌, ಕಬ್ಬಿಣ, ಮೊದಲಾದ ಕಟ್ಟಡ ಸಾಮಾಗ್ರಿಗಳ ಬೆಲೆಗಳ ನಿಯಂತ್ರಣ ಮಾಡಬೇಕು ಹಾಗೂ ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಸಲಾಗುತ್ತಿರುವ ಜಿ.ಎಸ್‌.ಟಿ. ಕಡಿತಗೊಳಿಸಬೇಕು.

೫. ಆಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು ೧೯೭೯ ಅನ್ನು ಪರಿಣಾಮಕಾರಿ ಜಾರಿ ಮಾಡಬೇಕು.

ಎಂಬ ಪ್ರಮುಖ ಬೇಡಿಕೆಗಳ ಆಧಾರದಲ್ಲಿ ಪ್ರತಿಭಟನೆ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷೆ ಕೆ.ಎಸ್.ಲಕ್ಷ್ಮೀ, ಉತ್ತರ ಜಿಲ್ಲಾ ಕಾರ್ಯದರ್ಶಿ ಕೆ.ಹರೀಶ್, ಹನುಮಂತರಾವ್ ಹವಾಲ್ದಾರ್, ಕೆ ಆರ್ ಪುರಂ ರಮೇಶ್, ರವಿಚಂದ್ರನ್, ಕೆ ಎಸ್ ವಿಮಲಾ ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *