ಕೊಪ್ಪಳ: ಪ್ರತಿದಿನವೂ ಸಮಯಕ್ಕೆ ಸರಿಯಾಗಿ ನಿಗದಿಯಂತೆ ಬಸ್ಸು ಬರುತ್ತಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿಗಳೇ ಬಸ್ಸನ್ನು ತಡೆದು ನಿಲ್ಲಿಸಿ, ರಸ್ತೆಯಲ್ಲೇ ಕುಳಿತು ಓದುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಕ್ರಾಸ್ ಬಳಿ ಪ್ರತಿಭಟನೆ ನಡೆದಿದೆ. ಕೊನಾಪೂರ ಹಾಗೂ ಪರಮನಟ್ಟಿ ಗ್ರಾಮಗಳಿಗೆ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡಬೇಕೆಮದು ಒತ್ತಾಯಿಸಿದ ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ರಸ್ತೆ ಮಧ್ಯೆದಲ್ಲಿಯೇ ಬೀಡು ಬಿಟ್ಟ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಅಲ್ಲದೆ, ಕೊನಾಪೂರು ಗ್ರಾಮಕ್ಕೆ ಬಸ್ಸು ಬಿಡುವರೆಗೂ ರಸ್ತೆಯಲ್ಲಿಯೇ ಕುಳಿತಿರುವುದಾಗಿ ಎಚ್ಚರಿಸಿದರು.
ವಿದ್ಯಾರ್ಥಿಯೊಬ್ಬಳು ಮಾತನಾಡಿ, ಈ ಮಾರ್ಗ ಮಧ್ಯೆ ಸಾಕಷ್ಟು ಮರಗಳ ಕೊಂಬೆಗಳಿವೆ, ಅದರಿಂದ ಬಸ್ಸಿನ ಗಾಜು ಒಡೆಯುವ ಸಾಧ್ಯತೆ ಇದೆ ಹಾಗಾಗಿ ನಾವು ಬರಲ್ಲ ಎಂದು ಬಸ್ಸು ಚಾಲಕ ನಿರ್ವಾಹಕರು ಹೇಳುತ್ತಾರೆ. ಪ್ರತಿ ಭಾರಿಯೂ ಸಂಬಂಧಪಟ್ಟವರಿಗೆಲ್ಲ ಸಮಸ್ಯೆ ಬಗೆಹರಿಸಲು ವಿನಂತಿಕೊಳ್ಳಲಾಗಿದೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಗೆ ಪ್ರತಿದಿನ 3 ಕಿ.ಮೀ. ನಡೆದುಕೊಂಡು ಹೋಗಬೇಕು, ಇದರಿಂದಾಗಿ ತಡವಾಗುತ್ತದೆ. ಶಾಲೆಗೆ ಸರಿಯಾದ ಸಮಯಕ್ಕೆ ತಲುಪಲಾಗುತ್ತಿಲ್ಲ. ಶಿಕ್ಷಕರು ಪ್ರತಿನಿತ್ಯ ನಮ್ಮನ್ನ ಬೈಯುತ್ತಾರೆ. ಹಾಗಾಗಿ ಈ ಸಲ ಎರಡು ಹೊತ್ತು ಬಸ್ ಬಿಡುವವರೆಗೂ ನಾವು ಪ್ರತಿಭಟಿಸುತ್ತೇವೆ ಎಂದು ವಿದ್ಯಾರ್ಥಿನಿ ಹೇಳಿದಳು.
ಇಲ್ಲಿನ ಹಲವು ಗ್ರಾಮಗಳಿಗೆ ವರ್ಷಗಳು ಉರುಳಿದರೂ ಬಸ್ಸು ಸೌಲಭ್ಯವೇವಿಲ್ಲದೆ, ವಿದ್ಯಾರ್ಥಿಗಳು ಪ್ರತಿದಿನ 3 ಕಿ.ಮೀ. ನಡೆದು ಶಾಲೆಗೆ ತೆರಳತ್ತಿದ್ದಾರೆ. ಇದನ್ನು ತಪ್ಪಿಸುವಂತೆ ವಿದ್ಯಾರ್ಥಿಗಳು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಗ್ರಾಮಕ್ಕೆ ಬಸ್ ಸಂಚರಿಸಲು ಒತ್ತಾಯಿಸಿ ಕಳೆದ ವರ್ಷವೂ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು.
ತಳವಗೇರಾ ಆದರ್ಶ ವಿದ್ಯಾಲಯ ಬಸ್ಸು ವ್ಯವಸ್ಥೆಗಾಗಿ ಮನವಿ
ಶಾಸಕ ಅಮರೇಗೌಡ ಬಯ್ಯಾಪೂರ ಇಂದು ವಿವಿಧ ವಾರ್ಡಗಳಿಗೆ ಭೇಟಿ ಸಂದರ್ಭದಲ್ಲಿ 4 ಕೋಟಿ ರೂ. ಅಂದಾಜು ವೆಚ್ಚದ ಬಸ್ ನಿಲ್ದಾಣ ನವೀಕೃತ ಕಾಮಗಾರಿ ಪರಿಶೀಸುತ್ತಿದ್ದರು. ಇದೇ ವೇಳೆ ತಳವಗೇರಾ ಆದರ್ಶ ವಿದ್ಯಾಲಯಕ್ಕೆ ಹೋಗಲು ಬಸ್ ನಿರೀಕ್ಷೆಯಲ್ಲಿದ್ದ ಮಕ್ಕಳು ಶಾಸಕರನ್ನು ಭೇಟಿಯಾಗಿ ತಳವಗೇರಾಕ್ಕೆ ನಿತ್ಯ ಬಸ್ಸುಗಳ ಸಮಸ್ಯೆ ಎದುರಿಸುತ್ತಿರುವುದನ್ನು ಪ್ರಸ್ತಾಪಿಸಿದರು.
ಪ್ರತಿ ದಿನ ಕುಷ್ಟಗಿಯಿಂದ ಹನುಮಸಾಗರ ಮಾರ್ಗವಾಗಿ ಸಂಚರಿಸುವ ಬದಾಮಿ ಬಸ್ಸಿನ ಸೇವೆ ರದ್ದುಗೊಳಿಸಿದೆ. ಶನಿವಾರದಂದು 12-30ಕ್ಕೆ ಶಾಲೆ ಮುಗಿಯಲಿದೆ. ಆದರೆ, ಆ ವೇಳೆಗೆ ಬಸ್ಸು ಇರುವುದಿಲ್ಲ. 3 ಗಂಟೆಯವರೆಗೂ ಹನುಮಸಾಗರದಿಂದ ಬರುವ ಬಸ್ಸುಗಳಿಗೆ ಕಾಯಬೇಕು. ಈ ಒಂದು ಬಸ್ಸಿನಲ್ಲಿ ಎರಡರಷ್ಟು ವಿದ್ಯಾರ್ಥಿಗಳನ್ನು ತುಂಬಿಕೊಂಡು ಬರುತ್ತಿದ್ದು, ತಳವಗೇರಾ ದಿಂದ ಕುಷ್ಟಗಿ ವರೆಗೆ 15 ನಿಮಿಷದ ಪ್ರಯಾಣ ಹಿಂಸೆಯಾಗಿದೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಶಾಸಕ ಬಯ್ಯಾಪೂರ ಅವರು ವಿದ್ಯಾರ್ಥಿಗಳ ಮನವಿಯಂತೆ, ಘಟಕ ಬಸ್ಸು ವ್ಯವಸ್ಥಾಪಕ ಜಡೇಶ್ ಅವರಿಗೆ ಬಸ್ಸುಗಳ ಕೊರತೆಯ ಬಗ್ಗೆ ಪ್ರಶ್ನಿಸಿದರು. ಘಟಕ ವ್ಯವಸ್ಥಾಪಕರು ಬಸ್ಸುಗಳಿವೆ, ಆದರೆ ಸಿಬ್ಬಂದಿ ಕೊರತೆಯಾಗಿದೆ ಎಂದಾಗ ಕೂಡಲೇ ಸಿಬ್ಬಂದಿ ಕೊರತೆಯಾಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಅಗತ್ಯ ಇರುವ ಹುದ್ದೆಗಳ ಬಗ್ಗೆ ಪತ್ರ ಬರೆಯಿರಿ. ಅದರ ಪ್ರತಿ ನಮಗೆ ನೀಡಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸುವೆ ಎಂದರು. ತಳವಗೇರಾ ಆದರ್ಶ ವಿದ್ಯಾಲಯಕ್ಕೆ ಖುದ್ದು ಭೇಟಿ ನೀಡಿ ಯಾವ ಸಮಯಕ್ಕೆ ಬಸ್ ಅಗತ್ಯತೆ ತಿಳಿದುಕೊಂಡು ಹೆಚ್ಚುವರಿ ಬಸ್ ಸೇವೆ ಕಲ್ಪಿಸಲು ಸೂಚಿಸಿದರು.