ರಾಮನಗರ: ನಿಧಿ ಆಸೆಗಾಗಿ ಯಾದಗಿರಿ ಮೂಲದ ಕೂಲಿ ಕಾರ್ಮಿಕ ಮಹಿಳೆಯ ಬೆತ್ತಲೆ ಪೂಜೆ ನಡೆಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಪುರ ತಾಲ್ಲೂಕಿನ ಭೂಹಳ್ಳಿಯ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ತಮಿಳುನಾಡು ಮೂಲದ ಪಾರ್ಥಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮಿನರಸಪ್ಪ ಬಂಧಿತರು. ಪೂಜೆ ನೆಪದಲ್ಲಿ ಬಲಿಯಾಗುತ್ತಿದ್ದ ಯಾದಗಿರಿ ಮೂಲದ ಕೂಲಿ ಕಾರ್ವಿುಕ ಮಹಿಳೆಯನ್ನು ರಕ್ಷಿಸಲಾಗಿದೆ.
ಕನಕಪುರ ತಾಲೂಕು ಭೂಹಳ್ಳಿಯ ಶ್ರೀನಿವಾಸ್ಗೆ ‘ನಿನ್ನ ಮನೆಯಲ್ಲಿ ನಿಧಿ ಇದೆ, ಅದನ್ನು ಹೊರತೆಗೆಯಬೇಕು’ ಎಂದು ಬಂಧಿತರು ಪುಸಲಾಯಿಸಿದ್ದಾರೆ. ನಿಧಿ ಆಸೆಗಾಗಿ ಆರೋಪಿಗಳ ಜತೆ ಸೇರಿದ ಈತ, ಆಗಾಗ ರಾತ್ರೋರಾತ್ರಿ ಪೂಜೆಗಳನ್ನು ಮಾಡಿಸಿದ್ದಾರೆ. ನ.2ರಂದು ಸಹ ಪೂಜೆ ನಡೆಸಿದ್ದರು. ಮಂಗಳವಾರ ಕೂಡ ಇದೇ ಮನೆಯೊಳಗೆ ಪೂಜೆ ಸಲ್ಲಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ : ಸ್ವಾಮೀಜಿ ಹುಟ್ಟುಹಬ್ಬ : ಸಿಎಂ ಆಗಮನಕ್ಕಾಗಿ ನೆಟ್ಟಿದ್ದ ಗಿಡಗಳೇ ನಾಶ!
ಮನೆ ಮಾಲೀಕ ಶ್ರೀನಿವಾಸ್ ತನ್ನೂರಿನಲ್ಲಿ ಏಳಿಗೆ ಕಂಡಿರಲಿಲ್ಲ. ಜಮೀನು ಕೈತಪ್ಪಿತ್ತು. ಹೀಗಾಗಿ ಊರು ಬಿಟ್ಟು ಹೆಂಡತಿ ತವರೂರಾದ ಬನ್ನೂರಿನಲ್ಲಿ ವಾಸವಾಗಿದ್ದ. 6 ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸಂಬಂಧಿಯೊಬ್ಬರ ಸಾವಿಗೆ ಹೋಗಿದ್ದಾಗ ಮೇಸ್ತ್ರಿ ಪಾರ್ಥಸಾರಥಿ ಪರಿಚಯವಾಗಿತ್ತು. ಮನೆಯಲ್ಲಿ ನಿಧಿ ಇದ್ದರೆ, ಹೀಗೆಲ್ಲ ಆಗುತ್ತದೆ. ನಮ್ಮ ಕಡೆ ಪೂಜಾರಿಯೊಬ್ಬರು ಇದ್ದಾರೆ. ಅವರ ಬಳಿ ಮಾತನಾಡುತ್ತೇನೆಂದು ಶಶಿಕುಮಾರ್ ಎಂಬುವವರನ್ನು ಪರಿಚಯಿಸಿದ್ದ. ನಿಧಿ ಆಸೆಗಾಗಿ ಈಗಾಗಲೆ ಮನೆಯ ಒಂದು ಕೋಣೆಯಲ್ಲಿ ಭೂಮಿ ಅಗೆಯಲಾಗಿದೆ.
ಬೆತ್ತಲೆ ಪೂಜೆ ಮಾಡಿದರೆ ನಿಧಿ ತಾನಾಗೇ ಮೇಲೆ ಬರುತ್ತದೆ ಎಂದು ನಂಬಿಸಿದ್ದ ಪೂಜಾರಿ ಶಿಶಿಕುಮಾರ್, ಪೂಜೆಗೆ ಸಿದ್ಧ ವಾಗುವಂತೆ ಶ್ರೀನಿವಾಸ್ ಪತ್ನಿಗೂ ಹೇಳಿದ್ದ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಅಂತಿಮವಾಗಿ ಪಾರ್ಥಸಾರಥಿ ಬಳಿ ಕೂಲಿ ಮಾಡಿ ಕೊಂಡಿದ್ದ ಮಹಿಳೆಗೆ 50 ಸಾವಿರ ರೂ. ಆಮಿಷ ತೋರಿಸಿ ಕರೆ ತಂದಿದ್ದರು. ಈಕೆಯೊಂದಿಗೆ 4 ವರ್ಷದ ಹೆಣ್ಣು ಮಗು ಇತ್ತು. ಅಷ್ಟರೊಳಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆ ಮಾಲೀಕನ ವಿರುದ್ಧ ವಂಚನೆ, ಮೌಢ್ಯ ನಿಷೇಧ ಕಾಯ್ದೆ ಉಲ್ಲಂಘನೆ, ಮಹಿಳೆ ಮೇಲಿನ ದೌರ್ಜನ್ಯ ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.