ನಿಡಶೇಸಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಎಸ್ಎಫ್ಐ ನಿಯೋಗ

ಕುಷ್ಠಗಿ: ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಊಟವನ್ನು ಮಾಡಿದ ಕೆಲವು ವಿದ್ಯಾರ್ಥಿಗಳು ಆರೋಗ್ಯದಲ್ಲಿ ಏರುಪೇರಾಗಿ ಘಟನೆಯು ಇತ್ತೀಚಿಗೆ ನಡೆದಿತ್ತು. ಅಲ್ಲದೆ, ಬಹುತೇಕ ವಿದ್ಯಾರ್ಥಿಗಳು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಅವರ ನೇತೃತ್ವದ ನಿಯೋಗವು ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕುಂದುಕೊರತೆಗಳ ಕುರಿತು ಸುಧೀರ್ಘವಾಗಿ ಚರ್ಚೆ ಮಾಡಿದರು.

ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ ಮಾತನಾಡಿ ಈ ವಸತಿ ಶಾಲೆಯು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡಬೇಕಾದ ಊಟದ ತಟ್ಟೆ, ಲೋಟ, ಬೆಡ್ಡು, ಹಾಸಿಗೆ, ಹೊದಿಕೆ, ಜಮಖಾನ, ನೋಟ್ ಬುಕ್, ಬಟ್ಟೆ, ಹಾಗೂ ಸಮವಸ್ತ್ರ, ಸೊಳ್ಳೆ ಪರದೆ ಯಾವುದನ್ನು ವಿದ್ಯಾರ್ಥಿಗಳಿಗೆ ಕೊಟ್ಟಿರುವುದಿಲ್ಲ. ವಿದ್ಯಾರ್ಥಿಗಳಿಗೆ  ಪಾಲಕರೇ ಇವೆಲ್ಲ ವಸ್ತುಗಳನ್ನು ಕೊಡಿಸಬೇಕಾಗಿ ಬಂದಿದೆ. ಟ್ರಂಕು, ಹಾಸಿಗೆ, ಹೊದಿಕೆ, ಪ್ಲೇಟು, ಲೋಟಗಳನ್ನು ವಿದ್ಯಾರ್ಥಿಗಳು ಮನೆಯಿಂದ ತಂದಿರುತ್ತಾರೆ. ವಸತಿ ನಿಲಯದ ಸುತ್ತಲು ಸ್ವಚ್ಛತೆ ಎಂಬುದೇ ಇಲ್ಲವಾಗಿದೆ. ಇದರಿಂದಾಗಿ ಒಳಗಡೆ ಹಾವು, ಚೇಳು ಆಗಾಗ ಕಾಣಿಸಿಕೊಳ್ಳುತ್ತೀವೆ ಎಂದು ಆರೋಪಿಸಿದರು.

ಸರಕಾರ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಆಂಗ್ಲಮಾಧ್ಯಮಗಳನ್ನು ಪ್ರಾರಂಭ ಮಾಡಿ ಬಡ, ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಶ್ರಮಿಸುತ್ತದೆ. ಆದರೆ, ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಆಹಾರ ಪೂರೈಕೆದಾರರ ಹಣದ ದಾಹಕ್ಕಾಗಿ ಇಂದು ವಿದ್ಯಾರ್ಥಿಗಳು ಕಳಪೆ ಮಟ್ಟದ ಆಹಾರ ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಈ ವಸತಿ ಶಾಲೆಯು ಸುದ್ದಿಯಲ್ಲಿದ್ದರು ಸಹ ರಾಜ್ಯ ಮಟ್ಟದ ಅಧಿಕಾರಿಗಳು ಬಂದು ಹೋಗಿದ್ದಾರೆ. ಮೂಲಭೂತ ಸೌಲಭ್ಯದಿಂದ ಸಂಪೂರ್ಣವಾಗಿ ವಂಚಿತವಾಗಿರುವುದನ್ನು ನೋಡಿದರೆ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತದೆ.

ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ವಸತಿ ನಿಲಯಗಳ ವಿಷಯದಲ್ಲಿ ಗಮನಹರಿಸಬೇಕೆಂದು ಎಸ್‌ಎಫ್‌ಐ ಸಂಘಟನೆ ಆಗ್ರಹಿಸಿದೆ. ಉನ್ನತ ಅಧಿಕಾರಿಗಳಲ್ಲಿ ಮನವಿ ಮಾಡಿರುವ ಸಂಘಟನೆಯು ನಿಡಶೇಸಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಭೇಟಿ ಮಾಡಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಂಡು ಶಾಲೆ ಮತ್ತು ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯ ಕೊಡಬೇಕೆಂದು ಒತ್ತಾಯ ಮಾಡಿದೆ.

ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಎಂ, ಕುಷ್ಟಗಿ ತಾಲೂಕ ಹನುಮಂತ ಹುಲಿಯಾಪುರ ಇತರರು ನಿಯೋಗದಲ್ಲಿ ಇದ್ದರು.

Donate Janashakthi Media

Leave a Reply

Your email address will not be published. Required fields are marked *