ಚೆನ್ನೈ: ಕೊಯಮತ್ತೂರಿನಲ್ಲಿ ಇತ್ತೀಚಿಗೆ ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಚೆನ್ನೈ ಸೇರಿದಂತೆ ರಾಜ್ಯದ 45ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಕೈಗೊಂಡಿದೆ.
ಸ್ಫೋಟಕ್ಕೆ ಸಂಬಂಧಿಸಿದ ಬಂಧಿಸಲಾಗಿರುವವರು ಮತ್ತು ಶಂಕಿತರು ಮತ್ತು ಬೆಂಬಲಿಗರ ಆಸ್ತಿಗಳನ್ನು ಎನ್‍ಐಎ ಪರಿಶೀಲನೆ ನಡೆಸುತ್ತಿದೆ. ಮೂಲಗಳ ಪ್ರಕಾರ, ಕೊಯಮತ್ತೂರಿನಲ್ಲಿ 20, ಚೆನ್ನೈಯಲ್ಲಿ 12ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ಚೆನ್ನೈನ ಪುದುಪೇಟ್, ಮನ್ನಾಡಿ, ಜಮಾಲಿಯಾ ಮತ್ತು ಪೆರಂಬೂರ್, ಕೊಯಮತ್ತೂರಿನ ಕೊಟ್ಟೈಮೇಡು, ಉಕ್ಕಡಂ, ಪೊನ್ವಿಜ ನಗರ ಮತ್ತು ರಥಿನಪುರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಅಕ್ಬೋಬರ್ 23ರಂದು ದೀಪಾವಳಿ ಹಬ್ಬದ ಸಮಯದಲ್ಲಿ ಅಂದು ಮುಂಜಾನೆ 4.20ರ ಸುಮಾರಿಗೆ ತಮಿಳುನಾಡಿನ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗ ಸಿಲಿಂಡರ್ ಅಳವಡಿಸಿದ್ದ ಮಾರುತಿ 800 ಕಾರೊಂದು ಸ್ಫೋಟಗೊಂಡಿತು. ಈ ವೇಳೆ 29 ವರ್ಷದ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟನು.
ಪೊಲೀಸರು ಬಂಧಿಸಿದ ಆರೋಪಿಗಳು; ಮೊಹಮ್ಮದ್ ಥಲ್ಕಾ (25), ಮೊಹಮ್ಮದ್ ಅಸರುದ್ದೀನ್ (25), ಮುಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27), ಮೊಹಮ್ಮದ್ ನವಾಜ್ ಇಸ್ಮಾಯಿಲ್ (27) ಮತ್ತು ಮೃತನ ಸಂಬಂಧಿ ಅಫ್ಸರ್ ಖಾನ್.
ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಇದುವರೆಗೆ 6ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇಂಜಿನಿಯರಿಂಗ್ ಪದವೀಧರನಾಗಿದ್ದ ಮುಬಿನ್ ಈ ಹಿಂದೆ 2019 ರಲ್ಲಿ ಭಯೋತ್ಪಾದಕ ಪ್ರಕರಣದಡಿ ವಿಚಾರಣೆಗೆ ಒಳಪಟ್ಟಿದ್ದನು. ಈತನನ್ನು ಪ್ರಾಥಮಿಕ ಆರೋಪಿ ಎಂದು ಉಲ್ಲೇಖಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಮುಬೀನ್ ನಂಟು ಹಾಗೂ ಭಯೋತ್ಪಾದನಾ ಕೃತ್ಯದ ಸಂಚು ಕುರಿತಾಗಿ ತನಿಖೆ ನಡೆಸಲಾಗುತ್ತಿದೆ. ತಮಿಳುನಾಡು ಸರ್ಕಾರದ ಶಿಫಾರಸ್ಸಿನಂತೆ ಅಕ್ಟೋಬರ್ 27ರಂದು ಪ್ರಕರಣವನ್ನು ಕೇಂದ್ರ ಸರ್ಕಾರವು ಎನ್‌ಐಎಗೆ ವರ್ಗಾಯಿಸಿತ್ತು.