ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ ಖಾತೆಯ ಹಠಾತ್ ಸ್ಥಗಿತ : ಇನ್ನೊಂದು “ಅನ್ಯಾಯದ ಮತ್ತು ಕ್ರೂರವಾದ  ಕ್ರಮ”- ನ್ಯೂಸ್‍ ಕ್ಲಿಕ್‍

ಡಿಸೆಂಬರ್ 18 ರ ಸಂಜೆಯ ವೇಳೆಗೆ ಆದಾಯ ತೆರಿಗೆ ಇಲಾಖೆ  ತಮ್ಮ ಬ್ಯಾಂಕ್‍ ಖಾತೆಯನ್ನು ಸ್ಥಗಿತಗೊಳಿಸಿರುವುದರಿಂದಾಗಿ, ತಾವು  ಯಾವುದೇ ಬ್ಯಾಂಕ್ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಂತ್ರ ಸುದ್ದಿ ಪೋರ್ಟಲ್ ‘ನ್ಯೂಸ್‍ ಕ್ಲಿಕ್’’ ಹೇಳಿಕೆಯೊಂದರಲ್ಲಿ ತಿಳಿಸಿದೆ.

“ನಮ್ಮ ಖಾತೆಗಳನ್ನು ಸ್ಥಗಿತಗೊಳಿಸಿ ಬಿಟ್ಟಿರುವ  ಈ ಕ್ರಮವು, ಫೆಬ್ರವರಿ 2021 ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿಗಳೊಂದಿಗೆ ಪ್ರಾರಂಭವಾದ ನಮ್ಮ  ಸುದ್ದಿ ಪೋರ್ಟಲ್‌ನ ಆಡಳಿತಾತ್ಮಕ-ಕಾನೂನಾತ್ಮಕ ಮುತ್ತಿಗೆಯ ಮುಂದುವರಿಕೆಯಾಗಿ ಕಂಡುಬರುತ್ತದೆ, ಅದನ್ನನುಸರಿಸಿ, ನಂತರ ಸೆಪ್ಟೆಂಬರ್ 2021 ರಲ್ಲಿ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ ಮತ್ತು ಅಕ್ಟೋಬರ್ 3, 2023 ರಂದು ದೆಹಲಿ ಪೋಲೀಸ್ ವಿಶೇಷ ಘಟಕದ ತೀವ್ರ ಕಾರ್ಯಾಚರಣೆ ನಡೆದಿದೆ. ಅಂದು ಬಂಧಿತರಾದ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಆಡಳಿತಾಧಿಕಾರಿ ಅಮಿತ್ ಚಕ್ರವರ್ತಿ ಅವರು ಈಗಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ” ಎಂದು ‘ನ್ಯೂಸ್‍ ಕ್ಲಿಕ್’’ ಹೇಳಿದೆ.

‘ನ್ಯೂಸ್‍ ಕ್ಲಿಕ್’’ ಸದಾ ತೆರಿಗೆ ನಿಯಮ-ನಿಬಂಧನೆಗಳು ಒಳಗೊಂಡಂತೆ ದೇಶದ ಎಲ್ಲಾ ಕಾನೂನುಗಳನ್ನು ಪಾಲಿಸಿಕೊಂಡು ಬಂದಿದೆ, ಆದ್ದರಿಂದ  ಆದಾಯ ತೆರಿಗೆ ಇಲಾಖೆಯ ದಾವೆಗಳಿಗೆ ಏನೂ ಆಧಾರವಿಲ್ಲ ಎಂದಿರುವ ಹೇಳಿಕೆ, ತಮ್ಮ  ಖಾತೆಗಳನ್ನು ಸ್ಥಗಿತಗೊಳಿಸುವ ಯಾವುದೇ ಸೂಚನೆ ತಮಗೆ ಬಂದಿರಲಿಲ್ಲ, ಡಿಸೆಂಬರ್‍ 18ರ ಸಂಜೆ  ದಿನನಿತ್ಯದ ಪಾವತಿಗಳನ್ನು ಮಾಡಲು ಪ್ರಯತ್ನಿಸುತ್ತಿರುವಾಗ ಸಿಬ್ಬಂದಿಗೆ ಆಕಸ್ಮಿಕವಾಗಿ ಇದು ಕಂಡು ಬಂತು ಎಂದು ತಿಳಿಸಿದೆ. ಈ ಸ್ವೇಚ್ಛಾಚಾರೀ  ಕ್ರಮದಿಂದಾಗಿ ಎಲ್ಲಾ ಉದ್ಯೋಗಿಗಳ ಅಂದರೆ,  ಪತ್ರಕರ್ತರು, ವೀಡಿಯೊಗ್ರಾಫರ್‌ಗಳು ಮತ್ತು ಆಡಳಿತ ಮತ್ತು ಸಹಾಯಕ ಸಿಬ್ಬಂದಿಯ ಸಂಬಳಗಳು  ಮತ್ತು ಸಲಹೆಗಾರರು ಮತ್ತು ಲೇಖನಗಳನ್ನು ನೀಡುವವರ ಸಂಭಾವನೆಗಳನ್ನು ಈಗಾಗಲೇ ಅವರು ಕೆಲಸ ಮಾಡಿದ ಡಿಸೆಂಬರ್‌ನ 19 ದಿನಗಳನ್ನು ಒಳಗೊಂಡಂತೆ ಪಾವತಿ ಮಾಡಲಾಗುತ್ತಿಲ್ಲ ಎಂದು ನ್ಯೂಸ್‍ಕ್ಲಿಕ್‍ ಹೇಳಿದೆ.

ಇದನ್ನೂ ಓದಿಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್‌ ಆರೋಪ

“ವರ್ಷಾಂತ್ಯದ ಹಬ್ಬದ ಸಂದರ್ಭದಲ್ಲಿ ಈ ಹಠಾತ್ ಕ್ರಮವು ನಮ್ಮ ಎಲ್ಲಾ ಉದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ನಮ್ಮ ಖಾತೆಗಳನ್ನು ಯಾವಾಗ ಬಳಸಲು ಸಾಧ್ಯವಾಗಬಹುದು ಎಂಬುದರ ಕುರಿತು ಯಾವುದೇ ಸೂಚನೆ ಇಲ್ಲದಿರುವುದರಿಂದ, ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ, ವಿಶೇಷವಾಗಿ ಸಂಬಳದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿರುವ ಕುಟುಂಬಗಳ ಮನಸ್ಸಿನಲ್ಲಿ ಅನಿಶ್ಚಿತತೆಯಿದೆ” ಎಂದಿರುವ ನ್ಯೂಸ್‍ಕ್ಲಿಕ್‍, ತಮ್ಮ ಕಾನೂನು ಸಲಹೆಗಾರರು ಬೆಳವಣಿಗೆಗಳನ್ನು ಪರಿಶೀಲಿಸುತ್ತಿದ್ದಾರೆ,  ಈ ಅನ್ಯಾಯದ ಮತ್ತು ಕ್ರೂರ ಕ್ರಮದ ವಿರುದ್ಧ ಕಾನೂನು ಮೇಲ್ಮನವಿ ಕ್ರಮಗಳನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಹೇಳಿದೆ.

“ನ್ಯೂಸ್‌ಕ್ಲಿಕ್ ಮತ್ತು ಅದರ ಧೈರ್ಯಶಾಲಿ ಪತ್ರಕರ್ತರು ಸಾಧ್ಯವಾದಷ್ಟು ಕಾಲ ತಮ್ಮ ಕೆಲಸವನ್ನು ಮುಂದುವರಿಸಲು ಬದ್ಧರಾಗಿದ್ದಾರೆ. ಎಂದಿನಂತೆ, ನಮಗೆ ಸೌಹಾರ್ದವನ್ನು ಮುಂದುವರೆಸಬೇಕೆಂದು ಮನವಿ ಮಾಡುತ್ತೇವೆ, ಇದು ನಮಗೆ ಬೆಂಬಲ ಮತ್ತು ಪ್ರೋತ್ಸಾಹದ ಮೂಲವಾಗಿದೆ” ಎಂದು  ನ್ಯೂಸ್‍ಕ್ಲಿಕ್‍ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *