ಹೊಸ ವರ್ಷದ ಹೊಸ ಕವಿತೆಗಳು

2024 ನ್ನು ಜಗತ್ತೆ ಸಂಭ್ರಮದಿಂದ ಬರಮಾಡಿಕೊಂಡಿದೆ. ಬಹಳಷ್ಟು ಜನ 2023 ನೋವಿನ ವರ್ಷವಾಗಿತ್ತು, ಹಿಂಸೆಗಳು ದೌರ್ಜನ್ಯಗಳು ನಡೆದವು, ಸರ್ಕಾರಗಳ ನೀತಿಗಳಿಂದಾಗಿ ರೈತರು, ಸಾರ್ವಜನಿಕರು ನೇಣಿಗೆ ಕೊರಳೊಡ್ಡುವ ಸ್ಥಿತಿ ಬಂತು ಎಂದೆಲ್ಲ ಕವಿತೆ, ಕಥೆ, ಲೇಖನಗಳ ಮೂಲಕ ಬರೆದುಕೊಂಡಿದ್ದಾರೆ. ಆಯ್ದ ಮೂರು ಕವಿತೆಗಳನ್ನು ನಾವಿಲ್ಲಿ ಪ್ರಕಟಿಸಿದ್ದೇವೆ. ಹೊಸ ವರ್ಷ

ಕಾಲ ಕ್ಷಮಿಸುವುದಿಲ್ಲ

ಮಸೀದಿ ಕೆಡವಿ
ಕಟ್ಟಿದ ಮಂದಿರದಲ್ಲಿ
ರಾಮನಿಲ್ಲ !
ಅಲ್ಲಿ
ದೆವ್ವ, ಭೂತಗಳು
ಕುಣಿಯುತ್ತಿವೆ.
ಗಂಟೆ,ಜಾಗಟೆ ಬಾರಿಸಿ,
ಆರತಿ ಬೆಳಗಿ,
ಮಂತ್ರ ಹೇಳಿದವರ
ಮನದಲ್ಲಿ ‌ಭಕ್ತಿಯಿಲ್ಲ.
ಜಯಘೋಷ
ಹಾಕಿದವರ ಎದೆಯಲ್ಲಿ
ದೇಶ ಭಕ್ತಿಯೂ ಇಲ್ಲ.
ಮನೆ ಮನೆಗೆ ಹಂಚಿದ
ಅಕ್ಷತೆಯ ಕಾಳಿನಲ್ಲಿ
ಅನ್ನ ಬೇಯಲಿಲ್ಲ.
ಅನ್ನವಿಲ್ಲದೆ
ಹಸಿದವರ
ಒಡಲು ತುಂಬಲಿಲ್ಲ.
ಹೃದಯಗಳ ಒಡೆದು
ದ್ವೇಷ ಹರಡಿದವರನ್ನು
ಕಾಲ ಕ್ಷಮಿಸುವುದಿಲ್ಲ.

– ಹುಲಿಕಟ್ಟಿ ಚನ್ನಬಸಪ್ಪ.


ಇದನ್ನೂ ಓದಿಮತ್ತೊಂದು ಹೊಸ ವರ್ಷ ಮತ್ತದೇ ಹಳೆಯ ಕನಸುಗಳು

 

“ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ”

ದಿನಗಳು ಓಡುತ್ತಿವೆ
ವರ್ಷಗಳು ಉರುಳುತ್ತಿವೆ
ಹೊಸ ವರ್ಷದ ಇಡೀ ಕ್ಯಾಲೆಂಡರ್ ಬದಲಾಯಿಸಿದ್ದೇನೆ, ಪುಟವನ್ನೊಂದೇ ಅಲ್ಲ… ಹೇಳಲಿಕ್ಕೇನೂ ಹೊಸತು ಕಾಣುತ್ತಿಲ್ಲ.

ಕ್ಯಾಲೆಂಡರ್ ಬದಲಾದ ಕೂಡಲೆ
ಬದುಕು ಬದಲಾದೀತೆ ಮೂರ್ಖ ಎನಬೇಡಿ.
ಅದೇ ಹಳೆಯ ಬವಣೆ, ಕಡುಕಷ್ಟ,
ಬೆಲೆ ಏರಿಕೆಯ ಬರ್ಬರತೆ
ಅದೇ ಅತ್ಯಾಚಾರ, ಹೆಣ್ಮಕ್ಕಳ ಅವಮಾನಿಸುವ ಸುದ್ದಿಗಳು, ಧರ್ಮದ ಹೆಸರಲಿ ನರಮೇಧ,
ಅದೇ ರೈತರ ಆತ್ಮಹತ್ಯೆಯ ಚಿತ್ರಣ
ಎದುರಿಗಿದ್ದೇ ಇದೆ ಎದುರಿಸುವವರಿರುವ ತನಕ.

ಕ್ಯಾಲೆಂಡರ್ ಬದಲಾದರೂ
ಬದುಕು ಮಾತ್ರ ಬದಲಾಗಲೇ ಇಲ್ಲ.
ಹೊಸ ವರ್ಷ ಶುರುವಾತನ್ನೊಮ್ಮೆ ಸಂಭ್ರಮಿಸೋಣ ಎಂದರೆ
ಅದು ಡಿಸೆಂಬರ್ 31 ರ ರಾತ್ರಿ 12 ರ ಗಳಿಗೆಯ ಅರೆಕ್ಷಣದ ಸಂತೋಷ ಮಾತ್ರ.
ಬೆಳಗಾದರೆ ಮತ್ತದೇ ಒತ್ತಡ, ಕೆಲಸ, ಸಾಂಸಾರಿಕ ಜವಾಬ್ದಾರಿ,ಕಿತ್ತು ತಿನ್ನುವ ಸಾಲ, ಬಡತನ, ಮಕ್ಕಳಿಗೆ ಹೊಸ ವರ್ಷಕ್ಕೆ ಸಿಹಿತರಲು ಮತ್ತೆ ಸಾಲದ ಪಾಷಾಣದಲಿ ಸಿಲುಕುವಂತಾಗಿದೆ.

ಇಲ್ಲಿ ಶಾಶ್ವತ ಕ್ಯಾಲೆಂಡರ್ ಒಂದು ಬೇಕಿದೆ
ಬದುಕಿನ ಸಂಕಷ್ಟಗಳ ಬದಲಿಸುವ ಶಾಶ್ವತ ಕ್ಯಾಲೆಂಡರ್ ಬೇಕಿದೆ!

ಎಚ್. ಆರ್. ನವೀನ್ ಕುಮಾರ್, ಹಾಸನ ಹೊಸ ವರ್ಷ


ಹೊಸತು

ಎರಡು ಸಾವಿರದ ಇಪ್ಪತ್ಮೂರು
ತುಂಬಿಕೊಂಡಿದ್ದ ನೋವು‌ ನೂರಾರು

ಮಣಿಪುರದಲ್ಲಿನ ಬೆತ್ತಲ ಮೆರವಣಿಗೆ
ಗಾಜಾಪಟ್ಟಿಯಲ್ಲಿನ ಮಕ್ಕಳ ಹೆಣದ ರಾಶಿ
ಕೋಲ‌ ಮುಟ್ಟಿದ್ದಕ್ಕೆ ಹಲ್ಲೆ,
ಪ್ರೀತಿಸಿದ್ದಕ್ಕೆ ತಾಯಿಯ ಬೆತ್ತಲೆ….
ಹೀಗೆ ದಲಿತರ ಮೇಲೆ ನಡೆದ ದೌರ್ಜನ್ಯಗಳು……

ತಲೆಗೆ ತುಂಬಿಕೊಂಡ ಮತೀಯತೆ
ಮನಸ್ಸಿನಲ್ಲಿದ್ದ ಮಲೀನತೆ
ಗಲಭೆ, ಕೊಲೆಗೆ ಕಾರಣವಾಯ್ತು……

ಇದಷ್ಟೆ ಅಲ್ಲ ಇನ್ನೂ ಹಲವು ನೋವುಗಳಿವೆ…..
ಆ ನೋವುಗಳೊಂದಿಗೆ ಪಯಣ ಮುಗಿಸುತ್ತಿರುವೆ……
ಅವು ನನ್ನೊಂದಿಗೆ ಮಣ್ಣಾಗಿಲಿ ಎಂದು
ಹೋಗುತ್ತಿರುವೆ

ಎರಡು ಸಾವಿರದ ಇಪ್ಪತ್ನಾಲ್ಕು
ಇರಲಿ ಹರ್ಷದ ಬದುಕು

ಎರಡು ಸಾವಿರದ ಇಪ್ಪತ್ನಾಲ್ಕು
ತರಲಿ ಸಂತಸದ ಗಂಟೆ ಇಪ್ಪತ್ನಾಲ್ಕು

ಎರಡು ಸಾವಿರದ ಇಪ್ಪತ್ನಾಲ್ಕು……..
ತರದಿರಲಿ ದೌರ್ಜನ್ಯ, ದಬ್ಬಾಳಿಕೆಯ

ಎರಡು ಸಾವಿರದ ಇಪ್ಪತ್ನಾಲ್ಕು
ಬರಲಿ ಬರಲಿ ಹೊಸತು
ಸೌಹಾರ್ದತೆಯ ಬೆಳಕು

ಹೊಸ ವರ್ಷದ ಶುಭಾಶಯಗಳು

– ಗುರುರಾಜ ದೇಸಾಯಿ

 

 

Donate Janashakthi Media

Leave a Reply

Your email address will not be published. Required fields are marked *