ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ ಇರುವ ಕೋವಿಡ್ ಮಾರ್ಗಸೂಚಿಗಳಲ್ಲಿ ಬದಲಾವಣೆ ಹಾಗೂ ಇತರ ನಿರ್ಧಾರಗಳ ಬಗ್ಗೆ ಇಂದು ಮಹತ್ವದ ಸಭೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ಸಭೆಯಲ್ಲಿ ತಜ್ಞರು, ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದರು.
ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂದಾಯ ಸಚಿವರು ನಾಳೆಯಿಂದಲೇ ವಾರಾಂತ್ಯ ಕರ್ಫ್ಯೂ ರದ್ದುಪಡಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ 5ರವರೆಗೆ ಮುಂದುವರೆಯಲಿದೆ. ಮದುವೆ, ಸಮಾರಂಭ ಮೇಲಿನ ನಿರ್ಬಂಧಗಳು ಈಗ ಜಾರಿಯಲ್ಲಿರುವ ನಿಯಮಗಳು ಮುಂದುವರೆಯಲಿದೆ ಎಂದು ತಿಳಿಸಿದರು.
ತಜ್ಞರ ವರದಿ ಮತ್ತು ಸಲಹೆ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿರುವ ಸಚಿವ ಆರ್ ಅಶೋಕ್, ಹೋಟೆಲ್, ಬಾರ್, ರೆಸ್ಟೋರೆಂಟ್ಗಳಲ್ಲಿ 50:50 ನಿಯಮ ಜಾರಿ ಮುಂದುವರೆಯಲಿದೆ ಎಂದು ಹೇಳಿದರು.
ರ್ಯಾಲಿ, ಪ್ರತಿಭಟನೆ, ಜಾತ್ರೆಗಳಿಗೆ ಇರುವ ನಿರ್ಬಂಧಗಳು ಹಾಗೆ ಮಂದುವರೆದಿದೆ. ಅದೇ ರೀತಿ ಸಿನಿಮಾ ಮಂದಿರಗಳು, ಮಾಲ್ಗಳಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶವಿದ್ದು, ಅಲ್ಲಿಯೂ 50:50 ನಿಯಮ ಪಾಲನೆ ಮಾಡಬೇಕು. ವಾರಾಂತ್ಯದಲ್ಲಿಯೂ ಈ ನಿಯಮ ಇರಲಿದೆ.
ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಅದೇ ಸಂದರ್ಭದಲ್ಲಿ ಅದರ ತೀವ್ರತೆ ಕಡಿಮೆ ಮತ್ತು ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಕಡಿಮೆ ಇದೆ. ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಶೇಕಡ 5ರಷ್ಟಿದೆ. ಹಾಗಾಗಿ, ವಾರಾಂತ್ಯ ಕರ್ಫ್ಯೂ ಹಿಂಪಡೆಯುತ್ತಿದ್ದೇವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಶಾಲೆ-ಕಾಲೇಜುಗಳು ಮುಚ್ಚುವಿಕೆ ಮುಂದುವರೆದಿದ್ದು, ಜನವರಿ 29ರವರೆಗೂ ಶಾಲಾ-ಕಾಲೇಜುಗಳು ತೆರೆಯುವಂತಿಲ್ಲ. ಹೆಚ್ಚು ಸೋಂಕಿತ ಕೇಸು ದಾಖಲಾಗಿರುವ ಶಾಲೆಗಳು 7 ದಿನಗಳು ಮುಚ್ಚಲಾಗುತ್ತದೆ. ಕಡಿಮೆ ಸೋಂಕಿತ ಕೇಸುಗಳು ದಾಖಲಾದ ಶಾಲೆಗಳು 3 ದಿನ ಮುಚ್ಚಲಾಗುತ್ತದೆ.
ಇಂದಿನ ಸಭೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಆರಗ ಜ್ಞಾನೇಂದ್ರ, ಆರ್. ಅಶೋಕ್, ಗೋವಿಂದ್ ಕಾರಜೋಳ, ಬಿಸಿ ನಾಗೇಶ್ ಭಾಗಿಯಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಪ್ರತಿನಿಧಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಹಿಂದೆ ವಾರಾಂತ್ಯ, ರಾತ್ರಿ ಕರ್ಫ್ಯೂಗೆ ಹಲವು ನಾಯಕರು, ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಈ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ವಾರಾಂತ್ಯ ಕರ್ಫ್ಯೂ ತೆರವಿಗೆ ತಜ್ಞರು ಶಿಫಾರಸು ಮಾಡಿದ್ದಾರೆ.