ನವದೆಹಲಿ: ರಾಜ್ಯದ ನೀರಾವರಿ ವಿಷಯಗಳು ಸೇರಿದಂತೆ ಮತ್ತಿತ್ತರೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ ಸೆಪ್ಟೆಂಬರ್ 5ರಂದು ರೈತರ ಮಕ್ಕಳಿಗೆ ಕೃಷಿ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
ಸಂಜೆ 4 ಗಂಟೆ ಸಮಯದಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಸಚಿವರು ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲಿದ್ದೇನೆ. ಎಂದು ತಿಳಿಸಿದರು.
ನಾಳೆ ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ನೀಡುತ್ತಿರುವ ಕೋವಿಡ್ ಲಸಿಕೆ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಕೆ ಅವರು ಸಹ ಇರಲಿದ್ದಾರೆ.
ನೀರಾವರಿ ವಿಚಾರಗಳ ಬಗ್ಗೆ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಹದಾಯಿ ಯೋಜನೆಗಳ ಕುರಿತು ಮಾತುಕತೆ ನಡೆಸಿ ಅದರ ಸಾಧಕ ಬಾಧಕಗಳು ಮತ್ತು ಮೇಕೆದಾಟು ಯೋಜನೆ ಕಾಮಗಾರಿಗೆ ಕೇಂದ್ರ ನೀರಾವರಿ ಸಚಿವರಿಂದ ಒಪ್ಪಿಗೆ ಪಡೆಯುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿಗಳ ಬಗ್ಗೆಯೂ ಚರ್ಚಿಸಲಿದ್ದಾರೆ.
ಅಂತರ್ ರಾಜ್ಯ ನದಿ ನೀರು ವಿವಾದ ಕುರಿತಾಗಿಯೂ ಕೇಂದ್ರ ಸಚಿವರೊಂದಿಗೆ ಚರ್ಚಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾನೂನು ತಂಡದೊಂದಿಗೂ ಚರ್ಚೆ ನಡೆಸಲಿದ್ದಾರೆ. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರೊಂದಿಗೆ ರಾಜ್ಯದ ಹೆದ್ದಾರಿಗಳ ಬಗ್ಗೆ ಹಾಗೂ ವಿತ್ತ ಸಚಿವೆಯನ್ನು ಭೇಟಿ ಮಾಡಿ ಕೇಂದ್ರದ ಹಣಕಾಸು ಯೋಜನೆಗಳು ಮತ್ತು ಹೆಚ್ಚಿನ ನೆರವಿನ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಮೈಸೂರಿನ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ರಿಕ್ರಿಯಿಸಿದ ಸಿಎಂ ಬೊಮ್ಮಾಯಿ ಘಟನೆ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರುಗಳ ಭೇಟಿಯ ನಂತರ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದು ರಾಜ್ಯ ಸರ್ಕಾರದ ಆಡಳಿತದ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟದಲ್ಲಿ ಖಾಲಿ ಉಳಿದಿರುವ ನಾಲ್ಕು ಸ್ಥಾನಗಳ ಭರ್ತಿ ಸಂಬಂಧ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಆರೋಗ್ಯ ಸಚಿವ ಸುಧಾಕರ್ ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ ಇದ್ದಾರೆ.