ನವೆಂಬರ್ 11ರಿಂದ 26 ರ ವರೆಗೆ ಹೊಸ ಶಿಕ್ಷಣ ನೀತಿ(ಎನ್ಇಪಿ)ಯ ವಿರುದ್ಧ ಒಂದು “ ಪ್ರತಿರೋಧದ ಉತ್ಸವ”ವನ್ನು ಪೂರ್ಣ ಶಕ್ತಿ ಹಾಕಿ ಆಚರಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ನ ಕೇಂದ್ರೀಯ ಕಾರ್ಯಕಾರಿ ಸಮಿತಿ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.
- ನವೆಂಬರ್11ರಂದು ಹೊಸ ಶಿಕ್ಷಣ ನೀತಿ(ಎನ್ಇಪಿ)ಯ ವಿರುದ್ಧ ದೇಶವ್ಯಾಪಿ ಸತ್ಯಾಗ್ರಹದೊಂದಿಗೆ ಇದು ಆರಂಭವಾಗಿದೆ.
- ನವೆಂಬರ್ 13ರಂದು ಎಲ್ಲ ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಎನ್‌ಇಪಿ ಮತ್ತು ನೀಟ್ ವಿರುದ್ಧ ಪಿಕೆಟಿಂಗ್ ಮತ್ತು ಕರಪತ್ರ ಹಂಚಿಕೆ ನಡೆಯುತ್ತದೆ.
- ನವೆಂಬರ್ 14 ಮಕ್ಕಳ ದಿನಾಚರಣೆಯನ್ನು ‘ಅಂಗನವಾಡಿ ಉಳಿಸಿ’ ದಿನವಾಗಿ ಆಚರಿಸಲಾಗುವುದು.
- ನವೆಂಬರ್ 15ರಂದು ಕೇಂದ್ರ ಸರಕಾರೀ ಕಚೇರಿಗಳ ಮುಂದೆ ಬೃಹತ್ ಮತಪ್ರದರ್ಶನಗಳು ನಡೆಯುತ್ತವೆ.
ಈ ಪ್ರತಿರೋಧದ ಭಾಗವಾಗಿಯೇ ನವಂಬರ್19ರಿಂದ 26 ರ ವರೆಗೆ ರೈತರ ಹೋರಾಟದ ವಾರ್ಷಿಕೋತ್ಸವವನ್ನು ಆಚರಿಸಲಾಗುವುದು ಎಂದು ಎಸ್‌ಎಫ್‌ಐ ಹೇಳಿದೆ.
“ವಿದ್ಯಾರ್ಥಿ-ವಿರೋಧಿ ಹೊಸ ಶಿಕ್ಷಣ ನೀತಿ(ಎನ್‌ಇಪಿ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ಯನ್ನು ಪ್ರತಿರೋಧಿಸುವ ಪ್ರತಿಜ್ಞೆ ಕೈಗೊಳ್ಳೋಣ. ಎನ್‌ಇಪಿ ಮತ್ತು ನೀಟ್ ನಾವು ಒಂದು ಪ್ರಗತಿಶೀಲ ಸಮಾಜವಾಗಿ ನಂಬಿರುವ ಪ್ರತಿಯೊಂದಕ್ಕೂ ವಿರುದ್ಧವಾಗಿದೆ. ಇದನ್ನು ಏನೇ ಬೆಲೆ ತೆತ್ತಾದರೂ ವಿರೋಧಿಸಲೇ ಬೇಕು. ಪ್ರಸಕ್ತ ಬಿಜೆಪಿ ಸರಕಾರ ಭಿನ್ನಮತದ ದನಿಗಳನ್ನು ಸಹಿಸುವುದಿಲ್ಲ. ಆದರೆ ಸಾರ್ವಜನಿಕ ಶಿಕ್ಷಣವನ್ನು ಫ್ಯಾಸಿಸ್ಟ್ ಮತ್ತು ನವ-ಉದಾರವಾದೀ ಪ್ರಹಾರಗಳಿಂದ ಉಳಿಸಲು, ನಮ್ಮ ಐಕ್ಯ ದನಿಗಳು ಅವರ ಕಿವಿಗಳಲ್ಲಿ ಮಾರ್ದನಿಸುವಂತೆ ಮಾಡುವುದು ಈಗಿನ ಅಗತ್ಯವಾಗಿದೆ ಆಮೂಲಕ ಅವರು ನಮ್ಮ ಆಗ್ರಹಗಳಿಗೆ ಗಮನ ನೀಡುವಂತೆ ಮಾಡಬೇಕಾಗಿದೆ” ಎಂದಿರುವ ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮಯೂಕ್ ಬಿಸ್ವಾಸ್ ಈ ದೇಶವ್ಯಾಪಿ ‘ಪ್ರತಿರೋಧದ ಉತ್ಸವ’ದಲ್ಲಿ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದ್ದಾರೆ.