ಧಾರವಾಡ: ಸಂವಿಧಾನದ ಶೆಡ್ಯೂಲ್ 7 ರಲ್ಲಿ ಶಿಕ್ಷಣ ಬರುವುದರಿಂದ ಶಿಕ್ಷಣಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಲು ಅವಕಾಶವಿದೆ. ಆದರೆ ಎನ್ಇಪಿ ಯಡಿ ರಾಷ್ಟ್ರೀಯ ಶಿಕ್ಷಾ ಆಯೋಗ ರಚನೆ ಮಾಡುವುದರ ಮೂಲಕ ರಾಜ್ಯಗಳಿಗೆ ಇರುವ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಖ್ಯಾತ ಭಾಷಾ ಶಾಸ್ತ್ರಜ್ಞರು, ಪದ್ಮಶ್ರೀ ಡಾ. ಗಣೇಶ ಎನ್ ದೇವಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಎಸ್ಎಫ್ಐ-ಡಿವೈಎಫ್ಐ ಜಿಲ್ಲಾ ಸಮಿತಿಗಳು ಹಮ್ಮಿಕೊಂಡಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ದುಂಡು ಮೇಜಿನ ಸಭೆ ಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪಾಶ್ಚಿಮಾತ್ಯ ಶಿಕ್ಷಣದ ನಿಯಂತ್ರಣ ಮತ್ತು ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ಸನಾತನ ಧರ್ಮದ ಆಧಾರದಲ್ಲಿ ರಾಷ್ಟ್ರಕಟ್ಟುವ ಗುರಿಯನ್ನು ಹೊಂದಿದೆ. ಸನಾತನ ಧರ್ಮ ಎಂದರೆ ಮನುಸ್ಮೃತಿ ಆಧಾರದಲ್ಲಿ ಮಹಿಳೆಯರು ಹಾಗೂ ಶೋಷಿತ ಜನಾಂಗಗಳಿಗೆ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯ ಜ್ಞಾನವನ್ನು ವಿರೋಧಿಸುವ ಬಿಜೆಪಿ ಶಾಸಕರು ಸಚಿವರ ಬಹುತೇಕ ಮಕ್ಕಳು ವಿದೇಶಗಳಲ್ಲಿ ಓದುತ್ತಿದ್ದಾರೆ. ಇದು ಕೇವಲ ಬಡವರ ಮಕ್ಕಳನ್ನು ವಿಜ್ಞಾನ ಮತ್ತು ವೈಚಾರಿಕ ಶಿಕ್ಷಣದಿಂದ ದೂರ ಮಾಡುವ ಕುತಂತ್ರವಾಗಿದೆ ಎಂದು ಹರಿಹಾಯ್ದರು.
ಶಿಕ್ಷಣ ತಜ್ಞ ಶಂಕರ ಹಲಗತ್ತಿ ಮಾತನಾಡಿ, ಒಕ್ಕೂಟ ಸರಕಾರವು ಜಾರಿ ಮಾಡುತ್ತಿರುವ ಎನ್ಇಪಿಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ದಿ ಕಲಿಸುವ ಘೋಷಣೆಯ ಹಿಂದೆ ಬಹುರಾಷ್ಟ್ರೀಯ ಕಾರ್ಪೋರೆಟ್ ಕಂಪೆನಿಗಳಿಗೆ ಕೇವಲ ಕಾರ್ಮಿಕರನ್ನು ಸೃಷ್ಟಿಸುವ ನೀತಿ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲಿ ಕಲಿಸಬೇಕು ಎನ್ನುವ ಈ ಕಾಯಿದೆಯು ಖಾಸಗಿ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಕಲಿಸಬಹುದು ಎಂದು ಸೂಚಿಸುತ್ತಿರುವುದರ ಕುಟಿಲತೆಯನ್ನು ಅರಿಯಬೇಕು ಎಂದರು.
ಕವಿವಿ ನಿವೃತ್ತ ಕುಲ ಸಚಿವರಾದ ಡಾ. ಕೆ.ಆರ್ ದುರ್ಗಾದಾಸ್ ಮಾತನಾಡಿ, ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಒಕ್ಕೂಟ ಸರಕಾರವು, ಕೇವಲ ಒಂದು ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿದೆಯೆ ವಿನಃ, ದೇಶದ ಸರ್ವ ಜನರನ್ನು ಸಮಾನವಾಗಿ ನೋಡಲು ವಿಷಯದಿಂದ ಹಿಂದೆ ಸರಿದಿದೆ. ಆಳುವವರ ಗುರಿಗೆ ತಕ್ಕಂತೆ ಮಕ್ಕಳನ್ನು ಬಳಸಿಕೊಳ್ಳಲು ಎನ್ಇಪಿ ಮೂಲಕ ಯೋಜನೆ ರೂಪಿಸಿರುವರು ಎಂದು ಹೇಳಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ನಾಗಪುರದ ಆರ್ಎಸ್ಎಸ್ ಶಿಕ್ಷಣ ನೀತಿಯಾಗಿದೆ ದೇಶದಲ್ಲಿ ಶಿಕ್ಷಣದ ಕೇಂದ್ರೀಕರಣ, ವ್ಯಾಪಾರಿಕರಣ ಕೋಮುವಾದೀಕರಣ ಗಳಿಸುವುದರ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸುವ ಅಂಬಾನಿ, ಅಧಾನಿ ಜಿಯೋ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನೇರ ಬಂಡವಾಳ ಹೂಡಿಕೆ ಮಾಡಿ ಶಿಕ್ಷಣವನ್ನು ವ್ಯಾಪಾರದ ಸರಕ್ಕನಾಗಿಸುವ ಹುನ್ನಾರ ಹೊಂದಿದೆ ಎಂದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಜಾಸತ್ತಾತ್ಮಕವಾಗಿ ಅವಸರದಲ್ಲಿ ಜಾರಿಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು. ಈ ಕುರಿತು ರಾಜ್ಯ ವಿಧಾನಸಭೆಯಲ್ಲಿ ಸಮಗ್ರ ಚರ್ಚೆ ನಡೆದು ತಿದ್ದುಪಡಿಗಳನ್ನು ಒಳಗೊಂಡು ಸಮಾನ ಶಿಕ್ಷಣವನ್ನು ಎಲ್ಲರಿಗೂ ಗೊಳಿಸುವ ನಿಟ್ಟಿನಲ್ಲಿ ಆಗಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಐದುವರೆ ದಶಕಗಳ ಹಿಂದೆ ಕೊಠಾರಿ ಆಯೋಗ ಶಿಫಾರಸ್ಸಿನಂತೆ ಹಣಕಾಸು ಒದಗಿಸದೇ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಹಾಳುಗೆಡವಿ, ಖಾಸಗೀ ಶಿಕ್ಷಣ ಕ್ಷೇತ್ರಗಳನ್ನು ಬಲ ಪಡಿಸಲು ಇದುವರೆಗೆ ದೇಶವನ್ನಾಳಿದ ಸರಕಾರಗಳು ಕೆಲಸ ಮಾಡಿವೆ.
ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಆರ್ಥಿಕವಾಗಿ ಹಿಂದುಳಿದವರನ್ನು ಉನ್ನತ ಶಿಕ್ಷಣದಿಂದ ವಂಚಿಸಲು ಈ ನೀತಿಯನ್ನು ಜಾರಿ ಮಾಡುತ್ತಿದೆ. ಇದರ ತಡೆಗಾಗಿ ವಿದ್ಯಾರ್ಥಿ-ಯುವಜನರು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿಕೊಂಡು ಐಕ್ಯ ಚಳುವಳಿಗೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶಾರದಾ ದಾಬಡೆ, ಶಿಕ್ಷಕರ ಸಂಘಟನೆಯ ರಾಷ್ಟ್ರೀಯ ಮುಖಂಡ ಬಸವರಾಜ ಗುರಿಕಾರ, ವೈದ್ಯ ಗೋಪಾಲ ದಾಬಡೆ, ಎಐಎಲ್.ಯು ಮುಖಂಡ ಕೆ.ಎಚ್ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಎಸ್ ನಾಗಕಲಾಲ್, ಸಿಐಟಿಯು ಕಾರ್ಯದರ್ಶಿ ಮಹೇಶ ಪತ್ತಾರ, ಎ.ಎಂ ಖಾನ್, ಡಾ. ಆರ್.ಎನ್ ಪಾಟೀಲ, ಕೀರ್ತಿವತಿ, ರಾಜೇಶ್ವರಿ ಜೋಷಿ, ಬಿ.ಎನ್ ಪೂಜಾರಿ, ಎಂ.ವಿ ಗಡಾದ ಮುಂತಾದವರು ಉಪಸ್ಥಿತಿತರಿದ್ದರು. ಮುಖಂಡರಾದ ಬಸವರಾಜ ಸಾರಥಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ರಾಠೋಡ ವಂದಿಸಿದರು