ಮುಳಬಾಗಿಲು: ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆರನೇ ಮುಳಬಾಗಿಲು ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ(ಎನ್‌ಇಪಿ) ನೀತಿ ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವಿನಾಶದ ಕಡೆಗೆ ಕೊಂಡೊಯ್ಯಲಿದೆ ಎಂದು ಆಂತಕ ವ್ಯಕ್ತಪಡಿಸಿದರು.
ಹಣವುಳ್ಳವರಿಗೆ ಶಿಕ್ಷಣವನ್ನು ಸರಕಿನ ರೀತಿ ಮಾರಾಟ ಮಾಡುವ ದಂಧೆಗೆ ಎನ್ಇಪಿ ಅವಕಾಶ ಕೊಡಲಿದೆ. ಇದರಿಂದ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗ ಆಳುವ ಸರ್ಕಾರಗಳು ಸಂವಿಧಾನಬದ್ಧವಾಗಿ ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಬೇಕಾಗಿತ್ತು. ಆದರೆ, ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ಶಿಕ್ಷಣವನ್ನು ಕೋಮುವಾದೀಕರಣ, ಕೇಂದ್ರೀಕರಣ, ವ್ಯಾಪಾರಿಕರಣ ಮಾಡುವ ಮೂರು ದುರುದ್ದೇಶಗಳಿಗಾಗಿ ಅಪ್ರಜಾಸತ್ತಾತ್ಮಕವಾಗಿ ತರಾತುರಿಯಲ್ಲಿ ಜಾರಿಗೊಳಿಸಿ ಶೈಕ್ಷಣಿಕ ವಲಯದಲ್ಲಿ ಆರಾಜಕತೆ ಸೃಷ್ಟಿಸುತ್ತಿದೆ ಎಂದು ದೂರಿದರು.
ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣವನ್ನು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಮೊಟುಕುಗೊಳಿಸಿ ಕೇಂದ್ರ ಸರ್ಕಾರ ಮಾತ್ರ ರಾಷ್ಟ್ರೀಯ ಶಿಕ್ಷಣ ಆಯೋಗ ಮೂಲಕ ನಿಯಂತ್ರಿಸಲು ಮುಂದಾಗಿದೆ ಮತ್ತು ಪಠ್ಯಪುಸ್ತಕಗಳ ಕೇಸರೀಕರಣದ ಹೆಸರಿನಲ್ಲಿ ಭಗತ್ ಸಿಂಗ್, ಕುವೆಂಪು, ಅಂಬೇಡ್ಕರ್, ಸಾವಿತ್ರಿ ಬಾಯಿ ಫುಲೆ, ನಾರಾಯಣಗುರು, ಟಿಪ್ಪು ಸುಲ್ತಾನ್, ಪೆರಿಯಾರ್ ಮುಂತಾದ ಸ್ವಾತಂತ್ರ ಹೋರಾಟಗಾರರು ಮತ್ತು ಸಮಾಜ ಸುಧಾರಕರನ್ನು ಅವಮಾನಿಸಿ ಪಠ್ಯಪುಸ್ತಕದಿಂದ ಹೊರಗಿಟ್ಟು ಸಂಘ ಪರಿವಾರ ಸಿದ್ದಾಂತಿಗಳಾದ ವಿ.ಡಿ ಸಾವರ್ಕರ್, ಹೆಡ್ಗೇವರ್ ಮುಂತಾದ ಕೋಮುವಾದಿಗಳ ಪಠ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಹೊರಟಿರುವುದು ಅಪಾಯಕಾರಿದೆ.
ರಾಜ್ಯ ಬಿಜೆಪಿ ಸರ್ಕಾರ 13,800 ಸರ್ಕಾರಿ ಶಾಲೆಗಳನ್ನು ವಿಲೀನೀಕರಣದ ಹೆಸರಿನಲ್ಲಿ ಮುಚ್ಚಲು ಹೊರಟಿದೆ. ಪದವಿಗೆ ದಾಖಲಾತಿ ಪಡೆಯಲು ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಕಡ್ಡಾಯ ಮಾಡಿದೆ. ಈ ಎಲ್ಲಾ ನೀತಿಗಳು ಬಡವರು, ದಲಿತರು, ತಳ ಸಮುದಾಯಗಳನ್ನು ಶಿಕ್ಷಣದಿಂದ ಹೊರ ಹಾಕುವ ಉನ್ನಾರ ಹೊಂದಿವೆ ಎಂದು ದೂರಿದರು.
ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸೈಕಲ್, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಅಗತ್ಯ ಶಿಕ್ಷಕರ ನೇಮಕಾತಿ ಮಾಡುವಲ್ಲಿ ವಿಫಲವಾಗಿದ್ದು ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಎಂದು ದೂರಿದರು.
ಜಿಲ್ಲಾ ಕಾರ್ಯದರ್ಶಿ ಬೀರಾಜು ಮಾತನಾಡಿ, ರಾಜಕಾರಣಿಗಳು ಸಮಾಜ ಸೇವೆಯ ಹೆಸರಿನಲ್ಲಿ ಮಂದಿರ ಮಸೀದಿಗಳಿಗೆ ಹಣ ಹಂಚುವ ಬದಲು ಶಾಲಾ, ಕಾಲೇಜು, ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು ನೀಡಿ ಶಿಕ್ಷಣ, ಆರೋಗ್ಯ ಎಲ್ಲರಿಗು ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸಮ್ಮೇಳನದ ಧ್ವಜಾರೋಹಣವನ್ನು ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಸುರೇಶ್ ಬಾಬು ನೆರವೇರಿಸಿದರು. ಜಿಲ್ಲಾಧ್ಯಕ್ಷ ಶಿವಪ್ಪ, ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್, ಅಂಕಿತಾ, ತಾಲ್ಲೂಕು ಕಾರ್ಯದರ್ಶಿ ಆನಂದ ಕುಮಾರ್ ಉಪಾಧ್ಯಕ್ಷ ಶಶಿಕುಮಾರ್, ಸುದರ್ಶನ್, ಕಲಾವಿದ ಕೊಡಿಹಳ್ಳಿ ಶ್ರೀನಿವಾಸ್, ಪಿಚ್ಚಳ್ಳಿ ಮಂಜುನಾಥ್ ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.