ಬೆಂಗಳೂರು: ಮೊಟ್ಟೆ, ಮಾಂಸದಿಂದ ಅನೇಕ ರೋಗಗಳು ಬರುತ್ತವೆ.ಅದಕ್ಕೆ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ಇಲಾಖೆ ರೂಪಿಸಿರುವ ಪಠ್ಯಕ್ರಮದ ಕರಡಿನಲ್ಲಿ ವಿವಾದಾತ್ಮಕ ಅಂಶವನ್ನು ಪ್ರಸ್ತಾಪಿಸಲಾಗಿದೆ.
ಎನ್ಇಪಿ ಸಮಿತಿಯ ಈ ಶಿಫಾರಸ್ಸಿಗೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೊಟ್ಟೆ ಹಾಗೂ ಮಾಂಸ ದೇಹಕ್ಕೆ ಪ್ರೋಟೀನ್ ಒದಗಿಸುತ್ತದೆ. ಮಾನವನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಮೊಟ್ಟೆಯನ್ನು ಬಿಸಿಯೂಟದಲ್ಲಿ ಸೇರಿಸಿತ್ತು. ಆದ್ರೆ ಈ ಸಮಿತಿ ಮೊಟ್ಟೆ ಉತ್ತಮವಲ್ಲ ಅಂತಾ ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಸಾಹಿತಿಗಳು, ವಿದ್ಯಾರ್ಥಿಗಳು ಸೇರಿ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಆಕ್ರೋಶಗೊಂಡಿದ್ದಾರೆ.
ಇನ್ನು ತಜ್ಞರ ಶಿಫಾರಸ್ಸಿಗೆ ಕಿಡಿ ಕಾರಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಜನರ ಊಟದ ಪದ್ಧತಿಯನ್ನು ಹೇರಲು ಸಮಿತಿ ಮುಂದಾಗಿದೆ. ದೇಶದಲ್ಲಿ ಶೇ. 50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಸಮಿತಿಯು ಈ ವಾಸ್ತವವನ್ನು ಅಣಕಿಸಿದಂತಿದೆ. ಇದು ಅವೈಜ್ಞಾನಿಕ ಸಲಹೆ. ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡಲೇಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ನೀತಿ ಆಯೋಗದ ವರದಿಯ ಪ್ರಕಾರ ಶೆ 32 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಗುಣಮಟ್ಟದ ಆಹಾರದ ಕೊರತೆಯಿಂದ ಬೆಳವಣಿಗೆ, ಎತ್ತರ, ದೈಹಿಕ ರಚನೆಯಲ್ಲಿ ಕುಂಠಿತವಾಗುತ್ತಿದೆ. ಬಹಳಷ್ಟು ವಿದ್ಯಾರ್ಥಿನಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಮೊಟ್ಟೆ ವಿತರಣೆ ಮಾಡಬೇಕು. ಅಪೌಷ್ಟಿಕತೆ ಹೋಗಬೇಕಾದರೆ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಬೇಕು ಎಂದು ನ್ಯಾಯಮೂರ್ತಿ ಎನ್‌ಕೆ ಪಾಟೀಲ್ ಶಿಫಾರಸ್ಸು ನೀಡಿದ್ದರು. ಸರಕಾರ ಆ ಶಿಪಾರಸ್ಸನ್ನು ಜಾರಿ ಮಾಡಬೇಕು ಎಂದು ಶಿಕ್ಷಣ ತಜ್ಞ ವಿಪಿ ನಿರಂಜನಾರಾಧ್ಯ ಪ್ರತಿಕ್ರಿಯಿಸಿದ್ದಾರೆ.
ಎನ್‌ಇಪಿ ಸಮಿತಿಯ ಪ್ರಸ್ತಾಪವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿ ವಿರೋಧಿಸಿದೆ. ಈ ಪ್ರಸ್ತಾಪದ ವಿರುದ್ದ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ತಿಳಿಸಿದ್ದಾರೆ.