ಜನರ ಮನೆ ಬಾಗಿಲಿಗೆ ಅಗತ್ಯ ವಸ್ತು ಪೊರೈಸಿ ಮಾದರಿಯಾದ ಪಂಚಾಯತಿ

ಕೊಡಗು : ಕೊವಿಡ್ ನಿಯಂತ್ರಿಸೋದಕ್ಕೆ ಸರ್ಕಾರ ಬರಿ ನಿಯಮ ಜಾರಿ ಮಾಡಿದ್ರೆ ಸಾಕೆ.? ಆದರೆ ಕೊಡಗಿನ ಗ್ರಾಮ ಪಂಚಾಯಿತಿಯೊಂದು ನಿಯಮದ ಜೊತೆಗೆ ಜನರ ಮನೆ ಬಾಗಿಲಿಗೆ ಎಲ್ಲಾ ವಸ್ತುಗಳನ್ನು ತಲುಪಿಸುವ ಮೂಲಕ ಜನರನ್ನು ಮನೆಯಿಂದ ಹೊರಗೆ ಬರದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಹೌದು ಇಂತಹ ವಿಶೇಷ ಕೆಲಸದ ಮೂಲಕ ಕೊವಿಡ್ ನಿಯಂತ್ರಿಸಲು ಜಾರಿ ಮಾಡಿರುವ ಲಾಕ್ ಡೌನ್ ಗೆ ಜನರು ಸಂಪೂರ್ಣ ಸ್ಪಂದಿಸುವಂತೆ ಮಾಡಿರುವುದು ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ. ಇದಕ್ಕಾಗಿ ಪಂಚಾಯಿ ಸಾಮಾನ್ಯ ಸಭೆ ನಡೆಸಿ ಪಂಚಾಯಿತಿಯ ಸ್ವಲ್ಪ ಅನುದಾನವನ್ನು ಬಳಸಿಕೊಂಡಿದೆ. ಅದಕ್ಕಿಂತ ಮುಖ್ಯವಾಗಿ ಈ ಕೆಲಸಕ್ಕೆ ಬೇಕಾಗಿರುವ ವೆಚ್ಚಕ್ಕೆ ಪಂಚಾಯಿತಿಯ ಎಲ್ಲಾ ನೌಕರರು ತಮ್ಮ ಎರಡು ತಿಂಗಳ ಸಂಬಳವನ್ನು ನೀಡಿದ್ದಾರೆ. ಜೊತೆಗೆ ಪಂಚಾಯತಿ ಅಧ್ಯಕ್ಷ, ಸದಸ್ಯರು ತಮ್ಮ ಎರಡು ತಿಂಗಳ ಗೌರವಧನವನ್ನು ಬಿಟ್ಟಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಏಳು ವಾರ್ಡುಗಳಿದ್ದು ಒಟ್ಟು ಎರಡು ಸಾವಿರ ಕುಟುಂಬಗಳಿವೆ. ಅಷ್ಟೂ ಕುಟುಂಬಗಳಿಗೂ ಕನಿಷ್ಠ 15 ದಿನಗಳಿಗೆ ಬೇಕಾಗಿರುವ ತರಕಾರಿ, ಸಾಂಬಾರ ಪದಾರ್ಥಗಳ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ.

ಸಾಬು ವರ್ಗೀಸ್ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ

ಪ್ರತೀ ವಾರ್ಡಿಗೆ 3 ಜನರಿರುವ ಕೊರೊನಾ ವಾರಿಯರ್ಸ್ ಗಳ ಒಟ್ಟು ಏಳು ತಂಡಗಳು ಏಳು ವಾರ್ಡುಗಳಿಗೆ ತೆರಳಿ ಮನೆ ಮನೆಗೆ ಈ ಆಹಾರ ಕಿಟ್ ಗಳನ್ನು ತಲುಪಿಸುತ್ತಿವೆ. ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿಯಿಂದ ದೊಡ್ಡ ದೊಡ್ಡ ವಾಹನಗಳಲ್ಲಿ ಆಹಾರದ ಕಿಟ್ ಗಳನ್ನು ಸಾಗಿಸುವ ತಂಡಗಳು ಮನೆಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಜೊತೆಗೆ ಈ ತಂಡವೆ ತಮ್ಮ ವಾರ್ಡುಗಳ ಜನರಿಗೆ ಇತರೆ ವಸ್ತುಗಳು ಬೇಕಾಗಿದ್ದರೂ ಅವುಗಳ ಪಟ್ಟಿ ಪಡೆದು ಈ ತಂಡವೇ ಪಟ್ಟಣದಿಂದ ಕೊಂಡು ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಮಾತ್ರೆ ಔಷಧಿಗಳು ಬೇಕಾಗಿದ್ದರೂ ಅವುಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ.

ವಾರದಲ್ಲಿ 3 ದಿನ ಕೊಡಗು ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ, ಈ ಪಂಚಾಯಿತಿ ಜನರು ಮಾತ್ರ ಮನೆಯಿಂದ ಹೊರಗೆ ಬರದಂತೆ ನಿಯಂತ್ರಿಸಲು ಅನುಕೂಲವಾಗುವಂತೆ ಪಂಚಾಯಿತಿ ಮಹತ್ವದ ಕೆಲಸ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯ ಕೆಲಸವೇ ಸರಿ.

ಒಟ್ಟಿನಲ್ಲಿ ನಿಯಮಗಳನ್ನಷ್ಟೇ ಮಾಡಿದರೆ ಸಾಲದು, ಸೌಲಭ್ಯಗಳನ್ನೂ ಒದಗಿಸಬೇಕು ಎನ್ನೋದನ್ನ ಮಾಡಿ ತೋರಿಸುವ ಮೂಲಕ ನೆಲ್ಯಹುದಿಕೇರಿ ಪಂಚಾಯಿತಿ ಈಗ ಕೊಡಗು ಜಿಲ್ಲೆಗೆ ಮಾದರಿಯಾಗಿದೆ. ಪಂಚಾಯತಿಯ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆಗಳು ಕೇಳಿ ಬರುತ್ತಿವೆ.

 

Donate Janashakthi Media

Leave a Reply

Your email address will not be published. Required fields are marked *