ನವದೆಹಲಿ: ಮೇ 21ಕ್ಕೆ ನಿಗದಿಯಾಗಿದ್ದ ನೀಟ್ ವೈದ್ಯಕೀಯ ಸ್ನಾತ್ತಕೋತ್ತರ ಮತ್ತು ದಂತ ವೈದ್ಯ ಪರೀಕ್ಷೆಯನ್ನು ಮುಂದೂಡುವಂತೆ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ರೀತಿ ಪರೀಕ್ಷೆ ಕೆಲವರಿಗಾಗಿ ಮುಂದೂಡಿದರೆ ಅಭ್ಯಾಸ ಮಾಡಿ ಪರೀಕ್ಷೆಗಾಗಿ ಹೆಚ್ಚು ಕಲಿಯುತ್ತಿರುವವರಿಗೆ ಮತ್ತು ಹೀಗಾಗಲೇ ನೋಂದಾಣಿ ಮಾಡಿಸಿರುವವರಿಗೆ ತೊಂದರೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪರೀಕ್ಷೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಪದೇ ಪದೇ ಒತ್ತಾಯಿಸಿದ ನಂತರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಭಾರತೀಯ ವೈದ್ಯಕೀಯ ಮಂಡಳಿಯು ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯವರಿಗೆ ನೀಟ್ ಪಿಜಿ ಪರೀಕ್ಷೆ ಮುಂದೂಡಬೇಕು ಎಂದು ಮನವಿ ಮಾಡಿತ್ತು.
ಸ್ನಾತಕೋತ್ತರ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಪಿಜಿ)-2022 ಅನ್ನು ಮೇ 21ರಂದು ಆರಂಭಿಸಲಾಗುತ್ತಿದ್ದು, ಹದಿನೈದು ದಿನಗಳ ಅವಧಿಯಲ್ಲಿ ನಡೆಸಲಾಗುವುದು ಎಂದು ಘೋಷಿಸಲಾಗಿದೆ.
ವೈದ್ಯಕೀಯ ಅಭ್ಯರ್ಥಿಗಳು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ (ಎಐಎಂಎಸ್‌ಎ) ಶಾಂತಿಯುತ ಸಭೆ ಮತ್ತು ಮೌನ ಪ್ರತಿಭಟನೆ ನಡೆಸಿತು. ಈ ವಿದ್ಯಾರ್ಥಿಗಳಿಗೆ ಇತರ ಸಂಘಗಳು ಬೆಂಬಲ ಸೂಚಿಸಿದವು. ಕಳೆದ ಶುಕ್ರವಾರವಷ್ಟೇ 15,000 ಅಭ್ಯರ್ಥಿಗಳು 2022ನೇ ಸಾಲಿನ ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಪ್ರಧಾನಿ ಮೋದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.
ಕೌನ್ಸೆಲಿಂಗ್ ಪ್ರಕ್ರಿಯೆಯ ಅನಿಶ್ಚಿತತೆಯಿಂದಾಗಿ 50,000ಕ್ಕೂ ಹೆಚ್ಚು ಆಕಾಂಕ್ಷಿಗಳು ನೀಟ್-ಪಿಜಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.