ನೀಟ್ ಕೌನ್ಸಿಲಿಂಗ್ ವಿಳಂಬ: ವಿದ್ಯಾರ್ಥಿ – ಪೋಷಕರ ಸುಲಿಗೆಗೆ ನಿಂತ ರಾಜ್ಯ-ಕೇಂದ್ರ ಸರ್ಕಾರ

ಬೆಂಗಳೂರು: ‘ನೀಟ್ ಕೌನ್ಸಿಲಿಂಗ್ ಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು, ಸಿಇಟಿ ಮೂಲಕ ಪಡೆದಿರುವ ಸೀಟನ್ನು ಕಡ್ಡಾಯವಾಗಿ ರದ್ದು ಮಾಡುವುದಷ್ಟೇ ಅಲ್ಲದೆ, ತಾವು ಈಗಾಗಲೇ ಪಾವತಿಸಿರುವ ಶುಲ್ಕದ ಮೇಲೆ 5 ಪಟ್ಟು ಹೆಚ್ಚಿಗೆ ದಂಡವನ್ನು ಪಾವತಿಸಬೇಕು ‘ ಎನ್ನುವ ರಾಜ್ಯ ಸರ್ಕಾರದ ನಿರ್ಧಾರವನ್ನು ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಷನ್‌(ಎಐಡಿಎಸ್‌ಓ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.

ನೀಟ್ ಪ್ರಕ್ರಿಯೆ ಕುರಿತು ವೇಳಾಪಟ್ಟಿ ಇನ್ನೂ ಹೊರಡಿಸದೆ, ಕೇವಲ ದಂಡ ಪಾವತಿಯ ಬಗ್ಗೆ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಸುಲಿಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಾಕಷ್ಟು ಮುಂಚಿತವಾಗಿಯೇ ಆರಂಭವಾಗಬೇಕಿದ್ದ ನೀಟ್ ಯುಜಿ ಮತ್ತು ನೀಟ್ ಪಿಜಿ ಕೌನ್ಸಿಲಿಂಗ್ ನ ಅನಗತ್ಯ ಮತ್ತು ಅಸಮಂಜಸ ವಿಳಂಬದಿಂದಾಗಿ ವಿದ್ಯಾರ್ಥಿಗಳನ್ನು ಅತೀವವಾದ ಆತಂಕಕ್ಕೆ, ದುಗುಡಕ್ಕೆ ತಳ್ಳಿದೆ. ಈಗಾಗಲೇ ಸಿಇಟಿ ಎರಡು ಸುತ್ತಿನ ಕೌನ್ಸಿಲಿಂಗ್ ನಡೆದಿದ್ದು, ಲಕ್ಷಾಂತರ ವಿದ್ಯಾರ್ಥಿಗಳು, ಶುಲ್ಕ ಪಾವತಿಸಿ ಕಾಲೇಜುಗಳಿಗೆ ದಾಖಲಾಗಿದ್ದಾರೆ. ಸಾವಿರಾರು ಜನ ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ಸಹ, ನೀಟ್ ಮೂಲಕ ವೈದ್ಯಕೀಯ ಸೀಟು ಹಂಚಿಕೆ ಅನಗತ್ಯವಾಗಿ ವಿಳಂಬ ಆಗುತ್ತಿರುವ ಕಾರಣ ಅನಿವಾರ್ಯವಾಗಿ ಇಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ಮುಂತಾದ ಕೋರ್ಸುಗಳಿಗೆ ಸೇರಿದ್ದಾರೆ. ಇವರೆಲ್ಲರು ಮುಂದಿನ ದಿನಗಳಲ್ಲಿ ನೀಟ್ ಮೂಲಕ ವೈದ್ಯಕೀಯ ಭವಿಷ್ಯದ ಕನಸು ಹೊತ್ತಿದ್ದಾರೆ.

ಆದರೆ, ಈಗ ಸರ್ಕಾರ ನೀಟ್ ಕೌನ್ಸಿಲಿಂಗ್ ಪ್ರಕ್ರಿಯೆ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಹೊರಡಿಸದೆ, ದಂಡ ಕಟ್ಟುವ ಬಗ್ಗೆ ಮಾತ್ರ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ನೀಟ್ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಿ, ಅನಗತ್ಯ ವಿಳಂಬ ಮಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅತಂತ್ರಕ್ಕೆ, ಆತಂಕಕ್ಕೆ ಸರ್ಕಾರವೇ ತಳ್ಳಿದೆ. ನಿಜವಾಗಿ ನೋಡಿದರೆ, ಇಷ್ಟೆಲ್ಲಾ ಆತಂಕ, ಸಮಸ್ಯೆಗಳಿಗೆ ಕಾರಣವಾಗಿರುವ ಸರ್ಕಾರ ದಂಡ ತೆರಬೇಕಾದ ಸ್ಥಾನದಲ್ಲಿ ಇದೆ. ಆದರೆ, ಸರ್ಕಾರವು ವಿದ್ಯಾರ್ಥಿಗಳು ನೀಟ್ ಕೌನ್ಸಿಲಿಂಗ್ ಹಾಜರಾಗಲು, ಸಿಇಟಿ ಸೀಟನ್ನು 5 ಪಟ್ಟು ದಂಡ ಪಾವತಿಸಿ, ರದ್ದು ಮಾಡಿ ಎನ್ನುವ ಮೂಲಕ ದಂಡ ವಸೂಲಿಗೆ ನಿಂತಿರುವುದು ಅತ್ಯಂತ ಖಂಡನೀಯ ಮತ್ತು ಇದನ್ನು ವಿದ್ಯಾರ್ಥಿಗಳು ಅತ್ಯುಗ್ರವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಒಂದೆಡೆ, ದಂಡ ಕಟ್ಟಿಸಿಕೊಂಡು, ಮುಕ್ತಗೊಳಿಸಿಕೊಂಡ ಸೀಟನ್ನು ಖಾಸಗಿ ಮ್ಯಾನೇಜ್ ಮೆಂಟ್ ಗೆ ಹಂಚುವ ಮೂಲಕ ಹಣ ವಸೂಲಿ ಮಾಡಿದರೆ, ಮತ್ತೊಂದೆಡೆ, ತಾವು ಪಡೆಯದೇ ಇರುವ ಸೀಟಿಗೆ ಅಮಾಯಕ, ಲಕ್ಷಾಂತರ ವಿದ್ಯಾರ್ಥಿಗಳಿಂದ ದಂಡ ವಸೂಲಿಯ ಮೂಲಕ ಎರಡು ರೀತಿಯ ಸುಲಿಗೆಗೆ ಸರ್ಕಾರವು ಮುಂದಾಗಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಲಿಗೆ ನೀತಿಯಾಗಿದೆ.

ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೊದಲಿನಂತೆಯೇ, ಯಾವುದೇ ಬದಲಾವಣೆ ಇಲ್ಲದೆ ನೀಟ್ ಕೌನ್ಸಿಲಿಂಗ್ ಅನ್ನು ಆರಂಭಿಸಬೇಕು. ಸರ್ಕಾರದ ವಿಳಂಬ ನೀತಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಬಾರದು. ಕೌನ್ಸಿಲಿಂಗ್ ವಿಷಯದಲ್ಲಿ ಸೃಷ್ಟಿಸಿರುವ ಗೊಂದಲಕ್ಕೆ ಈ ಕೂಡಲೇ ತೆರೆ ಎಳೆದು, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸೀಟು ಪಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಎಐಡಿಎಸ್‌ಒ ರಾಜ್ಯ ಸಮಿತಿ ಮತ್ತು ರಾಜ್ಯದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *