ಇಂದು ಸಂಭ್ರಮಗಳ ಸಂಭ್ರಮ. ಈ ದಿನ “ರಂಗಪಯಣ” ತಂಡಕ್ಕೆ 12 ವರ್ಷ ತುಂಬಿದ ಸಂಭ್ರಮ. ಜೊತೆಗೆ ರಂಗಪಯಣ ಕಟ್ಟಿದ ಒಡತಿಗೆ ರಂಗಭೂಮಿಗೆ ಕಾಲಿಟ್ಟು 25 ವರ್ಷಗಳ ಬೆಳ್ಳಿ ಮಹೋತ್ಸವದ ಸಂಭ್ರಮ. ಇಂದು ಅವರ ಜನ್ಮದಿನದ ಸಂಭ್ರಮವೂ ಹೌದು. ಹಾಗಾಗಿ ಇಂದು ಇನ್ನೆರಡು ಹೊಸ ನಾಟಕಗಳ ಅನಾವರಣದ ಸಂಭ್ರಮ.
ಈ ಒಟ್ಟು ಸಂಭ್ರಮಗಳಿಗೆ ಕಾರಣಕರ್ತೆ ನಯನ.ಜೆ.ಸೂಡ. ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹೆಬ್ರಿಯಲ್ಲಿ. ಬೆಂಗಳೂರಿನ ಬಿ.ನಾರಾಯಣಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಯನ.ಜೆ.ಸೂಡ ಗೆ ಬಹುಶಃ ಏಳೆಂಟು ವರ್ಷ ವಯಸ್ಸಿಯಿದ್ದಾಗ ರಂಗಕರ್ಮಿ ಸಿ. ಲಕ್ಷ್ಮಣ್ ರವರು ʻಬಾರೆ ಪುಟ್ಟಿ ನಾಟ್ಕ ಮಾಡ್ತಿಯೇನೆʼ ಎಂದು ಕೇಳಿದ ಮಾತ್ರಕ್ಕೆ ಹುಂ ಎಂದು ರಂಗಭೂಮಿಗೆ ಪುಟ್ಟ ಪುಟ್ಟ ಕಾಲಿಟ್ಟ ನಯನರವರು, ಇಂದು ತನ್ನ ಪುಟ್ಟ ಹೆಜ್ಜೆಯೊಂದಿಗೆ ದಿಟ್ಟ ಹೆಜ್ಜೆಗಳನ್ನಿಟ್ಟು ರಂಗಭೂಮಿಯಲ್ಲಿ 25ನೇ ವರ್ಷಕ್ಕೆ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುವ ಬೆಳ್ಳಿ ಕಿರಣವಾಗಿ ಹೊರ ಹೊಮ್ಮಿದ್ದಾರೆ.
ಸಿ.ಲಕ್ಷ್ಮಣ್ ರವರ ರಂಗಕಹಳೆ ಎಂಬ ಗರಡಿಯಲ್ಲಿ ರಂಗಭೂಮಿಯ ಕಸರತ್ತು ಕಲಿತ ನಯನರವರು ಬಾಲ್ಯದಲ್ಲಿ ಯಥೇಚ್ಛವಾಗಿ ನಟಿಸಿದ್ದು ಗುರುತಿಸಿಕೊಂಡಿದ್ದು ಹುಡುಗನ ಪಾತ್ರದಲ್ಲಿಯೇ. ಕಾಲ ನಂತರ ಹೆಣ್ಣು ಪಾತ್ರಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡರು. ಆನಂತರ ಆಂಜನೇಯ ರವರ ನಿರ್ದೇಶನದ “ಕೆಂಪೇಗೌಡ ಜೀವನಾಧಾರಿತ ನಾಟಕ” ದಲ್ಲಿ ಲಕ್ಷ್ಮೀ ಪಾತ್ರದಲ್ಲಿ ಗುರುತಿಸಿಕೊಂಡು ನಂತರ ತನ್ನದೇ ಒಂದು “ರಂಗಪಯಣ” ಎಂಬ ತಂಡವನ್ನು ಕಟ್ಟಿ ಬೆಳೆಸಿ ಇಂದು ಹನ್ನೆರಡು ವರ್ಷದ ತುಂಬು ಸಂಭ್ರಮವನ್ನು ಆಚರಿಸುವ ಮಟ್ಟಿಗೆ ಎಳೆದು ತಂದಿದ್ದಾರೆ.
ಹೀಗೆ ತಂಡ ಕಟ್ಟಿ ರಂಗಭೂಮಿಯ ದಾರಿಯಲ್ಲಿ ಸಾಗುತ್ತಿರುವಾಗಲೇ ಜೊತೆಯಾದವರು ರಂಗಕರ್ಮಿ ರಾಜ್ ಗುರು. ಇಬ್ಬರೂ ಒಂದೇ ರಂಗದಲ್ಲಿದ್ದ ಕಾರಣ ಪರಿಚಯವಾಗಿ, ಪರಿಚಯ ಪ್ರೇಮವಾಗಿ ನಂತರ ಗುರು ಹಿರಿಯರ ನೇತೃತ್ವದಲ್ಲಿ ಕುವೆಂಪು ಅವರ “ಮಂತ್ರ ಮಾಂಗಲ್ಯ” ಪ್ರಕಾರದಲ್ಲಿ ವಿವಾಹವಾದರು. ನಂತರದ ದಿನಗಳಲ್ಲಿ ರಂಗಭೂಮಿಯ ವಿಚಾರದಲ್ಲಿ ಒಬ್ಬರಿಗೆ ಒಬ್ಬರ ಸಾಥ್. ಯಾವ ಮಟ್ಟಿಗೆ ಎಂದರೆ ಒಂದು ನಾಟಕಕ್ಕೆ ನಿರ್ದೇಶನ ಮತ್ತು ಸಂಗೀತದ ನಿರ್ದೇಶನ ರಾಜ್ ಗುರು ರವರು ಮಾಡಿದರೆ ಆ ನಾಟಕದ ವಸ್ತ್ರ ವಿನ್ಯಾಸ ಮತ್ತು ನಿರ್ವಹಣೆ ನಯನ ರವರು ನಿರ್ವಹಿಸುತ್ತಾರೆ ಜೊತೆಗೆ ಅಭಿನಯಿದ್ದಾರೆ. ಹೀಗೆ ಇವರಿಬ್ಬರ ನೇತೃತ್ವದಲ್ಲಿ ಮೂಡಿಬಂದ ನಾಟಕಗಳು ಇಂದು ಇತಿಹಾಸ.
ಚಂದ್ರಗಿರಿ ತೀರದಲ್ಲಿ, ಹೇ ರಾಮ್, ಗುಲಾಬಿಗ್ಯಾಂಗ್ ಭಾಗ-1 ಮತ್ತು ಗುಲಾಬಿ ಗ್ಯಾಂಗ್ ಭಾಗ-2, ಭೂಮಿ, ಶ್ರದ್ಧಾ, ಅಕ್ಷರದವ್ವ ಇವರ ಪ್ರಸಿದ್ಧ ನಾಟಕಗಳು.
ಹೀಗೆ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಇವರು ಇಲ್ಲಿಯ ತನಕ ಸರಿಸುಮಾರು 800 ರಿಂದ 900 ವೇದಿಕೆಗಳಲ್ಲಿ ಹಲವಾರು ನಾಟಕಗಳಲ್ಲಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೇ ಕರ್ನಾಟಕ ಹೊರತು ಪಡಿಸಿ ಮುಂಬೈ, ದೆಹಲಿ ಗಳಲ್ಲೂ ನಾಟಕ ಪ್ರಯೋಗ ಮಾಡಿದ್ದಾರೆ.
ಇವರ ಈ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನ ಸಹಯೋಗದಲ್ಲಿ ರಂಗಭೂಮಿಯ “ಮಹಿಳಾ ಸಾಧಕಿ”, ಬಾಲ್ಯದಲ್ಲಿಯೇ ಶ್ರೇಷ್ಠ ನಟ ಹಾಗೂ ನಟಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳು ದೊರೆತಿದೆ. ಅದರಲ್ಲಿ ನಮ್ಮ ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಕೂಡ. ಜೊತೆಗೆ ಇವರ ಸಾಧನೆ ಅಡಿಪಾಯದ ಮೇಲೆ ಅಂಚೆ ಕಛೇರಿಯಲ್ಲಿ ಇವರದೇ ಹೆಸರಿನ ಸ್ಟಾಂಪ್ ಕೂಡ ಸರ್ಕಾರ ನೀಡಿದೆ.
ಜೊತೆಗೆ ರಾಜ್ ಗುರು ನಿರ್ದೇಶನದ “55 ನಿಮಿಷದ ಒಂದು ಪ್ರೇಮ ಕತೆ” ಎಂಬ ನಾಟಕವು ಲಿಮ್ಕಾ ದಾಖಲೆಯಾಗಿದ್ದು ಅದರ ನೇತೃತ್ವ ವಹಿಸಿದ್ದು ಕೂಡ ಇದೇ ನಯನ.
ಇಷ್ಟಕ್ಕೆ ಸುಸ್ತಾಗದ ಇವರು ಜುಲೈ 31 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಗಳಿಗಾಗಿ ಹೆಸರಿಲ್ಲದ ಒಂದು ನಾಟಕವನ್ನು, ಜೊತೆಗೆ ಬೇಲೂರು ರಘುನಂದನ್ ರವರು ಬರೆದಿರುವ “ಸಿಂಗಲ್ ಪೇರೆಂಟ್” ಎಂಬೆರೆಡು ಹೊಸ ನಾಟಕಗಳನ್ನು ಸಾರ್ವಜನಿಕವಾಗಿ ಘೋಷಿಸಲಿದ್ದಾರೆ. ಹಾಗೂ ಈ ಎರಡು ನಾಟಕಗಳಲ್ಲಿ ನಯನ ರವರು ಬಣ್ಣ ಹಚ್ಚಲಿದ್ದಾರೆ. ಜೊತೆಗೆ ತಮ್ಮ ಪಾತ್ರದ ಮೂಲಕವೇ ಸಾಮಾಜಿಕ ಸಂದೇಶ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಹೀಗೆ ರಂಗಭೂಮಿಗಾಗಿ ದುಡಿಯುವ, ಮಿಡಿಯುವ ಈ ತುಂಬು ಪ್ರತಿಭೆಗೆ ಬೆಳ್ಳಿ ಮಹೋತ್ಸವದ ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು. ಈ ಜನ್ಮದಿನ ಮತ್ತು ಮಹೋತ್ಸವ ಮತ್ತಷ್ಟು ಹರುಷ, ಹುರುಪು ತುಂಬಲಿ ಎಂದು ಆ ಪ್ರಕೃತಿ ಮಾತೆಯಲ್ಲಿ ಬೇಡುತ್ತೇನೆ.
ಹೀಗೆ ಈ ಎಲ್ಲ ಸಂಭ್ರಮಗಳಿಗೆ ಇಂದು ಕರ್ನಾಟಕ ರಾಜಧಾನಿ ನಗರದಲ್ಲಿ ಈ ಒಟ್ಟು ಸಂಭ್ರಮಗಳ ಆಚರಿಸಲು ಚಿಕ್ಕದಾದ, ಚೊಕ್ಕವಾದ ಹಾಡಿನ ಕಾರ್ಯಕ್ರಮವನ್ನು ಆಯೋಜನೆಗೊಂಡಿದೆ.
ವರದಿ: ಶರತ್ ಎನ್. ಆನೇಕಲ್