ಚಿಕ್ಕಮಗಳೂರು: ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಆರು ಮಂದಿ ನಕ್ಸಲರ ಶರಣಾಗತಿಗೆ ವೇದಿಕೆ ಸಿದ್ಧಪಡಿಸಿದೆ. ಆದರೆ, ಈ ಸಂದರ್ಭದಲ್ಲಿ ನಕ್ಸಲ್ ಶರಣಾಗತಿಯ ವಿಷಯದಲ್ಲಿ ಕೆಲವು ವ್ಯಕ್ತಿಗಳು ಮತ್ತು ಗುಂಪುಗಳು ಸರ್ಕಾರ ನೇಮಿಸಿರುವ ಅಧಿಕೃತ ಸಮಿತಿಯನ್ನು ಬದಿಗೊತ್ತಿ ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಡಾ. ಬಂಜಗೆರೆ ಜಯಪ್ರಕಾಶ್ ಅವರನ್ನು ಒಳಗೊಂಡ ಸಮಿತಿ ಈ ಆಕ್ಷೇಪ ವ್ಯಕ್ತಪಡಿಸಿ, ಅಂತಹ ಪ್ರಯತ್ನ ಕೈಬಿಡುವಂತೆ ಪತ್ರ ಬರೆದಿದ್ದಾರೆ. “ರಸ್ತೆ ಅಪಘಾತದಲ್ಲಿ ಸತ್ತ ಕೋತಿಯ ಶವ ಇಟ್ಟುಕೊಂಡು ತಟ್ಟೆ ಕಾಸು ಆಯುವವರಂತೆ ಸ್ಪರ್ಧೆಗಿಳಿದರೆ ಇವತ್ತಲ್ಲ ನಾಳೆ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆ ನಮ್ಮನ್ನು ಛೀಕರಿಸುತ್ತದೆ,” ಎಂದು ಎಚ್ಚರಿಕೆ ನೀಡಿದೆ.
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಬಳಿಕ ರಾಜ್ಯದಲ್ಲಿ ಅಳಿದುಳಿದ ನಕ್ಸಲೀಯರನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಗಳಿಗೆ ಸ್ವತಃ ಸರ್ಕಾರವೇ ಬೆಂಬಲ ನೀಡಿತ್ತು. ರಾಜ್ಯವನ್ನು ನಕ್ಸಲ್ ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸ್ವತಃ ಮುಖ್ಯಮಂತ್ರಿಗಳು ಹೆಚ್ಚಿನ ಆಸಕ್ತಿ ವಹಿಸಿ ನಕ್ಸಲರು ಶರಣಾಗಬೇಕು ಎಂದು ಕರೆ ಕೊಟ್ಟಿದ್ದರು.
ಹಾಗೆ ನೋಡಿದರೆ, ಕಳೆದ ಒಂದೂವರೆ ಎರಡು ವರ್ಷಗಳಿಂದಲೇ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ಭಾಗವೂ ಸೇರಿದಂತೆ ಸೀಮಿತ ಪ್ರದೇಶಕ್ಕೆ ಸೀಮಿತವಾಗಿದ್ದ ಬೆರಳೆಣಿಕೆಯ ನಕ್ಸಲರು, ಪೊಲೀಸ್ ಕಾರ್ಯಾಚರಣೆಯ ತೀವ್ರತೆ ಮತ್ತು ಕುಸಿದ ತಮ್ಮ ಬಲದ ಹಿನ್ನೆಲೆಯಲ್ಲಿ ಹಿಂಸಾ ಚಳವಳಿಯಲ್ಲಿ ನಂಬಿಕೆ ಕಳೆದುಕೊಂಡು ಭ್ರಮನಿರಸರಾಗಿ ಮುಖ್ಯವಾಹಿನಿಗೆ ಬರುವ ದಾರಿಗಳನ್ನು ಹುಡುಕುತ್ತಿದ್ದರು. ಆ ಹಂತದಲ್ಲಿ ಹೆಣ್ಣುಮಕ್ಕಳೇ ಹೆಚ್ಚಿರುವ ನಕ್ಸಲ್ ತಂಡದವರ ಶರಣಾಗತಿಯ ವಿಷಯದಲ್ಲಿ ಪತ್ರಕರ್ತರು, ವಕೀಲರು, ಲೇಖಕರನ್ನೊಳಗೊಂಡ ಕೆಲವರ ತಂಡ ಆಸಕ್ತಿ ವಹಿಸಿತ್ತು. ಬಳಿಕ ಸರ್ಕಾರದ ಮಟ್ಟದಲ್ಲಿ ನಕ್ಸಲರ ಶರಣಾಗತಿಯ ಪ್ರಸ್ತಾಪವಿಟ್ಟು ಸಮಿತಿ ರಚಿಸುವಂತೆ ಕೋರಲಾಗಿತ್ತು ಕೂಡ.
ಅದರಂತೆ ಸರ್ಕಾರ ಕಳೆದ ವರ್ಷದ ಮಾರ್ಚ್‌ನಲ್ಲಿ ಹಿರಿಯ ಚಿಂತಕ ಡಾ ಬಂಜಗೆರೆ ಜಯಪ್ರಕಾಶ್, ಹಿರಿಯ ಪತ್ರಕರ್ತ ಪಾವರ್ತೀಶ ಬಿಳಿದಾಳೆ ಹಾಗೂ ಹಿರಿಯ ವಕೀಲ ಕೆ ಪಿ ಶ್ರೀಪಾಲ್ ಅವರನ್ನೊಳಗೊಂಡ ʼನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿʼಯನ್ನು ರಚಿಸಿತ್ತು. ಸಮಿತಿ ರಚನೆಯ ಬಳಿಕ ಸದಸ್ಯರು ಕೇರಳ, ತಮಿಳುನಾಡು ಸೇರಿದಂತೆ ನಕ್ಸಲ್ ಚಟುವಟಿಕೆ ಇರುವ ಪ್ರದೇಶಗಳಿಗೆ ಸುತ್ತಾಡಿ, ಅಧ್ಯಯನ ನಡೆಸಿ, ಮಾಹಿತಿ ಕಲೆ ಹಾಕಿ ತೀರಾ ದುರ್ಬಲವಾಗಿದ್ದ ನಕ್ಸಲ್ ತಂಡದ ಶರಣಾಗತಿಗೆ ಪ್ರಯತ್ನ ನಡೆಸಿತ್ತು. ಈ ನಡುವೆ, ಉಡುಪಿ ಜಿಲ್ಲೆಯ ಕಬ್ಬಿನಾಲೆಯಲ್ಲಿ ವಿಕ್ರಂಗೌಡ ಎನ್ಕೌಂಟರ್ ನಡೆದಿತ್ತು.
ಆ ಬಳಿಕ ನಕ್ಸಲ್ ಶರಣಾಗತಿಯ ಪ್ರಕ್ರಿಯೆ ಇನ್ನಷ್ಟು ಚುರುಕುಗೊಂಡಿತ್ತು. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಕಬ್ಬಿನಾಲೆಗೆ ಭೇಟಿ ನೀಡಿ, ಅಲ್ಲಿನ ಎನ್ಕೌಂಟರ್ ಮತ್ತು ನಕ್ಸಲರ ಕುರಿತು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿತ್ತು. ಸಮಿತಿಯ ನಿರಂತರ ಪ್ರಯತ್ನಗಳ ಫಲವಾಗಿ ಇದೀಗ ಮೂವರು ಮಹಿಳೆಯರು ಸೇರಿ ಆರು ಮಂದಿ ನಕ್ಸಲರ ಶರಣಾಗತಿಗೆ ಬಹುತೇಕ ಮುಹೂರ್ತ ನಿಗದಿಯಾಗಿದೆ. ಬುಧವಾರ ಚಿಕ್ಕಮಗಳೂರಿನಲ್ಲಿ ಆರೂ ಮಂದಿ ಶರಣಾಗಲಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಈ ನಡುವೆ ʼನಕ್ಸಲರ ಶರಣಾಗತಿಯನ್ನು ಒಂದು ದೊಡ್ಡ ʼಈವೆಂಟ್ʼ ಎಂಬಂತೆ ಬಿಂಬಿಸಿ, ತಮ್ಮಿಂದಲೇ ಅವರು ಶರಣಾಗುತ್ತಿದ್ದಾರೆ. ಶರಣಾಗತಿಯ ರೂವಾರಿಗಳು ತಾವೇ ಎಂದು ಬಿಂಬಿಸಿಕೊಂಡು, ಅದರ ಕ್ರೆಡಿಟ್ ತೆಗೆದುಕೊಂಡು ತನ್ನ ಸಾಮಾಜಿಕ ಮಾನ್ಯತೆ ಮತ್ತು ಪ್ರಸ್ತುತತೆಯನ್ನು ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಗುಂಪೊಂದು ಪ್ರಯತ್ನ ನಡೆಸಿದೆʼ ಎಂಬ ವಿಷಯ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿಯ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಮುಖ್ಯವಾಹಿನಿಗೆ ಬರಲು ನಕ್ಸಲ್ ಹೋರಾಟಗಾರರ ಗ್ರೀನ್ ಸಿಗ್ನಲ್!
ಅಧಿಕೃತ ಸಮಿತಿಯನ್ನು ಬದಿಗೊತ್ತಿ ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸುವುದು, ಸಭೆಗಳಲ್ಲಿ ಸಮಿತಿಯ ಬದಲಾಗಿ ತಾವೇ ಅಭಿಪ್ರಾಯಗಳನ್ನು ಮಂಡಿಸುವುದು, ಸಮಿತಿಯ ಸದಸ್ಯರನ್ನು ಹೊರತುಪಡಿಸಿ ತಮ್ಮದೇ ವ್ಯಕ್ತಿಗಳನ್ನು ಶರಣಾಗತಿ ಪ್ರಕ್ರಿಯೆಯ ಮುಂಚೂಣಿಯಲ್ಲಿ ಇರುವಂತೆ ಮಾಡುವ ಪ್ರಯತ್ನಗಳು, ಶರಣಾಗತಿ ಕುರಿತ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ ಪ್ರಚಾರ ಪಡೆಯವುದು ಮುಂತಾದ ಆ ಗುಂಪಿನ ಪ್ರಯತ್ನಗಳು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ತೀವ್ರ ಅಸಮಾಧಾನಕ್ಕೆ, ಆಕ್ಷೇಪಕ್ಕೆ ಕಾರಣವಾಗಿವೆ.
ಆ ಹಿನ್ನೆಲೆಯಲ್ಲಿ ʼನಕ್ಸಲ್ ಶರಣಾಗತಿಯ ವಿಷಯವನ್ನು ಸ್ವಹಿತಾಸಕ್ತಿಗಾಗಿ, ಪ್ರಚಾರಕ್ಕಾಗಿ ಯಾರೂ ಬಳಸಿಕೊಳ್ಳಬಾರದು. ಈ ವಿಷಯದಲ್ಲಿ ಘನತೆಯಿಂದ ವರ್ತಿಸಬೇಕಿದೆ. ಹಿತಾಸಕ್ತಿ ಲಾಭದ ಪ್ರವೃತ್ತಿಯನ್ನು ತೋರಬಾರದುʼ ಎಂದು ನಕ್ಸಲ್ ಶರಣಾಗತಿ ಸಮಿತಿಯ ಹಿರಿಯ ಸದಸ್ಯರು, ಅಂತಹ ಪ್ರಯತ್ನ ನಡೆಸುತ್ತಿರುವ ವೇದಿಕೆಯವರಿಗೆ ಪತ್ರವನ್ನೂ ಬರೆದಿದ್ದಾರೆ.
ಆ ಪತ್ರದಲ್ಲಿ ಅವರು, “ನಕ್ಸಲರು ಮುಖ್ಯವಾಹಿನಿಗೆ ಬರಲು ನಾವು ಕಾರಣರಲ್ಲ; ಸನ್ನಿವೇಶ ನಿರ್ಮಿಸಿದ ಹಿನ್ನಡೆ ಹಾಗೂ ಪೊಲೀಸ್ ಕಾರ್ಯಾಚರಣೆಯ ಒತ್ತಡ ಇವುಗಳಿಂದ ಅವರು ಅನಿವಾರ್ಯವಾಗಿ ಹೊರಬರುತ್ತಿದ್ದಾರೆ. ಅವರನ್ನು ಈಗ ಬರಬೇಡಿ ಎಂದರೂ ಅವರು ಹಿಂದೆ ಹೋವುವವರಲ್ಲ, ಕೆಲ ತಿಂಗಳ ಹಿಂದೆ ಬನ್ನಿ ಎಂದರೂ ಬರುತ್ತಿರಲಿಲ್ಲ. ಈಗ ನಮ್ಮ ಚಾಣಾಕ್ಷತನ, ಜಾಣತನ, ಚಾಲಾಕಿತನಗಳ ಪ್ರದರ್ಶನಕ್ಕೆ ಯಾರೂ ಪ್ರಯತ್ನಿಸುವುದು ಸರಿಯಲ್ಲ” ಎಂದು ಸ್ಪಷ್ಟವಾಗಿ ಕೆಲವು ವ್ಯಕ್ತಿಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಛೀಮಾರಿ ಹಾಕಿದ್ದಾರೆ.
ಅಲ್ಲದೆ, “ಅವರ ಶರಣಾಗತಿಯ ಈ ಸನ್ನಿವೇಶದಲ್ಲಿ ನಾವು ನಮ್ಮ ಖ್ಯಾತಿ ಮತ್ತು ಸಾಮಾಜಿಕ ಮಾನ್ಯತೆಗಳ ಸಮೀಕರಣಕ್ಕೆ ಪ್ರಯತ್ನಿಸುವುದು ಕನಿಕರ ಹುಟ್ಟಿಸುತ್ತದೆ. ಟ್ರೋಫಿ ಗೆದ್ದ ಪಂದ್ಯದಂತೆ ಯಾವ ವ್ಯಕ್ತಿ, ಗುಂಪು ಪ್ರಯತ್ನಿಸುವುದು ನಿರ್ಲಜ್ಜೆಯ ಪ್ರದರ್ಶನ. …. ರಸ್ತೆ ಅಪಘಾತದಲ್ಲಿ ಸತ್ತ ಕೋತಿಯ ಶವ ಇಟ್ಟುಕೊಂಡು ತಟ್ಟೆ ಕಾಸು ಆಯುವವರಂತೆ ನಾವು ಸ್ಪರ್ಧೆಗಿಳಿದರೆ ಇವತ್ತಲ್ಲ ನಾಳೆ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆ ನಮ್ಮನ್ನು ಛೀಕರಿಸುತ್ತದೆ” ಎಂದೂ ಅವರು ಎಚ್ಚರಿಸಿದ್ದಾರೆ.
ಈ ಬೆಳವಣಿಗೆ ಕುರಿತು ʼದ ಫೆಡರಲ್ ಕರ್ನಾಟಕʼ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಹಿರಿಯ ಪತ್ರಕರ್ತ ಪಾರ್ವತೀಶ ಬಿಳಿದಾಳೆ ಅವರನ್ನು ಸಂಪರ್ಕಿಸಿದಾಗ ಅವರು, “ಹೌದು, ಸಮಿತಿ ಕಳೆದ ಕೆಲವು ತಿಂಗಳುಗಳಿಂದ ನಿರಂತರ ಪ್ರಯತ್ನ ನಡೆಸಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ನಡೆಸಿದೆ. ಇದೀಗ ಕರ್ನಾಟಕವನ್ನು ನಕ್ಸಲ್ಮುಕ್ತಗೊಳಿಸುವ ನಿರ್ಣಾಯಕ ಹಂತಕ್ಕೆ ಬಂದಿದ್ದೇವೆ. ಆದರೆ, ಈವರೆಗೆ ಈ ವಿಷಯದಲ್ಲಿ ಕಾಣಿಸಿಕೊಳ್ಳದೇ ಉಳಿದಿದ್ದ ಕೆಲವು ವ್ಯಕ್ತಿಗಳು ʼಶಾಂತಿಗಾಗಿ ನಾಗರಿಕ ವೇದಿಕೆʼ ಹೆಸರಿನಲ್ಲಿ ಇದೀಗ ಸ್ವಹಿತಾಸಕ್ತಿಗಾಗಿ, ಪ್ರಚಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇದು ತರವಲ್ಲ. ಈಗಾಗಲೇ ನಕ್ಸಲರು ತಮ್ಮನ್ನು ಘನತೆಯಿಂದ ಕಾಣುವಂತೆ, ತಮ್ಮ ಶರಣಾಗತಿಯನ್ನು ಘನತೆಯಿಂದ ನಡೆಸುವಂತೆ ಕೋರಿ ಸಮಿತಿಗೆ ಪತ್ರ ಬರೆದಿದ್ದಾರೆ. ಆ ಸೂಕ್ಷ್ಮತೆ ಅರಿತು ವರ್ತಿಸಬೇಕಾದ ನಾಗರಿಕ ಸಮಾಜದ ಪ್ರತಿನಿಧಿಗಳು ಎಂದು ಸ್ವಯಂಘೋಷಿಸಿಕೊಂಡವರು, ಪ್ರಚಾರಕ್ಕಾಗಿ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದಾರೆ. ಇಂತಹ ಪ್ರಯತ್ನಗಳಿಗೆ ಸಮಿತಿ ಆಕ್ಷೇಪವೆತ್ತಿದೆ” ಎಂದು ಖಚಿತಪಡಿಸಿದರು.
ನಕ್ಸಲ್ ಶರಣಾಗತಿಯ ವಿಷಯದ ಕುರಿತು ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಕೂಡ ʼಎದ್ದೇಳು ಕರ್ನಾಟಕʼ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತೆ ತಾರಾ ರಾವ್ ಎಂಬುವರನ್ನು ಏಕಾಏಕಿ ಅಧಿಕಾರಿಗಳೊಂದಿಗೆ ಮಾತುಕತೆಗೆ ಕೂರಿಸಿ, ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿಯ ಸದಸ್ಯರಿಗೆ ಕೂರಲು ಆಸನವನ್ನೂ ನೀಡದೆ ಅವಮಾನಿಸಿದ ಘಟನೆ ನಡೆದಿತ್ತು. ಆ ವೇಳೆಯೇ ಸಮಿತಿ ಸದಸ್ಯರು ಸರ್ಕಾರವೇ ನೇಮಕ ಮಾಡಿದ ಅಧಿಕೃತ ಸಮಿತಿಯನ್ನು ಬದಿಗೊತ್ತಿ ಯಾವ ಅಧಿಕೃತತೆಯಾಗಲೀ, ಅನುಭವವಾಗಲೀ ಇಲ್ಲದ ವ್ಯಕ್ತಿಯನ್ನು ಮಾತುಕತೆಯಲ್ಲಿ ಒಳಗೊಂಡಿರುವ ಕ್ರಮವನ್ನು ಪ್ರಶ್ನಿಸಿ, ಪ್ರತಿಭಟಿಸಿದ್ದರು ಎನ್ನಲಾಗಿದೆ.
ಇದೀಗ ಶರಣಾಗತಿಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ʼಶಾಂತಿಗಾಗಿ ನಾಗರಿಕ ವೇದಿಕೆʼಯ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಸಾಮಾಜಿಕ ಮಾನ್ಯತೆ ಮತ್ತು ಪ್ರಚಾರ ಪಡೆಯುವ ವೈಯಕ್ತಿಕ ಹಿತಾಸಕ್ತಿಗಾಗಿ ಶರಣಾಗತಿಯ ಘಟನೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದು ಇಡೀ ಶರಣಾಗತಿ ಪ್ರಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂಬ ಆತಂಕ ಸಮಿತಿಯದ್ದು.
ಒಟ್ಟಾರೆ, “ರಸ್ತೆ ಅಪಘಾತದಲ್ಲಿ ಸತ್ತ ಕೋತಿಯ ಶವ ಇಟ್ಟುಕೊಂಡು ತಟ್ಟೆ ಕಾಸು ಆಯುವವರಂತೆ ಸ್ಪರ್ಧೆಗಿಳಿದಿರುವ” ಬಗ್ಗೆ ಸಮಿತಿ ಹಿರಿಯ ಸದಸ್ಯರೇ ಆತಂಕ ವ್ಯಕ್ತಪಡಿಸುವ ಮಟ್ಟಿಗೆ ನಕ್ಸಲ್ ಶರಣಾಗತಿ ಪ್ರಕ್ರಿಯೆಯನ್ನೇ ಪ್ರಹಸನ ಮಾಡುವ ಅಪಾಯ ಎದುರಾಗಿದೆ.
ಇದನ್ನೂ ನೋಡಿ : ಬಸ್ ಪ್ರಯಾಣ ದರ ಹೆಚ್ಚಳ : ಫ್ರೀಡಂ ಪಾರ್ಕ್ ಬಳಿ ಸಿಪಿಐ(ಎಂ) ಪ್ರತಿಭಟನೆ Janashakthi Media