ನವದೆಹಲಿ : ಕೋಮು ದ್ವೇಷ ಹರಡುವ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ, ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು ಟೈಮ್ಸ್ ನೌ, ನ್ಯೂಸ್ 18ಗೆ ದಂಡ ಹಾಕಿದ್ದು, ಆಜ್‌ತಕ್‌ಗೆ ಎಚ್ಚರಿಕೆ ನೀಡಿದೆ ಎಂದು ದಿ ವೈರ್ ವರದಿ ಮಾಡಿದೆ. ಕೋಮು
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅಧ್ಯಕ್ಷರಾಗಿರುವ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ʼಟೈಮ್ಸ್ ನೌ ನವಭಾರತ್ʼ ಹಾಗೂ ʼನ್ಯೂಸ್ 18ʼ ಇಂಡಿಯಾಗೆ ಕ್ರಮವಾಗಿ ರೂ. 1 ಲಕ್ಷ ಮತ್ತು ರೂ. 50,000 ದಂಡ ವಿಧಿಸಲಾಗಿದೆ ಹಾಗೂ ಆಜ್ ತಕ್‌ಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಮೂರು ವಾಹಿನಿಗಳಿಗೆ ಮತೀಯ ದ್ವೇಷ ಹರಡುವಂತಹ ನಿರ್ದಿಷ್ಟ ಕಾರ್ಯಕ್ರಮಗಳ ಆನ್‌ಲೈನ್ ಆವೃತ್ತಿಗಳನ್ನು ತೆಗೆದುಹಾಕುವಂತೆ ಆದೇಶಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಇಂದ್ರಜಿತ್ ಘೋರ್ಪಡೆ ಅವರು ದಾಖಲಿಸಿದ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂರು ವಾಹಿನಿಗಳು ಕೋಮು ಸೌಹಾರ್ದತೆ ಕೆಡಿಸುವ ಮತ್ತು ಮತೀಯವಾದವನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಇಂದ್ರಜೀತ್ ಘೋರ್ಪಡೆ ದೂರು ದಾಖಲಿಸಿದ್ದರು.
ಇದನ್ನೂ ಓದಿ : ಸುಳ್ಳು ಹೇಳಿದ ಬಿಜೆಪಿ ನಾಯಕರು; ಅದನ್ನು ಹರಡಿದ ಪ್ರಜಾವಾಣಿ ಸಹಿತ ಕನ್ನಡದ ಮಾಧ್ಯಮಗಳು!
ಟೈಮ್ಸ್ ನೌ ನವಭಾರತ್, ಮೆಗಾ ಟೈಮ್ಸ್ ಗ್ರೂಪ್‌ನ ಭಾಗವಾಗಿದ್ದು, ಇದರ ನಿರೂಪಕ ಹಿಮಾಂಶು ದೀಕ್ಷಿತ್, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮು ದ್ವೇಷ ಹರಡಿದ್ದಾರೆ. ಅಂತರ್-ಧರ್ಮೀಯ ಸಂಬಂಧಗಳನ್ನು “ಲವ್ ಜಿಹಾದ್” ಎಂದು ಕರೆದಿದ್ದಾರೆ ಎಂಬ ಆರೋಪದ ಮೇಲೆ ದಂಡ ವಿಧಿಸಲಾಗಿದೆ.
ನ್ಯೂಸ್ 18 ಇಂಡಿಯಾ ಉದ್ಯಮಿ ಮುಖೇಶ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್‌ನ ಭಾಗವಾಗಿದೆ. ಈ ಚಾನೆಲ್‌ನ ಮೂರು ಶೋಗಳಿಗೆ ದಂಡ ವಿಧಿಸಲಾಗಿದೆ. ಈ ಪೈಕಿ ಎರಡು ಶೋಗಳನ್ನು ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಿರೂಪಿಸಿದ್ದಾರೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು “ಲವ್ ಜಿಹಾದ್” ಎಂದು ಆರೋಪಿಸಿ ಒಂದು ಸಮುದಾಯದ ವಿರುದ್ಧ ಕೋಮು ದ್ವೇಷ ಹರಡಿದ್ದಕ್ಕೆ ಈ ಚಾನೆಲ್‌ಗೆ ದಂಡ ವಿಧಿಸಲಾಗಿದೆ.
ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್ ಚಾನೆಲ್‌ನಲ್ಲಿ ಸುಧೀರ್ ಚೌಧರಿ ನಿರೂಪಣೆ ಮಾಡಿರುವ ಕಾರ್ಯಕ್ರಮವೊಂದಕ್ಕೆ ಎಚ್ಚರಿಕೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಮನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ಸುದ್ದಿ ಹೇಳುವಾಗ ಒಂದು ನಿರ್ದಿಷ್ಟ ಸಮುದಾಯದ ಗುರಿಯಾಗಿಸಲಾಗಿತ್ತು.
ಕಾರ್ಯಕ್ರಮ ಪ್ರಸಾರ ಮಾಡುವಾಗ ನಿಷ್ಪಕ್ಷಪಾತತನ, ತಟಸ್ಥ ನಿಲುವು ಹಾಗು ನಿಖರತೆಯನ್ನು ಕಾಪಾಡಬೇಕೆಂಬ ನೀತಿ ಸಂಹಿತ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.
ʼಲವ್ ಜಿಹಾದ್ʼ ಎಂಬ ಪದವನ್ನು ಗಂಭೀರ ಅವಲೋಕನದ ನಂತರ ಬಳಸಬೇಕು ಇಲ್ಲದೇ ಹೋದಲ್ಲಿ ಅದು ದೇಶದ ಜಾತ್ಯತೀತ ಪರಿಕಲ್ಪನೆಗೆ ಮಾರಕವಾಗಬಹುದು ಎಂದು ಎನ್‌ಬಿಡಿಎಸ್‌ಎ ಹೇಳಿದೆ.
ವಿಡಿಯೋ ನೋಡಿ : ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ಹಾರಿಸಿದ್ದು ಯಾರು?!ಗೋದಿ ಮೀಡಿಯಾಗಳೇಕೆ ದಾರಿ ತಪ್ಪಿಸುತ್ತಿವೆ?!