ಬೆಂಗಳೂರು : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಹಾಗೂ ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲವನ್ನು ಘೋಷಿಸಿ ಇದೇ ತಿಂಗಳ 27ರಂದು (ಇಂದು) ವಿದ್ಯಾರ್ಥಿ ಯುವಜನ, ರೈತರು, ಕಾರ್ಮಿಕರುಮತ್ತುಕೃಷಿಕೂಲಿಕಾರರಸಂಘಂಟನೆಗಳು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ, ಪ್ರತಿಷ್ಠೆ ತಂದುಕೊಡುತ್ತಿರುವ ಒಲಿಂಪಿಕ್ಸ್ ಮತ್ತಿತರ ಪದಕ ವಿಜೇತ ಕುಸ್ತಿಪಟುಗಳು, ಅದರಲ್ಲೂ ಮಹಿಳಾ ಕುಸ್ತಿಪಟುಗಳು ಎಪ್ರಿಲ್ 24ರಿಂದ ಎರಡನೇ ಬಾರಿಗೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತ್ತಿದ್ದಾರೆ. ಭಾರತದ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರಿನ ಮೇಲೆ ಮೂರು ತಿಂಗಳ ನಂತರವೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ತಾವು ಮತ್ತೆ ಈ ಪ್ರತಿಭಟನೆಗೆ ಇಳಿದಿರುವುದಾಗಿ ಸಂಘಟನೆಗಳು ತಿಳಿಸಿವೆ.
ಎಪ್ರಿಲ್ 26ರಂದು ರೈತರು, ಕಾರ್ಮಿಕರು, ಕೃಷಿ ಕಾರ್ಮಿಕರು, ಯುವಕರು ಮತ್ತು ವಿದ್ಯಾರ್ಥಿಗಳ ಒಂದು ಜಂಟಿ ನಿಯೋಗ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದು, ದೇಶಕ್ಕೆ ಗೌರವ, ಪ್ರತಿಷ್ಠೆ ತಂದುಕೊಡುತ್ತಿರುವ ನಮ್ಮ ಅಗ್ರಮಾನ್ಯ ಕ್ರೀಡಾಪಟುಗಳು ನ್ಯಾಯಕ್ಕಾಗಿ ಆಗ್ರಹಿಸಿ ಜಂತರ್‌ಮಂತರ್‌ನಲ್ಲಿ ಧರಣಿ ಕುಳಿತಿರುವುದು ದುರದೃಷ್ಟಕರ ಎಂದಿರುವ ನಿಯೋಗ, ದೂರು ನೀಡಿ, ಮೂರು ತಿಂಗಳ ಹಿಂದೆ ಇದೇ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದ ನಂತರವೂ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ, ನ್ಯಾಯಯುತ ತನಿಖೆಯನ್ನು ಮಾತ್ರ ಕೇಳುತ್ತಿದ್ದೇವೆ ಎನ್ನುವ ಪ್ರತಿಭಟನಾ ನಿರತ ಕುಸ್ತಿಪಟುಗಳು ಮಾಡಿರುವ ಆರೋಪಗಳನ್ನು ತನಿಖೆ ಮಾಡಿದ ಮೇಲುಸ್ತುವಾರಿ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಬಿಜೆಪಿಯಿಂದ “ಬೇಟಿ ಬಚಾವೋ ಬೇಟಿ ಪಢಾವೋ” ಅಭಿಯಾನಕ್ಕೆ ಅವಮಾನ :
ಡಬ್ಲ್ಯುಎಫ್‌ಐ ಮುಖ್ಯಸ್ಥರು ಮತ್ತು ಡಬ್ಲ್ಯುಎಫ್‌ಐನಿಂದ ನೇಮಕಗೊಂಡ ಇತರ ಕೆಲವು ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಮತ್ತು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಪ್ರಮುಖ ಮಹಿಳಾ ಕುಸ್ತಿಪಟುಗಳ ದೂರು ಅತ್ಯಂತ ಆತಂಕಕಾರಿ. ಒಂದೆಡೆ ಕೇಂದ್ರ ಸರ್ಕಾರವು ತನ್ನ “ಬೇಟಿ ಬಚಾವೋ ಬೇಟಿ ಪಢಾವೋ” ಅಭಿಯಾನದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಈ ಘೋರ ಅಪರಾಧದ ಆರೋಪಕ್ಕೆ ಒಳಗಾಗಿರುವ ಆಳುವ ಪಕ್ಷದ ಸಂಸದರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಇದು ಬರಿಯ ಬೂಟಾಟಿಕೆ ಎಂದು ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತಾವು ಹಿಂದೆ ಸರಿಯುವುದಿಲ್ಲ ಎಂದು ದೇಶದ ಉನ್ನತ ಕುಸ್ತಿಪಟುಗಳು ತಮ್ಮ ನಿಯೋಗಕ್ಕೆ ತಿಳಿಸಿರುವುದಾಗಿ ಅದು ಹೇಳಿದೆ.
ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿರುವ ನಿಯೋಗ, ಕಿರುಕುಳ ಮತ್ತು ಶೋಷಣೆಯ ಆರೋಪಗಳನ್ನು ಸರಿಯಾಗಿ ತನಿಖೆ ಮಾಡಬೇಕು ಮತ್ತು ನ್ಯಾಯವನ್ನು ನಿರಾಕರಿಸಬಾರದು, ಇದು ನಮ್ಮ ಭವಿಷ್ಯದ ಕ್ರೀಡಾಪಟುಗಳಿಗೆ ಭಯಪಡಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಸಲು ಹಿಂದೇಟು ಹಾಕಲು ಕಾರಣವಾಗಬಾರದು ಎಂದು ಸರಕಾರವನ್ನು ಆಗ್ರಹಿಸಿದೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಉಪಾಧ್ಯಕ್ಷ ಹನ್ನನ್ ಮೊಲ್ಲಾ, ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್, ಸಿಐಟಿಯು ಕಾರ್ಯದರ್ಶಿ ಎ ಆರ್ ಸಿಂಧು , ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲುಬ್ಲ್ಯುಯು)ದ ಕಾರ್ಯದರ್ಶಿ ವಿಕ್ರಮ್ ಸಿಂಗ್ ಸಂಸತ್ ಸದಸ್ಯ ಎ ಎ ರಹೀಂ, ಡಿವೈಎಫ್‌ಐ ಪ್ರಧಾನ ಕಾರ್ಯದರ್ಶಿ ಹಿಮಂಗರಾಜ್ ಭಟ್ಟಾಚಾರ್ಯ ಮತ್ತು ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮಯೂಖ್ ಬಿಶ್ವಾಸ್ ಈ ನಿಯೋಗದಲ್ಲಿದ್ದರು.
ಇದನ್ನೂ ಓದಿ : ಲೈಂಗಿಕ ಕಿರುಕುಳದ ಆರೋಪ : WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
“ನಮ್ಮ ಕ್ರೀಡಾಪಟುಗಳಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಈ ದೇಶದ ರೈತರು, ಕಾರ್ಮಿಕರು, ಯುವಕರು ಮತ್ತು ವಿದ್ಯಾರ್ಥಿಗಳು ನಮ್ಮ ಗೌರವಾನ್ವಿತ ಕ್ರೀಡಾಪಟುಗಳನ್ನು ಘನತೆ ಮತ್ತು ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ಬೆಂಬಲಿಸುತ್ತಾರೆ ಎಂದು ನಾವು ಭರವಸೆ ನೀಡುತ್ತೇವೆ” ಎಂದಿರುವ ಈ ನಿಯೋಗ, ಎಐಕೆಎಸ್, ಸಿಐಟಿಯು, ಎಐಎಡಬ್ಲ್ಯುಯು, ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಇಂದು 2023 ರಂದು ಪ್ರತಿಭಟನಾ-ನಿರತ ಕ್ರೀಡಾಪಟುಗಳಿಗೆ ಬೆಂಬಲವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ ಎಂದು ಹೇಳಿದೆ.