ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಂಗನಾ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ʻʻ ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ಓಡಾಡುವವರಿಗೆ ಏನು ಗೊತ್ತಿದೆ ಗಾಂಧಿಜಿ ಮೌಲ್ಯʼʼ ನಟಿ ಕಂಗನಾ ರನೌತ್ ಹೆಸರು ಹೇಳದೇ ಅವರಿಗೆ ತಿರುಗೇಟು ನೀಡಿದರು.
75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ʻಮಹಾತ್ಮ ಗಾಂಧಿ ಹುತಾತ್ಮರಲ್ಲ; ಭವಿಷ್ಯದ ಬೆಳಕುʼ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ನರಿಗಳು ಬಂದು ಕುರ್ಚಿಯಲ್ಲಿ ಕುಳಿತಿವೆ. ನಾವು ಸಿಂಹದ ಮರಿಗಳು, ನರಿಗಳಿಗೆ ಅಂಜುವುದು ಬೇಡ. ಇವರದ್ದೆಲ್ಲ ಸ್ವಲ್ಪ ದಿನ ನಡೆಯಬಹುದಷ್ಟೇ, ನಾವು ಕಾದು ಮುನ್ನುಗ್ಗೋಣʼ ಎಂದು ಕರೆ ನೀಡಿದರು.
ಆರ್ಎಸ್ಎಸ್ನವರು ಸತಿ ಸಹಗಮನ ಪದ್ದತಿಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತಾರೆ. ಅವರು ತಮ್ಮ ಹೆಂಡತಿ ಸತ್ತರೆ ಹೋಗಿ ಸಾಯಬೇಕಲ್ಲವ ಎಂದ ಅವರು, ಆರ್ಯ ಸಮಾಜ ಕಟ್ಟಿದ ಈಶ್ವರ ಚಂದ್ರ ವಿದ್ಯಾ ಸಾಗರ ಅವರನ್ನು ಇವರು ವಿರೋಧಿಸುತ್ತಾರೆ. ಸ್ವಾಮಿ ವಿವೇಕಾನಂದರು ಚಿಕಾಗೋಗೆ ಭಾರತದ ಚುನಾಯಿತ ಪ್ರತಿನಿಧಿಯಾಗಿ ಹೋಗಿರಲಿಲ್ಲ. ಆದರೆ, ಅವರು ಅಲ್ಲಿನ ಕಾರ್ಯಕ್ರಮದಲ್ಲಿ ಕೇವಲ ಭಾಗವಹಿಸಲು ಹೋಗಿದ್ದರು. ಆದರೆ ಈಗ ವಿವೇಕಾನಂದರ ಫೋಟೋ ಪಕ್ಕದಲ್ಲಿ ಮೋದಿ-ಅಮಿತ್ ಶಾ ಫೋಟೊಗಳು ಕಾಣಿಸಿಕೊಳ್ಳುತ್ತಿವೆ. ವಿವೇಕಾನಂದರು ಹೇಳಿದ್ದೇ ಒಂದು ಇವರು ಹೇಳುತ್ತಿರುವುದೇ ಒಂದು ಎಂದು ಹೇಳಿದರು.
ಕಾಂಗ್ರೆಸ್ ಏನೂ ಮಾಡಿಲ್ಲ ಮಾಡಿಲ್ಲ ಎಂದು ಆರೋಪಿಸುವ ನೀವು ಆದರೂ ಏನು ಮಾಡಿದ್ದೀರಿ. ಬ್ರಿಟಿಷರ ವಿರುದ್ದ ಕಾಂಗ್ರೆಸ್ ಹೋರಾಡುತ್ತಿದ್ದಾಗ ನೀವು ಸಂಘದ ಸ್ಥಾಪನೆ ಮಾಡಿದಿರಿ. ನಿಮ್ಮ ಆದರ್ಶ ಏನು? ಎಳೆ ಮಕ್ಕಳನ್ನು ಕರೆದುಕೊಂಡು ಆಟ ಆಡಿಸುವ ಮಕ್ಕಳ ಮನಸ್ಸಲಿ ವಿಷ ತುಂಬುವುದು ನಿಮ್ಮ ಕೆಲಸವಾಗಿಬಿಟ್ಟಿದೆ. ಮನಸ್ಸಿಗೆ ವಿಷ ತುಂಬಿಕೊಂಡ ಮಕ್ಕಳು ವಿವೇಚನೆ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಕ್ವಿಟ್ ಇಂಡಿಯಾ ಚಳವಳಿ ನಡೆಯುವಾಗ ಎಲ್ಲಿದ್ದರೂ ಇವರೆಲ್ಲ?, ಆಗ ಹಿಂದೂ ಮಹಾಸಭಾ ಇರಲಿಲ್ವಾ? ಆರ್ಎಸ್ಎಸ್ ಇರಲಿಲ್ವಾ? ಕಸ್ತೂರ್ ಬಾ ಮೃತಪಟ್ಟಾಗ ನಿಮಗೆ ದುಃಖ ಆಗಲಿಲ್ವಾ? ಈಗ ಭಾರತ್ ಮಾತಾಕೀ ಜೈ ಅನ್ನುವ ನೀವು, ಅಂಬಾನಿ ಭಾರತ ಮಾತೆ ಮತ್ತು ಅದಾನಿ ಮಾತೆಗಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದವರು ಬ್ರಿಟಿಷ್ ಸಂತತಿಗೆ ವಾರಸುದಾರರಲ್ಲ. ಆದರೆ ನೀವು ಬ್ರಿಟಿಷರ ವಾರಸುದಾರರು. ಶಾಂತಿ ಕದಡಿದ ಮುಸಲೋನಿಯ ಶಿಷ್ಯ ಕೆ.ಬಿ.ಹೆಡಗೆವಾರ್ ನಿಮ್ಮವರು. ಹೀಗಾಗಿಯೇ ಸಿಎಎ, ಇನ್ನೊಂದು ಮಗದೊಂದು ತರುತ್ತಿದ್ದೀರಿ. ಬ್ರಿಟಿಷರಿಗೂ ಸಂಘಕ್ಕೂ ಯಾವುದೇ ರೀತಿ ವ್ಯತ್ಯಾಸವಿಲ್ಲವೆಂದರು.
ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿದ ರಮೇಶ್ ಕುಮಾರ್, ಗಾಂಧೀಜಿ ಸತ್ತಿದ್ದು ಹೇಗೆ? ಎಂದರು. ಗಾಂಧೀಜಿ ಬಹುದೊಡ್ಡ ರಾಮ ಭಕ್ತರಾಗಿದ್ದವರು, ಈಗ ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ. ಗಾಂಧಿ ಕೊಂದ ನಾಥೂರಾಂ ಗೋಡ್ಸೆಯ ದೇವಸ್ಥಾನವನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಗಾಂಧಿಯನ್ನು ಕೊಂದಿದ್ದರಿಂದ ನಿಮಗೆ ಸಿಕ್ಕ ಲಾಭವಾದರೂ ಏನು? ಗಾಂಧಿ ತತ್ವ, ಭಗತ್ ಸಿಂಗ್ ರಕ್ತ, ಜಲಿಯನ್ವಾಲಾಬಾಗ್ನಲ್ಲಿ ಚೆಲ್ಲಿದ ದೇಶಭಕ್ತರ ರಕ್ತ ದೇಶದಲ್ಲಿ ಹರಿಯುತ್ತಿದೆ. ನಿಮ್ಮದು ರಕ್ತದ ಮಡುವಿನಲ್ಲಿ ವಿಹಾರ ಮಾಡುತ್ತಿರುವ ದೋಣಿ. ಇದೂ ಒಂದು ಕಾಲ ಅಷ್ಟೇ. ಎಷ್ಟು ದಿನ ನಡೆಯುತ್ತೋ ನಡೆಯಲಿ ಎಂದರು.