ಮೂಡುಬಿದಿರೆ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೇರಳ ಸರಕಾರವು ರಚಿಸಿದ ನಾರಾಯಣಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರವು ನಿರಾಕರಿಸಿರುವುದನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಖಂಡಿಸಿದರು. ಜತೆಗೆ ಕೇಂದ್ರ ಸರಕಾರದ ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ, ಪಾದಯಾತ್ರೆ ನಡೆಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಗುರುಗಳು ಹಿಂದುಳಿದ ವರ್ಗಗಳ ಸುಧಾರಣೆಗೆ ಶ್ರಮಿಸಿದ ಸಮಾಜ ಸುಧಾರಕ. ಅವರ ಕುರಿತ ಸ್ತಬ್ಧಚಿತ್ರವನ್ನು ನಿರಾಕರಿಸುವುದು ಹಿಂದುಳಿದ ವರ್ಗದವರಿಗೆ ಮಾಡಿದ ಅವಮಾನ. ಕೇರಳ ಮಾತ್ರವಲ್ಲದೇ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಅವರ ಅಪಾರ ಅನುಯಾಯಿಗಳಿದ್ದಾರೆ. ಸ್ತಬ್ಧ ಚಿತ್ರ ರಚಿಸುವುದು ಆಯಾಯ ರಾಜ್ಯ ಸರಕಾರಗಳ ನಿರ್ಧಾರವೇ ಹೊರತು ಕೇಂದ್ರ ಸರಕಾರದ್ದಲ್ಲ. ಈ ವಿಷಯದಲ್ಲಿ ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡುವಂತಿಲ್ಲ. ಪಶ್ಚಿಮ ಬಂಗಾಳ ಸರಕಾರವು ರಚಿಸಿದ ಸುಭಾಸ್‌ಚಂದ್ರ ಬೋಸ್ ಅವರ ಸ್ತಬ್ಧಚಿತ್ರವನ್ನು ನಿರಾಕರಿಸಲಾಗಿದೆ. ಕೇಂದ್ರ ಸರಕಾರದ ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ, ಪಾದಯಾತ್ರೆ ನಡೆಸುವುದಾಗಿ ಹೇಳಿದರು.