ಓದಲು ಇಷ್ಟವಿಲ್ಲ ಎಂದು ಪತ್ರ ಬರೆದು ನಾಪತ್ತೆಯಾಗಿದ್ದವರಲ್ಲಿ ನಾಲ್ವರು ಮಕ್ಕಳು ಮಂಗಳೂರಲ್ಲಿ ಪತ್ತೆ

ಮಂಗಳೂರು: ರಾಜಧಾನಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ಕು ಮಂದಿ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳಾದ ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ, ಚಿಂತನ್, ಭೂಮಿ ಎಂಬ ಮಕ್ಕಳುಬೆಂಗಳೂರಿನಿಂದ ಸ್ಲಿಪರ್ ಬಸ್‌ನಲ್ಲಿ ಮಂಗಳೂರು ತಲುಪಿದ್ದರು ಎನ್ನಲಾಗಿದೆ.

ಮಂಗಳೂರಿನ ಅಂಬೇಡ್ಕರ್ ವೃತ್ತ ಸಮೀಪದ ಕೆಎಂಸಿ ಆಸ್ಪತ್ರೆ ಬಳಿ ಪತ್ತೆಯಾದ ನಾಲ್ಕು ಮಕ್ಕಳ ಬಗ್ಗೆ ಅನುಮಾನಗೊಂಡ ಆಟೋ ಚಾಲಕನೊಬ್ಬ ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. “ಮೊದಲು ರೈಲು ಮೂಲಕ ಬೆಳಗಾವಿಗೆ ಹೋಗಿದ್ದೆವು. ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಮೆಜೆಸ್ಟಿಕ್‌ನಿಂದ ಮಂಗಳೂರಿಗೆ ಬಂದಿದ್ದೇವೆ,” ಎಂದು ಮಕ್ಕಳು ಪೊಲೀಸರಿಗೆ ಹೇಳಿದ್ದಾರೆ.

ಇದನ್ನು ಓದಿ: ‘ಕ್ರೀಡಾ ಸಾಧನೆಗೆ ಓದು ಅಡ್ಡಿ’ ಪತ್ರ ಬರೆದಿಟ್ಟು ನಾಪತ್ತೆಯಾದ ಮಕ್ಕಳು

“ನಾವು 4 ಜನ ತುಂಬಾ ಕ್ಲೋಸ್ ಫ್ರೆಂಡ್ಸ್, ನಮ್ಮ ಮನೇಲಿ ಹಾಗೂ ಪರಿಸರದಲ್ಲಿ ನಮ್ಮನ್ನು ನೋಡಿದರೆ ಬೈಯ್ಯುತ್ತಿದ್ದರು. ನಮಗಿಂತ ಚಿಕ್ಕವರ ಮುಂದೆಯೂ ನಮಗೆ ಬೈಯ್ಯುತ್ತಿದ್ದರು. ನಮ್ಮನ್ನು ದೂರ ಮಾಡಿಬಿಡುತ್ತಾರೆ ಅಂತ ನಾವು ಓಡಿ ಹೋಗುವುದಕ್ಕೆ ಪ್ಲಾನ್ ಮಾಡಿದ್ವಿ,” ಎಂದು ಹೇಳಿದ್ದಾರೆ. ಡಿಸಿಪಿ ಹರಿರಾಂ ಶಂಕರ್ ಮಕ್ಕಳನ್ನು ವಿಚಾರಣೆ ಮಾಡುತ್ತಿದ್ದಾರೆ.

ನಾಲ್ವರು ಒಂದೇ ಲೇಔಟ್‌ ನಿವಾಸಿಗಳು

ವಿಚಾರಣೆ ನಂತರ ಮಾತನಾಡಿದ ಡಿಸಿಪಿ ಹರಿರಾಂ ಶಂಕರ್, “ಎಲ್ಲರೂ ಒಟ್ಟಿಗೆ ಆಡುವುದಕ್ಕೆ ಹೋಗುತ್ತಿದ್ದರು. ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಕರು ತಮ್ಮನ್ನು ಹಾಸ್ಟೆಲ್‌ಗೆ ಹಾಕುವ ಭಯವಾಗಿದೆ. ಹೀಗಾಗಿ ಎಲ್ಲರೂ ಒಟ್ಟಿಗೆ ಯಾವುದಾದರೂ ಹಳ್ಳಿಗೆ ಹೋಗಿ ವಾಸಿಸುವ ನಿರ್ಧಾರ ಮಾಡಿದ್ದು, ಪ್ರಯಾಣಕ್ಕೆ ಎಲ್ಲರೂ ಮನೆಯಿಂದ ಹಣ ತಂದಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಮೂಲಕ ಬಂದಿದ್ದಾರೆ. ತಮ್ಮ ಗುರುತನ್ನು ಯಾರೂ ಪತ್ತೆ ಹಚ್ಚಬಾರದೆಂದು ಸಿಮ್ ಕಾರ್ಡ್, ಮೈ ಮೇಲಿದ್ದ ಚಿನ್ನಾಭರಣ ಎಸೆದಿದ್ದಾರೆ. ಮಂಗಳೂರಿನ ಖಾಸಗಿ ಬಸ್ ನಿಲ್ದಾಣದ ಡಸ್ಟ್ ಬಿನ್‌ಗೆ ಎಸೆದಿದ್ದಾರೆ” ಎಂದು ಡಿಸಿಪಿ ಮಾಹಿತಿ ನೀಡಿದರು.

ಆ ವಸ್ತುಗಳೆಲ್ಲವನ್ನೂ ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಈಗಾಗಲೇ ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದೇವೆ. ಬೆಂಗಳೂರಿನಿಂದ ಹೆತ್ತವರು ಮಂಗಳೂರಿಗೆ ಬರುತ್ತಿದ್ದಾರೆ. ಸಣ್ಣ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ. ಆದರೆ ಮಕ್ಕಳನ್ನು ಕರೆತಂದ ಯುವತಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಮಕ್ಕಳ ವಿಚಾರಣೆ ಬಳಿಕ ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.

ಮಕ್ಕಳ ನಾಪತ್ತೆ ಪ್ರಕರಣ ತನಿಖೆ ಕೈಗೊಂಡಿದ್ದ ಬೆಂಗಳೂರು ಪೊಲೀಸರು ಮಕ್ಕಳ ಪೋಷಕರ ಬಳಿಯಿಂದ ಮಕ್ಕಳು ಬರೆದಿಟ್ಟಿದ್ದ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ತಮಗೆ ಓದಿನಲ್ಲಿ ಆಸಕ್ತಿಯಿಲ್ಲದಿದ್ದು ಮನೆಯಲ್ಲಿ ಓದು-ಓದು ಎಂದು ಬಲವಂತ ಮಾಡುವುದರಿಂದ ಬೇಸತ್ತು ಮನೆಬಿಟ್ಟು ಹೋಗುತ್ತಿದ್ದೇವೆ. ಹೆಸರು ಮತ್ತು ಖ್ಯಾತಿ ಗಳಿಸಿ ಹಣ ಸಂಪಾದನೆ ಮಾಡಿದ ನಂತರ ಮನೆಗೆ ಬರುತ್ತೇವೆ ಎಂದು ಬರೆದಿಟ್ಟಿದ್ದರು. ತಮ್ಮನ್ನು ಹುಡುಕಬೇಡಿ ಎಂದು ಮಕ್ಕಳು ಬರೆದಿಟ್ಟಿದ್ದರು ಎನ್ನಲಾಗಿದೆ.

ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ಏಳು ಮಕ್ಕಳು ನಾಪತ್ತೆ

ಎರಡು ಪ್ರತ್ಯೇಕ ಘಟನೆಯಲ್ಲಿ ಏಳು ಮಕ್ಕಳು ‘ಓದಲು ಇಷ್ಟವಿಲ್ಲ, ಕ್ರೀಡೆಯಲ್ಲಿ ಸಾಧನೆ ಮಾಡುತ್ತೇವೆ’ ಎಂದು ಪತ್ರ ಬರೆದಿಟ್ಟು ಮನೆ ತೊರೆದು ನಾಪತ್ತೆಯಾಗಿದ್ದೆ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ನಾಪತ್ತೆಯಾಗಿದ್ದ ಏಳು ಮಂದಿಯಲ್ಲಿ ಮೂವರು ಸೋಮವಾರ ಮುಂಜಾನೆ ಮೆಜೆಸ್ಟಿಕ್‌ ಬಳಿ ಪತ್ತೆಯಾಗಿದ್ದರು. ಮೈಸೂರು ದಸರಾದಲ್ಲಿ ನಡೆಯುವ ಕ್ರೀಡೆ ನೋಡಲು ಮೈಸೂರಿಗೆ ತೆರಳಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಸೌಂದರ್ಯ ಲೇಔಟ್‌ ನಿವಾಸಿಗಳಾದ ಮೂವರು ಮಕ್ಕಳು ಮನೆಯಲ್ಲಿ ಪತ್ರಗಳನ್ನು ಬರೆದಿಟ್ಟು ನಾಪತ್ತೆಯಾಗಿದ್ದರು. ಸೋಮವಾರ ಮುಂಜಾನೆ ಮೆಜೆಸ್ಟಿಕ್‌ ಬಳಿ ಮೂರು ಮಕ್ಕಳು ಪತ್ತೆಯಾದರು. ಇಂದು ಮಂಗಳೂರಿನಲ್ಲಿ ನಾಲ್ಕು ಮಕ್ಕಳು ಪತ್ತೆಯಾಗಿದ್ದಾರೆ.

ಶನಿವಾರ ಮತ್ತು ಭಾನುವಾರ ಮೈಸೂರು ಸಿಟಿಯಲ್ಲಿ ಸುತ್ತಾಡಿ ಸೋಮವಾರ ಮುಂಜಾನೆ ಬೆಂಗಳೂರಿಗೆ ಬಂದಿದ್ದಾರೆ. ಚಿಂದಿ ಆಯುವ ಮತ್ತು ಪತ್ರಿಕೆ ಹಂಚುವವರ ಮಾಹಿತಿ ಆಧರಿಸಿ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಉಪ್ಪಾರಪೇಟೆ ಪೊಲೀಸರು ಮೂವರನ್ನು ಆನಂದ ರಾವ್‌ ವೃತ್ತದಲ್ಲಿ ಪತ್ತೆ ಹಚ್ಚಿದ್ದಾರೆ. ಬಳಿಕ ಬಾಗಲಗುಂಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ಹಸ್ತಾಂತರಿಸಲಾಗಿದೆ.

ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿ ಮಕ್ಕಳು ಕೂಡ ಮನೆಯಿಂದ ನಾಪತ್ತೆಯಾಗಿ ಮಂಗಳೂರಿಗೆ ಹೋಗಲು ನಿರ್ಧರಿಸಿದ್ದರು. ಆ ಪೈಕಿ ಮೂವರು ಮಾತ್ರ ಮೊದಲು ಮೈಸೂರು ದಸರಾಗೆ ತೆರಳಿ ನಂತರ ಮಂಗಳೂರಿಗೆ ಹೋಗಲು ತೀರ್ಮಾನಿಸಿದ್ದರು. ಏಳು ಜನರ ಗುರಿ ಕೂಡ ಒಂದೇ ಆಗಿದ್ದಿದ್ದರಿಂದ ಈ ಎರಡು ಪ್ರಕರಣದ ಎಲ್ಲಾ ವಿದ್ಯಾರ್ಥಿಗಳು ನಾಪತ್ತೆಯಾಗುವ ಮೊದಲೇ ಒಟ್ಟಾಗಿ ತೀರ್ಮಾನಿಸಿರುವ ಸಾಧ್ಯತೆಯೂ ಇದೆ. ಸದ್ಯ ಪೊಲೀಸರು ಏಳು ಜನರನ್ನು ಕೂಡ ತಾಳ್ಮೆಯಿಂದ ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಹೊರತೆಗೆಯಬೇಕಿದೆ. ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡುವ ಅವಶ್ಯಕತೆಯೂ ಇದೆ.

Donate Janashakthi Media

Leave a Reply

Your email address will not be published. Required fields are marked *