ನವದೆಹಲಿ: ಆಗ್ರಾದ ಕಾರ್ಮಿಕನೊಬ್ಬ ಪೊಲೀಸ್ ವಶದಲ್ಲಿರುವಾಗಲೇ ಸಾವನ್ನಪ್ಪಿದ್ದ. ಮೃತ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಲು ಲಕ್ನೋದಿಂದ ಆಗ್ರಾಗೆ ಹೊರಟಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
25 ಲಕ್ಷ ರೂ. ಹಣ ಕದ್ದ ಆರೋಪದ ಮೇಲೆ ಅರುಣ್ ವಾಲ್ಮೀಕಿ ಎಂಬ ಕಾರ್ಮಿಕ ಬಂಧನಕ್ಕೊಳಗಾಗಿದ್ದ, ಅವನು ಅನುಮಾನಸ್ಪಾದವಾಗಿ ಸಾವಿಗೀಡಾಗಿದ್ದಾನೆ. ಇಂದು ಮಧ್ಯಾಹ್ನ ಆಗ್ರಾಕ್ಕೆ ಹೊರಟಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಲಕ್ನೋ-ಆಗ್ರಾ ಎಕ್ಸ್ಪ್ರೆಸ್ ಹೈವೇ ಮಾರ್ಗದ ಟೋಲ್ ಬಳಿ ಪೊಲೀಸರು ತಡೆದಿದ್ದರು.
ಪೊಲೀಸರ ವಶದಲ್ಲಿದ್ದ ಬಡ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾನೆ. ಆತನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಆಗ್ರಾಕ್ಕೆ ತೆರಳುತ್ತಿದೆ. ಆದರೆ ಯೋಗಿ ಸರ್ಕಾರ ನನ್ನನ್ನು ಆಗ್ರಾಕ್ಕೆ ತೆರಳಲು ಬಿಡುತ್ತಿಲ್ಲ. ಇದು ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ವಶದಲ್ಲಿರುವಾಗಲೇ ಕಾರ್ಮಿಕ ಮೃತಪಟ್ಟ ಹಿನ್ನೆಲೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದ್ದು, ಪೊಲೀಸ್ ಠಾಣೆ ಇರುವ ಸುತ್ತಮುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಭೇಟಿಯಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಪೊಲೀಸರು ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮೊದಲು ಲಖೀಂಪುರ ಕೇರಿ ಹಿಂಸಾಚಾರ ನಡೆದ ಸಂದರ್ಭದಲ್ಲೂ ಮೃತಪಟ್ಟ ರೈತರ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದು 3 ದಿನಗಳ ಕಾಲ ಬಂಧನದಲ್ಲಿರಿಸಿದ್ದರು.
ನಾನು ಆಗ್ರಾಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ನಾನು ಎಲ್ಲೇ ಹೋದರೂ ನನ್ನನ್ನು ತಡೆಯುವ ಪ್ರಯತ್ನವಾಗುತ್ತಿದೆ. ಹಾಗಾದರೆ ನಾನು ರೆಸ್ಟೋರೆಂಟ್ನಲ್ಲಿ ಕುಳಿತುಕೊಂಡಿರಬೇಕಾ? ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನಾನು ನನ್ನ ಜವಾಬ್ದಾರಿಯನ್ನು ಮಾಡುವುದು ತಪ್ಪಾ? ನಾನು ಮೃತರ ಕುಟುಂಬದವರನ್ನು ಭೇಟಿಯಾಗಿ ಸಮಾಧಾನ ಹೇಳಿದರೆ ಅದರಲ್ಲಿ ತಪ್ಪೇನಿದೆ? ನನ್ನನ್ನು ನೋಡಿದರೆ ಉತ್ತರ ಪ್ರದೇಶ ಸರ್ಕಾರಕ್ಕೆ ಭಯವೇ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಮೃತ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ನಾನು ಆ ಕುಟುಂಬವನ್ನು ಭೇಟಿ ಮಾಡಲು ಬಯಸುತ್ತೇನೆ. ಉತ್ತರ ಪ್ರದೇಶ ಸರ್ಕಾರವು ಏಕೆ ಹೆದರುತ್ತಿದೆ? ನನ್ನನ್ನು ಏಕೆ ತಡೆಯಲಾಗಿದೆ? ಇಂದು ಭಗವಾನ್ ವಾಲ್ಮೀಕಿ ಜಯಂತಿ. ಬುದ್ಧನ ಬಗ್ಗೆ ಪಿಎಂ ಮೋದಿ ದೊಡ್ಡದಾಗಿ ಮಾತನಾಡಿದರು. ಆದರೆ ಉತ್ತರ ಪ್ರದೇಶದಲ್ಲಿ ಬುದ್ಧನ ಸಂದೇಶದ ಮೇಲೆ ದಾಳಿ ನಡೆಯುತ್ತಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಮಹಿಳಾ ಪೊಲೀಸರು ಅವರೊಂದಿಗೆ ಛಾಯಾಚಿತ್ರ ತೆಗೆದುಕೊಳ್ಳಲು ಮುಗಿಬಿದ್ದ ಘಟನೆಯೂ ನಡೆದಿದೆ.