ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ವಾಟ್ಸಪ್ ಡಿಪಿಯಲ್ಲಿ ಸಂದೇಶ ಪತ್ರವನ್ನು ಹಾಕಿ ಅಬಕಾರಿ ಇಲಾಖೆ ಪೇದೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರದಹುಂಡಿಯಲ್ಲಿ ನಡೆದಿದೆ. 24 ವರ್ಷದ ಮಹೇಶ್ ಮೃತ ವ್ಯಕ್ತಿಯಾಗಿದ್ದಾನೆ.
ಅಬಕಾರಿ ಇಲಾಖೆಯಿಂದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಎಕ್ಸ್‌ಪೋರ್ಟ್ ಕಾರ್ಖಾನೆಯ ಮೇಲ್ವಿಚಾರಣೆಗೆ ಮಹೇಶ್‌ರನ್ನು ನೇಮಿಸಿದ್ದು, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಹೇಶ್ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ತನ್ನ ವಾಟ್ಸಪ್ ಡಿಪಿಯಲ್ಲಿ ಆತ್ಮಹತ್ಯೆ ಸಂದೇಶವನ್ನು ಬರೆದು ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ದಡದ ಮೇಲೆ ಮೊಬೈಲ್ ಇಟ್ಟು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗಿನ ಜಾವ ನಾಲೆಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲೆಗೆ ಹಾರುವ ಮುನ್ನ ಸಾವಿಗೆ ಹೆಂಡತಿ ಲಕ್ಷ್ಮಿ, ಅವರ ತಾಯಿ ಭಾರತಿ, ದೇವರಾಜು, ಹೆಂಡತಿಯ ಚಿಕ್ಕಪ್ಪ ಮಲ್ಲೇಶ್, ಆತನ ಹೆಂಡತಿ ರೇಖಾ, ನನಗೆ ಹುಡುಗಿ ತೋರಿಸಿದ ಬ್ರೋಕರ್ ಸಿದ್ದಪ್ಪ ಹಾಗೂ ಆತನ ಇಬ್ಬರು ಮಕ್ಕಳು ಕಾರಣರಾಗಿದ್ದಾರೆ ಎಂದು ಬರೆದಿದ್ದಾನೆ. ಜೊತೆಗೆ ನನ್ನ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಪ್ಪ-ಅಮ್ಮನಿಗೆ ಭಗವಂತ ನೀಡಲಿ. ನನ್ನ ತಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲಾ ಜವಾಬ್ದಾರಿಯನ್ನು ತಮ್ಮನಿಗೆ ವಹಿಸಿ ಹೋಗುತ್ತಿದ್ದೇನೆ. ಎಲ್ಲರೂ ಕ್ಷಮಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.